SK Home Ad
Home ಕೃಷಿ/ವಾಣಿಜ್ಯ 🌾 ಶೀಗಿ ಹುಣ್ಣಿಮೆಗೆ ಭೂ ತಾಯಿಯ ಸೀಮಂತದ ಸಂಭ್ರಮ

🌾 ಶೀಗಿ ಹುಣ್ಣಿಮೆಗೆ ಭೂ ತಾಯಿಯ ಸೀಮಂತದ ಸಂಭ್ರಮ

0
35
ಶೀಗಿ ಹುಣ್ಣಿಮೆ : ಮುಂಗಾರು ಸಂಕಷ್ಟದ ನಡುವೆ ಹಿಂಗಾರು ನಿರೀಕ್ಷೆ; ಭೂ ತಾಯಿಯ ಪೂಜೆಯಲ್ಲಿ ರೈತರು

ದಸರಾ ಮುಗಿದ ಬೆನ್ನಲ್ಲೇ ರೈತರ ಹೊಲಗಳಲ್ಲಿ ಹಬ್ಬದ ಸಡಗರ -ನಾಡಿನಲ್ಲಿ ಶೀಗಿ ಹುಣ್ಣಿಮೆ ದಿನದ ರೈತರ ಸಂಭ್ರಮದ ವಿಶೇಷ ವರದಿ

✍ ಲೇಖನ : ಬಸವರಾಜ ಯರಿಬೈಲ್

ಹುಬ್ಬಳ್ಳಿ : ದಸರಾ ಹಬ್ಬದ ಸಂಭ್ರಮ ಮುಗಿಯುತ್ತಿದ್ದಂತೆ ಉತ್ತರ ಕರ್ನಾಟಕದ ರೈತಾಪಿ ಕುಟುಂಬಗಳಲ್ಲಿ ಶೀಗಿ ಹುಣ್ಣಿಮೆಯ ಹಬ್ಬದ ಸಡಗರ ಮನೆ ಮಾಡುತ್ತದೆ. ಹೊಲವೇ ಬದುಕಿನ ಆಧಾರ, ಭೂಮಿಯೇ ಅನ್ನದಾತೆ ಎಂಬ ನಂಬಿಕೆಯೊಂದಿಗೆ ಆಚರಿಸಲಾಗುವ ಈ ಹಬ್ಬವನ್ನು ‘ಭೂ ತಾಯಿಯ ಸೀಮಂತದ ಸಂಭ್ರಮ’ ಎಂದೇ ಕರೆಯಲಾಗುತ್ತದೆ. ಹೊಲಕ್ಕೆ ತೆರಳಿ ಭೂ ತಾಯಿಗೆ ಪೂಜೆ ಸಲ್ಲಿಸುವುದು, ವಿಶೇಷ ನೈವೇದ್ಯ ಅರ್ಪಿಸುವುದು ಹಾಗೂ ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದೇ ಈ ಹಬ್ಬದ ವಿಶೇಷತೆ.

ಭೂ ತಾಯಿಗೆ ಕೃತಜ್ಞತೆ ಸಲ್ಲಿಸುವ ಹಬ್ಬ : ಶೀಗಿ ಹುಣ್ಣಿಮೆಯು ಕರ್ನಾಟಕದ ಕೃಷಿ ಪ್ರಧಾನ ಪ್ರದೇಶಗಳಲ್ಲಿ, ಅದರಲ್ಲೂ ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ವಿಶೇಷ ಮಹತ್ವ ಹೊಂದಿದೆ. ಆಶ್ವಯುಜ ಮಾಸದ ಹುಣ್ಣಿಮೆಯ ಸಂದರ್ಭದಲ್ಲಿ ಆಚರಿಸಲಾಗುವ ಈ ಹಬ್ಬವು ಭೂಮಿಯ ಫಲವತ್ತತೆ, ಕೃಷಿ ಬದುಕು ಮತ್ತು ಪ್ರಕೃತಿಯೊಂದಿಗಿನ ಮಾನವನ ಸಂಬಂಧವನ್ನು ಪ್ರತಿಬಿಂಬಿಸುತ್ತದೆ.

ತಲೆಮಾರುಗಳಿಂದ ನಡೆದು ಬಂದ ಕೃಷಿ ಸಂಪ್ರದಾಯವಾಗಿ ಇದು ಜನಜೀವನದಲ್ಲಿ ಬೇರೂರಿದೆ. ಭೂಮಿ ಮನುಷ್ಯನಿಗೆ ಅನ್ನ, ನೀರು ಹಾಗೂ ಬದುಕಿಗೆ ಅಗತ್ಯವಾದ ಸಂಪನ್ಮೂಲಗಳನ್ನು ಒದಗಿಸುವ ತಾಯಿಯ ಸ್ವರೂಪ ಎಂಬ ನಂಬಿಕೆ ಈ ಹಬ್ಬದ ಹಿಂದಿದೆ.

ಬೆಳೆ ಬೆಳೆಯಲು ಅವಕಾಶ ನೀಡಿದ ಭೂಮಿಗೆ ಕೃತಜ್ಞತೆ ಸಲ್ಲಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿಯೂ ಉತ್ತಮ ಮಳೆ, ಸಮೃದ್ಧ ಬೆಳೆ ಮತ್ತು ರೈತ ಕುಟುಂಬಗಳ ಸುಖ-ಸಮೃದ್ಧಿಗಾಗಿ ಪ್ರಾರ್ಥಿಸಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಶೀಗಿ ಹುಣ್ಣಿಮೆಯಂದು ರೈತರು ಕುಟುಂಬ ಸಮೇತ ಹೊಲಗಳಿಗೆ ತೆರಳಿ ಪೂಜೆ ಸಲ್ಲಿಸುವ ಸಂಪ್ರದಾಯದ ಮೊದಲಿನಿಂದಲೂ ನಡೆದುಕೊಂಡು ಬಂದಿದೆ.

ಚಕ್ಕಡಿ, ಟ್ರ್ಯಾಕ್ಟರ್‌ಗಳಲ್ಲಿ ಹೊಲದತ್ತ ಕುಟುಂಬಗಳ ಪಯಣ : ಹಬ್ಬದ ದಿನ ರೈತ ಕುಟುಂಬಗಳು ಬೆಳಗ್ಗಿನಿಂದಲೇ ವಿಶೇಷ ಅಡುಗೆ ತಯಾರಿಸುವಲ್ಲಿ ನಿರತವಾಗುತ್ತವೆ. ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಕಡುಬು, ಬುತ್ತಿ, ವಿವಿಧ ಬಗೆಯ ಚಟ್ನಿ, ಪಲ್ಯ, ಹಪ್ಪಳ, ಸಂಡಿಗೆ, ಭಜ್ಜಿ ಹಾಗೂ ಸಿಹಿ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು ಚಕ್ಕಡಿ, ಟ್ರ್ಯಾಕ್ಟರ್‌, ಬೈಕ್‌ಗಳ ಮೂಲಕ ಅಥವಾ ಕಾಲ್ನಡಿಗೆಯಲ್ಲಿ ಜಮೀನುಗಳತ್ತ ತೆರಳುತ್ತಾರೆ.

ಚರಗ ಚೆಲ್ಲುವುದು: ಹೊಲದಲ್ಲಿ ಸ್ವಚ್ಛಗೊಳಿಸಿದ ಸ್ಥಳದಲ್ಲಿ ಭೂ ತಾಯಿಗೆ ಪೂಜೆ ಸಲ್ಲಿಸಿ, ಅರಿಶಿನ, ಕುಂಕುಮ, ಹೂವು ಹಾಗೂ ಅಕ್ಷತೆಗಳಿಂದ ಆರಾಧಿಸಲಾಗುತ್ತದೆ. ಸಂಪ್ರದಾಯಕ್ಕೆ ಅನುಗುಣವಾಗಿ ನೈವೇದ್ಯ ಅರ್ಪಿಸಿ, ಕುಟುಂಬದ ಒಳಿತಿಗಾಗಿ ಪ್ರಾರ್ಥಿಸುತ್ತಾರೆ. ಹಬ್ಬದ ದಿನದಂದು ತಯಾರಿಸಿದ ವಿವಿಧ ಬಗೆಯ ಅಡುಗೆಗಳನ್ನು ಹೊಲದ ತುಂಬೆಲ್ಲಾ “ಚರಗೋ ಚರಗ… ಚೆಲ್ಲಾಡೋ ಚರಗ…” ಎಂದು ಕೂಗುತ್ತಾ ಚೆಲ್ಲುತ್ತಾರೆ. ಈ ಚರಗವು ಭೂಮಿಗೆ ಸಮೃದ್ಧಿ ನೀಡುತ್ತದೆ ಮತ್ತು ಕೀಟಬಾಧೆಯಿಂದ ಬೆಳೆಯನ್ನು ರಕ್ಷಿಸುತ್ತದೆ ಎಂಬುದು ರೈತರ ನಂಬಿಕೆ.

ಬಳಿಕ ಮನೆಯ ಹಿರಿಯರು, ಮಕ್ಕಳು ಸೇರಿದಂತೆ ಎಲ್ಲರೂ ಒಟ್ಟಿಗೆ ಕುಳಿತು ಊಟ ಸವಿಯುತ್ತಾರೆ. ಹೊಲದ ಮಧ್ಯೆ ನಡೆಯುವ ಈ ಸಾಮೂಹಿಕ ಭೋಜನವು ಕುಟುಂಬದ ಬಾಂಧವ್ಯವನ್ನು ಗಟ್ಟಿಗೊಳಿಸುವುದರ ಜೊತೆಗೆ ಮಕ್ಕಳಿಗೆ ಕೃಷಿ ಬದುಕಿನ ಮಹತ್ವವನ್ನು ಪರಿಚಯಿಸುತ್ತದೆ.

ಕೃಷಿ ಬದುಕಿನ ಆಶಾವಾದಕ್ಕೆ ಸಂಕೇತ – ಶೀಗಿ ಹುಣ್ಣಿಮೆ ಕೇವಲ ಧಾರ್ಮಿಕ ಆಚರಣೆಯಲ್ಲ: ಕೃಷಿ, ಕುಟುಂಬ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ಸಾರುವ ಹಬ್ಬವೂ ಹೌದು. ಮುಂಗಾರು ಹಂಗಾಮಿನ ನಂತರ ಹಿಂಗಾರು ಕೃಷಿ ಚಟುವಟಿಕೆಗಳು ಆರಂಭವಾಗುವ ಸಂದರ್ಭದಲ್ಲಿ ರೈತರು ಮುಂದಿನ ಬೆಳೆಗಾಗಿ ಭೂಮಿ ಮತ್ತು ಮಳೆಯ ಆಶೀರ್ವಾದವನ್ನು ಕೋರುತ್ತಾರೆ.

ಈ ವರ್ಷವೂ ಮಳೆಯ ಕೊರತೆ ಹಾಗೂ ಬೆಳೆ ಹಾನಿಯಂತಹ ಸವಾಲುಗಳನ್ನು ಎದುರಿಸಿರುವ ರೈತ ಕುಟುಂಬಗಳಿಗೆ ಹಿಂಗಾರು ಹಂಗಾಮಿನ ಬಗ್ಗೆ ಉತ್ತಮ ನಿರೀಕ್ಷೆಯಿದೆ. ಶೀಗಿ ಹುಣ್ಣಿಮೆಯಂದು ಭೂ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ಉತ್ತಮ ಮಳೆ, ಸಮೃದ್ಧ ಇಳುವರಿ ಹಾಗೂ ಕೃಷಿ ವೆಚ್ಚಕ್ಕೆ ತಕ್ಕ ಆದಾಯ ದೊರೆಯಲಿ ಎಂದು ಪ್ರಾರ್ಥಿಸುತ್ತಾರೆ.

ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಹಬ್ಬ : ಇಂದಿನ ಆಧುನಿಕ ಕೃಷಿ ಪದ್ಧತಿಗಳ ನಡುವೆಯೂ ಶೀಗಿ ಹುಣ್ಣಿಮೆಯಂತಹ ಹಬ್ಬಗಳು ಗ್ರಾಮೀಣ ಸಂಸ್ಕೃತಿಯ ಜೀವಂತಿಕೆಯನ್ನು ಉಳಿಸಿವೆ. ನಗರಗಳಲ್ಲಿ ನೆಲೆಸಿರುವ ಕುಟುಂಬಗಳೂ ಈ ಸಂದರ್ಭದಲ್ಲಿ ತಮ್ಮ ಊರು ಮತ್ತು ಹೊಲಗಳತ್ತ ಮರಳುವುದರಿಂದ ಹಬ್ಬವು ಕುಟುಂಬದ ಒಗ್ಗಟ್ಟಿನ ಸಂದರ್ಭವಾಗುತ್ತದೆ. ಮಕ್ಕಳು ಹೊಲದ ಪರಿಸರವನ್ನು ಅರಿಯಲು, ಆಹಾರ ಉತ್ಪಾದನೆಯ ಹಿಂದಿರುವ ರೈತರ ಪರಿಶ್ರಮವನ್ನು ತಿಳಿಯಲು ಇದು ಉತ್ತಮ ಅವಕಾಶ.

ಭೂಮಿಯನ್ನು ಗೌರವಿಸುವುದು, ಅನ್ನದಾತನ ಶ್ರಮವನ್ನು ಸ್ಮರಿಸುವುದು ಮತ್ತು ಪ್ರಕೃತಿಯೊಂದಿಗೆ ಸಮತೋಲನದ ಬದುಕು ನಡೆಸುವುದು ಶೀಗಿ ಹುಣ್ಣಿಮೆಯ ಪ್ರಮುಖ ಸಂದೇಶವಾಗಿದೆ. ಭೂ ತಾಯಿಯ ಸೀಮಂತದ ಈ ಸಂಭ್ರಮವು ಪ್ರತಿಯೊಬ್ಬ ರೈತನ ಮನೆಯಲ್ಲೂ ಸಮೃದ್ಧಿ, ಸಂತೋಷ ಮತ್ತು ಹೊಸ ಭರವಸೆಯನ್ನು ತರಲಿ ಎಂಬುದು ಎಲ್ಲರ ಆಶಯ.