SK Home Ad
Home ಸಿನಿ ಮಿಲ್ಸ್ ಸಿಎಂ ಡಿಕೆಶಿ ಅಧಿಕೃತ ನಿವಾಸವಾದ ಐತಿಹಾಸಿಕ ಕುಮಾರ ಕೃಪಾ: ನವೀಕೃತ ಬಂಗಲೆಗೆ ‘ಗಂಗಾ’ ಎಂದು ಮರುನಾಮಕರಣ!

ಸಿಎಂ ಡಿಕೆಶಿ ಅಧಿಕೃತ ನಿವಾಸವಾದ ಐತಿಹಾಸಿಕ ಕುಮಾರ ಕೃಪಾ: ನವೀಕೃತ ಬಂಗಲೆಗೆ ‘ಗಂಗಾ’ ಎಂದು ಮರುನಾಮಕರಣ!

0
35

ಬೆಂಗಳೂರು: ರಾಜ್ಯ ರಾಜಕಾರಣದ ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದ್ದ ಬೆಂಗಳೂರಿನ ಪ್ರತಿಷ್ಠಿತ ‘ಕುಮಾರ ಕೃಪಾ’ ಅತಿಥಿಗೃಹವೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ನಿವಾಸವಾಗಿ ಸಜ್ಜುಗೊಂಡಿದೆ. ಕಳೆದ ಹಲವು ತಿಂಗಳುಗಳಿಂದ ವಾಸ್ತು ಪ್ರಕಾರ ಸಂಪೂರ್ಣ ನವೀಕರಣಗೊಂಡಿರುವ ಈ ಭವನಕ್ಕೆ ಅಧಿಕೃತವಾಗಿ ‘ಗಂಗಾ’ ಎಂದು ಮರುನಾಮಕರಣ ಮಾಡಲಾಗಿದ್ದು, ಮುಂಭಾಗದಲ್ಲಿ ನೂತನ ನಾಮಫಲಕವನ್ನೂ ಅಳವಡಿಸಲಾಗಿದೆ.

ಕಾರ್ತಿಕ ಸೋಮವಾರದ ಶುಭ ಮುಹೂರ್ತದಲ್ಲಿ ಮುಖ್ಯಮಂತ್ರಿಗಳ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಸಾಂಪ್ರದಾಯಿಕ ಗೃಹಪ್ರವೇಶ ನೆರವೇರಲಿದೆ. ಇದರ ಪೂರ್ವಭಾವಿಯಾಗಿ ಭಾನುವಾರ ರಾತ್ರಿಯಿಂದಲೇ ಖ್ಯಾತ ಪುರೋಹಿತರ ನೇತೃತ್ವದಲ್ಲಿ ಗಣಪತಿ ಹೋಮ, ವಾಸ್ತು ಶಾಂತಿ ಸೇರಿದಂತೆ ವಿವಿಧ ಶಾಸ್ತ್ರೋಕ್ತ ಹೋಮ-ಹವನಗಳು ಜರುಗಿವೆ. ಮುಖ್ಯಮಂತ್ರಿಗಳ ಪತ್ನಿ, ಕುಟುಂಬದ ಸದಸ್ಯರು ಹಾಗೂ ಆಪ್ತರು ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡಿದ್ದು, ಬೆಳಿಗ್ಗೆ 10 ಗಂಟೆಗೆ ಮುಖ್ಯ ಗೃಹಪ್ರವೇಶ ಪೂಜಾ ಕಾರ್ಯಗಳು ನಡೆಯಲಿವೆ.

ಪೂಜಾ ಕಾರ್ಯಕ್ರಮಗಳು ಅತ್ಯಂತ ಖಾಸಗಿಯಾಗಿ ನಡೆಯುತ್ತಿರುವುದರಿಂದ ನವೀಕೃತ ನಿವಾಸದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಗೇಟ್ ಬಳಿಯೇ ಬ್ಯಾರಿಕೇಡ್ ಹಾಕಲಾಗಿದ್ದು, ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳ ಪ್ರವೇಶಕ್ಕೂ ನಿರ್ಬಂಧ ವಿಧಿಸಲಾಗಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಕುಮಾರ ಕೃಪಾ ಗೆಸ್ಟ್‌ಹೌಸ್‌ಗೆ ‘ಗಂಗಾ’ ಎಂದು ನಾಮಕರಣ ಮಾಡಿ ಮುಖ್ಯಮಂತ್ರಿಗಳ ಅಧಿಕೃತ ಗೃಹವನ್ನಾಗಿಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.