ಮುಂಬೈ: ಬಾಲಿವುಡ್‌ನ ಖ್ಯಾತ ನಟ ರಣದೀಪ್ ಹೂಡಾ ಹಾಗೂ ಪತ್ನಿ ನಟಿ ಲಿನ್ ಲೈಶ್ರಾಮ್ ಮನೆಯಲ್ಲಿ ಈಗ ಹಬ್ಬದ ವಾತಾವರಣ ಮನೆಮಾಡಿದೆ. ಈ ದಂಪತಿಗೆ ಸುಂದರವಾದ ಹೆಣ್ಣು ಮಗು ಜನ್ಮನೀಡಿದ್ದಾರೆ. ಈಗ ಹೂಡಾ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಹಾಗೇ ಸಂತಸದ ಸುದ್ದಿಯನ್ನು ನಟ ರಣದೀಪ್ ಹೂಡಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಅಭಿಮಾನಿಗಳೊಂದಿಗೆ ಈ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ತಂದೆಯ ಹುಟ್ಟುಹಬ್ಬದಂದೇ ಮಗಳ ಜನನ:
“ಅಪರೂಪದ ಕಾಕತಾಳೀಯ” ಹೌದು, ರಣದೀಪ್ ಹೂಡಾ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಒಂದು ವಿಶೇಷವಾದ ಅಂಶವನ್ನು ಉಲ್ಲೇಖಿಸಿದ್ದಾರೆ. ಅದೆನೆಂದ್ರೆ ರಣದೀಪ್ ತಂದೆಯ ಹುಟ್ಟುಹಬ್ಬದ ದಿನವೇ ಮಗಳೂ ಜನಿಸಿದ್ದಾಳೆ. ಇದರ ಕುರಿತು ಭಾವನಾತ್ಮಕವಾಗಿ ಬರೆದುಕೊಂಡಿರುವ ರಣದೀಪ್, “ನನ್ನ ತಂದೆ ಹಾಗೂ ಮಗಳ ಹುಟ್ಟುಹಬ್ಬ ಒಂದೇ ದಿನ ಇರುವುದು ಅತ್ಯಂತ ಖುಷಿಯ ಸಂಗತಿ ಎಂದಿದ್ದಾರೆ. ಈ ಸುಂದರ ಕಾಣಿಕೆಗಾಗಿ ಲೈಶ್ರಾಮ್‌ಗೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಹೇಳಿದ್ದಾರೆ. ಈ ಮೂಲಕ ಅಜ್ಜ ಮತ್ತು ಮೊಮ್ಮಗಳ ಜನ್ಮದಿನದ ಸಂಭ್ರಮವು ಇನ್ನುಮುಂದೆ ಪ್ರತಿ ವರ್ಷವೂ ಹೂಡಾ ಕುಟುಂಬದಲ್ಲಿ ಡಬಲ್ ಧಮಾಕಾ ಸೃಷ್ಟಿಸಲಿದೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ.
ಸಾಂಪ್ರದಾಯಿಕ ವಿವಾಹ ಮತ್ತು ಜೀವನ ಪಯಣ:
ರಣದೀಪ್ ಹೂಡಾ ಮತ್ತು ಮಣಿಪುರ ಮೂಲದ ಮಾಡೆಲ್ ಹಾಗೂ ಉದ್ಯಮಿ ಲಿನ್ ಲೈಶ್ರಾಮ್ 2023ರ ನವೆಂಬರ್‌ನಲ್ಲಿ ವಿವಾಹವಾಗಿದ್ದರು. ಮಣಿಪುರದ ಇಂಫಾಲದಲ್ಲಿ ನಡೆದ ಅದ್ದೂರಿ ಮದುವೆಯು ಸಂಪೂರ್ಣವಾಗಿ ‘ಮೈತೆಯಿ’ ಸಾಂಪ್ರದಾಯದಂತೆ ಜರುಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆದಿತ್ತು. ಸರಳತೆ ಹಾಗೂ ಸಾಂಸ್ಕೃತಿಕ ಸೊಗಡಿನಿಂದ ಕೂಡಿದ್ದ ಮದುವೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಮಗುವಿನ ಆಗಮನವಾಗಿರುವುದು ದಂಪತಿಗಳ ಜೀವನದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ.
ವೃತ್ತಿಜೀವನದ ಮೈಲಿಗಲ್ಲುಗಳು:
ರಣದೀಪ್ ಹೂಡಾ ಕೇವಲ ಗ್ಲಾಮರ್ ಮಾತ್ರವಲ್ಲದೆ, ಕಠಿಣ ಪರಿಶ್ರಮದ ಪಾತ್ರಗಳಿಗೆ ಹೆಸರಾದವರು. ‘ಸರಬ್‌ಜಿತ್’, ‘ಹೈವೇ’, ‘ರಂಗ್ ರಸಿಯ’ ಚಿತ್ರಗಳ ಮೂಲಕ ತಮ್ಮ ನಟನಾ ಕೌಶಲ ಮೆರೆದಿದ್ದಾರೆ. ಇತ್ತೀಚೆಗೆ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಚಿತ್ರಕ್ಕಾಗಿ ದೊಡ್ಡ ಮಟ್ಟದ ಶಾರೀರಿಕ ಬದಲಾವಣೆ ಮಾಡಿಕೊಂಡು ಸುದ್ದಿಯಾಗಿದ್ದರು. ಕ್ರಿಸ್ ಹೆಮ್ಸ್‌ವರ್ತ್ ಅಭಿನಯದ ‘ಎಕ್ಸ್‌ಟ್ರಾಕ್ಷನ್’ ಮೂಲಕ ಹಾಲಿವುಡ್‌ಗೂ ಕಾಲಿಟ್ಟಿದ್ದಾರೆ.
ಲಿನ್ ಲೈಶ್ರಾಮ್:
ಮಣಿಪುರದ ಪ್ರತಿಭೆಯಾದ ಲಿನ್ ಲೈಶ್ರಾಮ್ ಪ್ರಿಯಾಂಕಾ ಚೋಪ್ರಾ ಅಭಿನಯದ ‘ಮೇರಿ ಕೋಮ್’ ಚಿತ್ರದ ಮೂಲಕ ಗುರುತಿಸಿಕೊಂಡರು. ನಂತರ ‘ರಂಗೂನ್’, ‘ಜಾನೆ ಜಾನ್’ ಹಾಗೂ ‘ಉಮ್ಮಿಕಾ’ ಅಂತಹ ವೈವಿಧ್ಯಮಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಸದ್ಯ ಸಿನಿಮಾ ತಾರೆಯರು ಹಾಗೂ ಅಭಿಮಾನಿಗಳು ಈ ದಂಪತಿಗೆ ಮತ್ತು ನವಜಾತ ಶಿಶುವಿಗೆ ಶುಭ ಹಾರೈಕೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.























