‘ವೋಕಲ್ ಫಾರ್ ಲೋಕಲ್’ಗೆ ಜಾಗತಿಕ ಮನ್ನಣೆ: ಮಾಲ್ಡೀವ್ಸ್ ತಲುಪಿದ ಕಲಬುರಗಿ ತೊಗರಿ ಬೇಳೆ
ಬೆಂಗಳೂರು : ಕಲಬುರಗಿ ಜಿಲ್ಲೆಯ ಹೆಮ್ಮೆಯ ಕೃಷಿ ಉತ್ಪನ್ನವಾದ ತೊಗರಿ ಬೇಳೆ ಇದೀಗ ಮಾಲ್ಡೀವ್ಸ್ ದೇಶದ ಮಾರುಕಟ್ಟೆ ಪ್ರವೇಶಿಸಿದ್ದು, ಕರ್ನಾಟಕದ ರೈತರಿಗೆ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಹೊಸ ಅವಕಾಶ ತೆರೆದಿದೆ. ‘ವೋಕಲ್ ಫಾರ್ ಲೋಕಲ್’ ಅಭಿಯಾನವು ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ಕೊಂಡೊಯ್ಯುತ್ತಿರುವುದಕ್ಕೆ ಇದೊಂದು ಉತ್ತಮ ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದ 139ನೇ ಸಂಚಿಕೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಅವರು ಭಾನುವಾರ ಪ್ರಸಾರವಾದ ಕಾರ್ಯಕ್ರಮದಲ್ಲಿ, ದೇಶೀಯ ಉತ್ಪನ್ನಗಳಿಗೆ ಗ್ರಾಹಕರು ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಭಾರತೀಯ ರೈತರು ಮತ್ತು ಸ್ಥಳೀಯ ಉತ್ಪಾದಕರಿಗೆ ಹೊಸ ಮಾರುಕಟ್ಟೆಗಳು ತೆರೆದುಕೊಳ್ಳುತ್ತಿವೆ ಎಂದು ಹೇಳಿದರು. ಕರ್ನಾಟಕದ ಕಲಬುರಗಿ ತೊಗರಿ ಬೇಳೆ ಮಾಲ್ಡೀವ್ಸ್ಗೆ ರಫ್ತಾಗುತ್ತಿರುವುದನ್ನು ಉಲ್ಲೇಖಿಸಿದ ಅವರು, ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮನ್ನಣೆ ದೊರೆಯುತ್ತಿರುವುದನ್ನು ಒತ್ತಿಹೇಳಿದರು. ಬಿಹಾರದ ಪೂರ್ಣಿಯಾದ ಮಖಾನಾ ಗ್ರೀಸ್ ದೇಶಕ್ಕೂ ತಲುಪುತ್ತಿರುವುದನ್ನು ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು.
ರೈತರಿಗೆ ಶೇ.30ಕ್ಕೂ ಹೆಚ್ಚು ಹೆಚ್ಚುವರಿ ಬೆಲೆ : ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಪತ್ರಿಕಾ ಮಾಹಿತಿ ಪ್ರಕಾರ, ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA) ಸಹಕಾರದಲ್ಲಿ ಸೆಪ್ಟೆಂಬರ್ 24ರಂದು ಒಂದು ಮೆಟ್ರಿಕ್ ಟನ್ ಜಿಐ ಮಾನ್ಯತೆ ಪಡೆದ ಕಲಬುರಗಿ ತೊಗರಿ ಬೇಳೆಯನ್ನು ಮಾಲ್ಡೀವ್ಸ್ಗೆ ರಫ್ತು ಮಾಡಲು ಚಾಲನೆ ನೀಡಲಾಗಿತ್ತು. ಸಾಮಾನ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ತೊಗರಿ ಬೇಳೆಗೆ ಸುಮಾರು ₹60 ಬೆಲೆ ಇದ್ದರೆ, ರಫ್ತು ಆಧಾರಿತ ಮಾರಾಟ ವ್ಯವಸ್ಥೆಯಲ್ಲಿ ರೈತರಿಗೆ ಪ್ರತಿ ಕೆ.ಜಿಗೆ ₹82 ದೊರೆಯುತ್ತಿದೆ. ಇದು ಶೇ.30ಕ್ಕೂ ಹೆಚ್ಚು ಹೆಚ್ಚುವರಿ ಬೆಲೆ ಸಿಗುವ ಅವಕಾಶವಾಗಿದೆ.
ಕಲಬುರಗಿ ತೊಗರಿ ಬೇಳೆಗೆ 2019ರಲ್ಲಿ ಭೌಗೋಳಿಕ ಗುರುತಿನ (GI) ನೋಂದಣಿ ದೊರೆತಿದೆ. ವಿಶಿಷ್ಟ ರುಚಿ ಮತ್ತು ಗುಣಮಟ್ಟದಿಂದ ಗುರುತಿಸಿಕೊಂಡಿರುವ ಈ ಉತ್ಪನ್ನವು ಕಲ್ಯಾಣ ಕರ್ನಾಟಕದ ಕೃಷಿ ಆರ್ಥಿಕತೆಯಲ್ಲಿ ಪ್ರಮುಖ ಸ್ಥಾನ ಹೊಂದಿದೆ. ರಫ್ತು ಪ್ರಕ್ರಿಯೆಯಲ್ಲಿ ಮೈಸೂರು ಮೂಲದ ಸಂಸ್ಥೆಯು ರೈತ ಉತ್ಪಾದಕ ಸಂಸ್ಥೆ (FPO) ಆಧಾರಿತ ಬ್ರ್ಯಾಂಡ್ ಮೂಲಕ ಉತ್ಪನ್ನವನ್ನು ಸಾಗರ ಮಾರ್ಗವಾಗಿ ಮಾಲ್ಡೀವ್ಸ್ಗೆ ಕಳುಹಿಸುವ ವ್ಯವಸ್ಥೆ ಮಾಡಿದೆ.
ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯ ಅವಕಾಶ : ಕಲಬುರಗಿ ತೊಗರಿಯ ರಫ್ತು ರೈತರಿಗೆ ಉತ್ತಮ ಬೆಲೆ ದೊರಕಿಸುವುದರ ಜತೆಗೆ, ರೈತ ಉತ್ಪಾದಕ ಸಂಸ್ಥೆಗಳು ಅಂತರರಾಷ್ಟ್ರೀಯ ಮಾರುಕಟ್ಟೆ ಸಂಪರ್ಕ ಬೆಳೆಸಿಕೊಳ್ಳಲು ನೆರವಾಗಬಹುದು. ಮುಂದಿನ ದಿನಗಳಲ್ಲಿ ನಿಯಮಿತ ರಫ್ತು ವಹಿವಾಟು ರೂಪುಗೊಂಡರೆ ಉತ್ಪಾದಕರು, ಸಂಸ್ಕರಣಾ ಘಟಕಗಳು ಮತ್ತು ಕೃಷಿ ಮಾರುಕಟ್ಟೆ ವ್ಯವಸ್ಥೆಗೆ ಮತ್ತಷ್ಟು ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವ ಮೂಲಕ ರೈತರು, ಕುಶಲಕರ್ಮಿಗಳು ಹಾಗೂ ಸಣ್ಣ ಉತ್ಪಾದಕರನ್ನು ಬೆಂಬಲಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಕಲಬುರಗಿ ತೊಗರಿ ಬೇಳೆಯ ಮಾಲ್ಡೀವ್ಸ್ ಪ್ರವೇಶವು ಸ್ಥಳೀಯ ಕೃಷಿ ಉತ್ಪನ್ನಗಳಿಗೆ ಗುಣಮಟ್ಟ, ಸೂಕ್ತ ಮಾರುಕಟ್ಟೆ ಸಂಪರ್ಕ ಮತ್ತು ರಫ್ತು ವ್ಯವಸ್ಥೆ ದೊರೆತರೆ ಜಾಗತಿಕ ಮಟ್ಟದಲ್ಲಿಯೂ ಅವಕಾಶಗಳನ್ನು ವಿಸ್ತರಿಸಬಹುದು ಎಂಬುದನ್ನು ತೋರಿಸುತ್ತದೆ.
- ಕಲ್ಯಾಣ ಕರ್ನಾಟಕ ನೇಮಕಾತಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟಿಸಿದ KEA
- ‘ಮನ್ ಕಿ ಬಾತ್’ನಲ್ಲಿ ಕರ್ನಾಟಕದ ತೊಗರಿ ಬೇಳೆಗೆ ಮೋದಿ ಮೆಚ್ಚುಗೆ
- ಎನ್ಡಿಎ ಅಭ್ಯರ್ಥಿ ಸುರೇಶ್ ವಿರುದ್ಧ ಶಾಸಕ ಬಿ.ಪಿ.ಹರೀಶ್ ವಾಗ್ದಾಳಿ
- ಅಂತರರಾಷ್ಟ್ರೀಯ ಕಲಾವಿದರ ದಿನ: ಚಿತ್ರರಂಗದ ತೆರೆಮರೆಯ ನಾಯಕರಿಗೆ ಗೌರವ
- ‘ಕಿತ್ತೂರಿನ ಗತ್ತು ದೇಶಕ್ಕೆ ಗೊತ್ತು’: AI ತಂತ್ರಜ್ಞಾನದಲ್ಲಿ ‘ರಾಣಿ ಚೆನ್ನಮ್ಮ’ ಚಿತ್ರ ನಿರ್ಮಾಣ




















