SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್ ಮನೆಯಲ್ಲಿ ಗಗನ್ ಚಿನ್ನಪ್ಪ ಡಬಲ್ ಗೇಮ್: ತಾಂಡವ್-ಸೌಂದರ್ಯ ನಡುವೆ ಸಿಕ್ಕು ಪರದಾಟ!

ಬಿಗ್ ಬಾಸ್ ಮನೆಯಲ್ಲಿ ಗಗನ್ ಚಿನ್ನಪ್ಪ ಡಬಲ್ ಗೇಮ್: ತಾಂಡವ್-ಸೌಂದರ್ಯ ನಡುವೆ ಸಿಕ್ಕು ಪರದಾಟ!

0
9

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಟಾಸ್ಕ್ ಆಟಕ್ಕಿಂತ ಹೆಚ್ಚಾಗಿ ಗಗನ್ ಚಿನ್ನಪ್ಪ ಗೊಂದಲದ ನಿರ್ಧಾರಗಳು ಮತ್ತು ದ್ವಂದ್ವ ನಿಲುವು ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಆರಂಭದಲ್ಲಿ ತಾಂಡವ್ ರಾಮ್ ಜೊತೆ ಅತಿ ಹೆಚ್ಚು ಒಡನಾಟ ಹೊಂದಿದ್ದ ಗಗನ್, ಆ ಬಳಿಕ ಸೌಂದರ್ಯ ಶೆಟ್ಟಿ ಜತೆಗೂ ಹತ್ತಿರವಾಗಿದ್ದರು. ಆದ್ರೆ ಈ ವಾರದ ‘ಉತ್ತಮ’ ಮೆಡಲ್ ಹಂಚಿಕೆ ಪ್ರಕ್ರಿಯೆಯಲ್ಲಿ ಇಬ್ಬರನ್ನೂ ನಿಭಾಯಿಸಲು ಹೋಗಿ ಗಗನ್ ಸ್ವತಃ ಸಿಕ್ಕಿಹಾಕಿಕೊಂಡಿದ್ದಾರೆ.

ಲೂಟಿಕಾರರ ತಂಡದ ಹೈಸ್ಟ್ ಟಾಸ್ಕ್ ಮುಗಿದ ಬಳಿಕ ಅತ್ಯುತ್ತಮ ಪ್ರದರ್ಶನ ನೀಡಿದವರ ಆಯ್ಕೆ ಪ್ರಕ್ರಿಯೆ ನಡೆಯಿತು. ಈಗಾಗಲೇ ಸೌಂದರ್ಯ ಶೆಟ್ಟಿಗೆ 5 ಹಾಗೂ ತಾಂಡವ್‌ಗೆ 3 ಮತಗಳು ಬಂದಿದ್ದವು. ಅಂತಿಮ ನಿರ್ಧಾರ ಕೈಗೊಳ್ಳಬೇಕಿದ್ದ ತಂಡದ ನಾಯಕ ಗಗನ್ ಚಿನ್ನಪ್ಪ, ತಾಂಡವ್ ಹೆಸರನ್ನು ಪ್ರಸ್ತಾಪಿಸಿ, ತಕ್ಷಣವೇ ಮಾತನ್ನು ಬದಲಿಸಿ ಸೌಂದರ್ಯ ಶೆಟ್ಟಿಗೆ ಮೆಡಲ್ ನೀಡುವುದಾಗಿ ಘೋಷಿಸಿದರು. ಇದು ಮನೆಯಲ್ಲಿ ತೀವ್ರ ಗೊಂದಲ ಹಾಗೂ ವಾಗ್ವಾದಕ್ಕೆ ಕಾರಣವಾಯಿತು.

ಗಗನ್ ಈ ಗೊಂದಲದ ನಿರ್ಧಾರವನ್ನು ಪ್ರಶಾಂತ್, ಯಶಸ್ ಮತ್ತು ಆಸಿಯಾ ತೀವ್ರವಾಗಿ ಪ್ರಶ್ನಿಸಿದರು. ತಾಂಡವ್ ಬಳಿ ಒಂದು ಮಾತು, ಸೌಂದರ್ಯ ಬಳಿ ಮತ್ತೊಂದು ಮಾತು ಆಡಿದ ಗಗನ್, ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾದರು. ಜಗದೀಶ್ ಮತ್ತು ಕಿರಣ್ ಮುಂತಾದ ಸ್ಪರ್ಧಿಗಳು, “ಎರಡೂ ಕಡೆ ಪೇಂಟ್ ಹಚ್ಚುವುದು ಸರಿಯಲ್ಲ, ಇದು ಬಕೆಟ್ ರಾಜಕೀಯ” ಎಂದು ಗಗನ್ ವಿರುದ್ಧ ನೇರ ವಾಗ್ದಾಳಿ ನಡೆಸಿದರು.

ತಮ್ಮ ವೋಟ್ ಯಾರಿಗೆ ಎಂದು ತಾಂಡವ್ ನೇರವಾಗಿ ಪ್ರಶ್ನಿಸಿದಾಗ, ಪ್ಲೇಟ್ ಬದಲಿಸಿದ ಗಗನ್ ಗಲಿಬಿಲಿಗೊಂಡರು. ಯಾರೊಬ್ಬರಿಗೂ ಬೇಸರ ಮಾಡಬಾರದು ಎಂಬ ಕಾರಣಕ್ಕೆ ತಾನು ಹೀಗೆ ಮಾಡಿದೆ ಎಂದು ಇಬ್ಬರ ಬಳಿಯೂ ಗಗನ್ ಕ್ಷಮೆಯಾಚಿಸಿ ಸಮಜಾಯಿಷಿ ನೀಡಲು ಪ್ರಯತ್ನಿಸಿದರು. ಆದ್ರೆ ಗಗನ್ ಈ ಅಸ್ಪಷ್ಟ ನಿಲುವು ಬಿಗ್ ಬಾಸ್ ಮನೆಯಲ್ಲಿ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದ್ದು, ಹೊಸ ಬಿರುಕಿಗೆ ಕಾರಣವಾಗಿದೆ.