SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ 22 ವರ್ಷಗಳ ಬಳಿಕ ಬಸ್ ದರೋಡೆ ಪ್ರಕರಣದ ಆರೋಪಿ ಬಂಧನ

22 ವರ್ಷಗಳ ಬಳಿಕ ಬಸ್ ದರೋಡೆ ಪ್ರಕರಣದ ಆರೋಪಿ ಬಂಧನ

0
93
ಹೆಸರು ಬದಲಾಯಿಸಿ ತಿರುಪತಿಯಲ್ಲಿ ವಾಸ: 22 ವರ್ಷಗಳ ಬಳಿಕ ಹಳೆಯ ದರೋಡೆ ಪ್ರಕರಣದ ಆರೋಪಿ ಸೆರೆ

2004ರ ಖಾಸಗಿ ಬಸ್ ದರೋಡೆ ಪ್ರಕರಣಕ್ಕೆ ಮಹತ್ವದ ತಿರುವು: ಎರಡು ದಶಕಗಳಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಅರೆಸ್ಟ್!

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ತುಮಕೂರ್ಲಹಳ್ಳಿ ಬಳಿ 22 ವರ್ಷಗಳ ಹಿಂದೆ ನಡೆದಿದ್ದ ಖಾಸಗಿ ಬಸ್ ದರೋಡೆ ಪ್ರಕರಣದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮೊಳಕಾಲ್ಮೂರು ಠಾಣೆ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಆಂಧ್ರಪ್ರದೇಶದ ತಿರುಪತಿ ನಗರದಲ್ಲಿ ವಾಸವಾಗಿದ್ದ ಬಾಸ್ಕರ್ ಅಲಿಯಾಸ್ ಯರಿಸ್ವಾಮಿ (49) ಎಂದು ಗುರುತಿಸಲಾಗಿದೆ.

ಏನಾಗಿತ್ತು ಪ್ರಕರಣ: 2004ರಲ್ಲಿ ಮೊಳಕಾಲ್ಮೂರು ತಾಲೂಕಿನ ತುಮಕೂರ್ಲಹಳ್ಳಿ ಬಳಿ 7 ಜನರಿದ್ದ ದರೋಡೆಕೋರರ ಗ್ಯಾಂಗ್ ಖಾಸಗಿ ಬಸ್ ಅನ್ನು ಅಡ್ಡಗಟ್ಟಿ, ಪ್ರಯಾಣಿಕರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ದರೋಡೆ ಮಾಡಿತ್ತು. ಪ್ರಯಾಣಿಕರ ಬಳಿ ಇದ್ದ ಚಿನ್ನಾಭರಣ, ಕೈಗಡಿಯಾರಗಳು ಮತ್ತು ಆಗಿನ ಕಾಲದಲ್ಲಿ ಅತ್ಯಂತ ಬೆಲೆಬಾಳುವ ವಸ್ತುವಾಗಿದ್ದ ವಿಸಿಪಿ ಪ್ಲೇಯರ್ ಅನ್ನು ದೋಚಿ ಪರಾರಿಯಾಗಿದ್ದರು.

ಈ ಸಂಬಂಧ ಮೊಳಕಾಲ್ಮೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 6 ಜನ ಆರೋಪಿಗಳನ್ನು ಆಗಲೇ ಬಂಧಿಸಲಾಗಿತ್ತು. ಆದರೆ, ಬಾಸ್ಕರ್ ಮಾತ್ರ ತಲೆಮರೆಸಿಕೊಂಡು ಆಂಧ್ರಪ್ರದೇಶದ ತಿರುಪತಿಯಲ್ಲಿ ಹೆಸರು ಬದಲಾಯಿಸಿಕೊಂಡು ವಾಸವಾಗಿದ್ದ.

ಮೊಳಕಾಲ್ಮೂರು ಠಾಣೆಯ ಪಿಎಸ್ಐ ಮಹೇಶ್ ಹೊಸಪೇಟೆ ನೇತೃತ್ವದ ತಂಡವು ಆರೋಪಿಯ ಸುಳಿವನ್ನು ಪತ್ತೆ ಹಚ್ಚಿ, ತಿರುಪತಿ ನಗರದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ವಿಚಾರಣೆ ವೇಳೆ ಆರೋಪಿ ಬಾಸ್ಕರ್ ಆಂಧ್ರಪ್ರದೇಶದಲ್ಲಿ ಮತ್ತೊಂದು ದರೋಡೆ ಪ್ರಕರಣದಲ್ಲೂ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ಎಸ್ಪಿ ಕುಶಾಲ್ ಚೌಕ್ಸೆ ಅವರು ಮಾಹಿತಿ ನೀಡಿದ್ದಾರೆ.

ಸುದೀರ್ಘ 22 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚಿದ ಮೊಳಕಾಲ್ಮೂರು ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.