ಗುಜರಾತ್: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಹಿರಿಯ ನಟ ಅನಂತ್ ನಾಗ್, ತಮ್ಮ ಐದು ದಶಕಗಳಿಗೂ ಹೆಚ್ಚು ಕಾಲದ ಸಿನಿ ಪಯಣದಲ್ಲಿ ಕೈಜೋಡಿಸಿದ ಪ್ರತಿಯೊಬ್ಬರಿಗೂ ಈ ಗೌರವ ಸಲ್ಲುತ್ತದೆ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಸಾಮಾನ್ಯವಾಗಿ ಇಂತಹ ದೊಡ್ಡ ಸಮಾರಂಭಗಳಲ್ಲಿ ಭಾಗವಹಿಸುವ ಅಭ್ಯಾಸ ತಮಗಿಲ್ಲ. ಆದರೆ ಇಂದು ಈ ವೇದಿಕೆಯಲ್ಲಿ ಎಲ್ಲರೊಂದಿಗೆ ಪ್ರಶಸ್ತಿ ಸ್ವೀಕರಿಸುತ್ತಿರುವುದು ಅಪಾರ ಸಂತಸ ತಂದಿದೆ ಎಂದು ಹೇಳಿದರು.
ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಅನಂತ್ ನಾಗ್, 12ನೇ ವಯಸ್ಸಿನವರೆಗೂ ಆಶ್ರಮ ಹಾಗೂ ಮಠದ ವಾತಾವರಣದಲ್ಲಿ ಬೆಳೆದಿದ್ದಾಗಿ ತಿಳಿಸಿದರು. ಬಳಿಕ ಮುಂಬೈಗೆ ತೆರಳಿದ ಸಂದರ್ಭದಲ್ಲಿ ಬಂಗಾಳದ ಕವಿ ಚೈತನ್ಯ ಮಹಾಪ್ರಭು ಅವರ ಕುರಿತ ನಾಟಕದಲ್ಲಿ ಅಭಿನಯಿಸುವ ಅವಕಾಶ ದೊರಕಿತು. ಅದೇ ತಮ್ಮ ನಟನಾ ಪಯಣಕ್ಕೆ ಮೊದಲ ಹೆಜ್ಜೆಯಾಯಿತು ಎಂದು ಅವರು ಸ್ಮರಿಸಿದರು. ಆಗ ಮುಂದೆ ಇದೇ ಕ್ಷೇತ್ರದಲ್ಲಿ ಇಷ್ಟು ವರ್ಷಗಳ ಕಾಲ ಸಾಗುತ್ತೇನೆ ಎಂಬ ಯಾವುದೇ ಕಲ್ಪನೆ ಇರಲಿಲ್ಲ. ಹೀಗಾಗಿ ಅದನ್ನು ಆರಂಭದಲ್ಲೇ ವೃತ್ತಿ ಎಂದು ಪರಿಗಣಿಸಿರಲಿಲ್ಲ ಎಂದು ಹೇಳಿದರು.
ತಮ್ಮ ದೀರ್ಘ ಸಿನಿ ಪಯಣದ ಗೌರವವನ್ನು ವೈಯಕ್ತಿಕ ಸಾಧನೆ ಎಂದು ಪರಿಗಣಿಸದ ಅನಂತ್ ನಾಗ್, ನಿರ್ಮಾಪಕರು, ನಿರ್ದೇಶಕರು, ಸಂಭಾಷಣೆಕಾರರು, ಗೀತರಚನೆಕಾರರು, ಗಾಯಕರು, ಮೇಕಪ್ ಕಲಾವಿದರು, ಪ್ರೊಡಕ್ಷನ್ ಸಿಬ್ಬಂದಿ, ಸಹಾಯಕರು ಹಾಗೂ ಸಹಾಯಕ ನಿರ್ದೇಶಕರು ಸೇರಿದಂತೆ ತೆರೆಮರೆಯಲ್ಲಿ ದುಡಿದ ಪ್ರತಿಯೊಬ್ಬರಿಗೂ ಪ್ರಶಸ್ತಿಯ ಶ್ರೇಯಸ್ಸು ಸಲ್ಲಬೇಕು ಎಂದು ಹೇಳಿದರು.
ಕಳೆದ ಐದು ದಶಕಗಳಲ್ಲಿ ವಿವಿಧ ಭಾರತೀಯ ಭಾಷೆಗಳ ಚಿತ್ರರಂಗದಿಂದಲೂ ತಮಗೆ ಅವಕಾಶಗಳು ಬಂದಿದ್ದವು. ಕರ್ನಾಟಕದ ಕಲಾವಿದನಾಗಿ ಇತರ ಭಾಷೆಗಳ ಚಿತ್ರರಂಗಕ್ಕೆ ತೆರಳಿದಾಗ ಅಲ್ಲಿಯೂ ತಮ್ಮ ಪ್ರತಿಭೆಗೆ ಪ್ರೋತ್ಸಾಹ ಮತ್ತು ಗೌರವ ದೊರೆತಿದೆ ಎಂದು ಅವರು ಹೇಳಿದರು. ಇದೇ ಕಾರಣದಿಂದ ಹಲವು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಲು ಸಾಧ್ಯವಾಯಿತು ಎಂದರು.
ಆದರೆ ತಮ್ಮ ಪ್ರತಿಭೆಯನ್ನು ಅರಳಿಸಲು ಅತ್ಯುತ್ತಮ ಅವಕಾಶಗಳು ಕನ್ನಡ ಚಿತ್ರರಂಗದಲ್ಲೇ ದೊರೆತಿವೆ ಎಂದು ಅನಂತ್ ನಾಗ್ ಅಭಿಪ್ರಾಯಪಟ್ಟರು. ಕರ್ನಾಟಕವೇ ತಮ್ಮ ಕರ್ಮಭೂಮಿ. ಕನ್ನಡದಲ್ಲಿ ದೊರೆತ ಪಾತ್ರಗಳು ಮತ್ತು ಅವಕಾಶಗಳು ತಮ್ಮ ನಟನಾ ಬದುಕಿಗೆ ವಿಶೇಷ ಅರ್ಥ ನೀಡಿವೆ ಎಂದು ಅವರು ಹೇಳಿದರು.
‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸೇರಿದಂತೆ ಕನ್ನಡದಲ್ಲಿ ತಾವು ಅಭಿನಯಿಸಿದ ಚಿತ್ರಗಳನ್ನು ಸ್ಮರಿಸಿದ ಅವರು, ಕನ್ನಡ ಚಿತ್ರರಂಗದೊಂದಿಗೆ ಹೊಂದಿರುವ ನಂಟಿನ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಕಳೆದ ವರ್ಷ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ್ದನ್ನು ನೆನಪಿಸಿಕೊಂಡ ಅನಂತ್ ನಾಗ್, ಇದೀಗ ದೇಶದ ಅತ್ಯುನ್ನತ ಚಲನಚಿತ್ರ ಗೌರವಗಳಲ್ಲಿ ಒಂದಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸುತ್ತಿರುವುದು ತಮ್ಮ ಪಾಲಿಗೆ ಮತ್ತೊಂದು ಹೆಮ್ಮೆಯ ಕ್ಷಣ ಎಂದು ಹೇಳಿದರು.






















