Home Advertisement
Home ನಮ್ಮ ಜಿಲ್ಲೆ ಯಾದಗಿರಿ ಬಸ್- ಕಾರು ಮಧ್ಯೆ ಭೀಕರ ಅಪಘಾತ – 6 ಮಂದಿ ಸಜೀವ ದಹನ

ಬಸ್- ಕಾರು ಮಧ್ಯೆ ಭೀಕರ ಅಪಘಾತ – 6 ಮಂದಿ ಸಜೀವ ದಹನ

0
270

ಯಾದಗಿರಿ: ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವು ಆತಂಕ ಮೂಡಿಸಿದ್ದು, ಬಸ್ ಮತ್ತು ಕಾರಿನ ಮಧ್ಯೆ ಸಂಭವಿಸಿದ ಡಿಕ್ಕಿಯಿಂದ ಉಂಟಾದ ಬೆಂಕಿಯಲ್ಲಿ ಹಲವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಸುರಪುರ ತಾಲೂಕಿನ ತಿಂಥಣಿ ಬ್ರಿಜ್ ಸಮೀಪದ ಶಾಂತಪುರ ಕ್ರಾಸ್ ಬಳಿ ನಡೆದಿದೆ.

ಬೆಂಗಳೂರಿನಿಂದ ಕಲಬುರಗಿ ಕಡೆಗೆ ತೆರಳುತ್ತಿದ್ದ ಖಾಸಗಿ ಸ್ವೀಪರ್ ಬಸ್ ಹಾಗೂ ಎದುರುಗಡೆಯಿಂದ ಬರುತ್ತಿದ್ದ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಅಪಘಾತದ ತೀವ್ರತೆಗೆ ಕಾರು ಮತ್ತು ಬಸ್ ಎರಡೂ ಸಂಪೂರ್ಣ ಸುಟ್ಟು ಕರಕಲಾಗಿವೆ.

ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ : ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕನಿಷ್ಠ 6 ಮಂದಿ ಸುಟ್ಟು ಸಾವನ್ನಪ್ಪಿರುವ ಸಾಧ್ಯತೆ ವ್ಯಕ್ತವಾಗಿದೆ. ಮೃತರನ್ನು ಕೃಷ್ಣಾ ನಾಯಕ(52),ಅನಂತ ಕಲಾ ಗಂಡ ಕೃಷ್ಣಾ ನಾಯಕ(45),ಶರಣಪ್ಪ(36).ನಿಸರ್ಗ ಗಂಡ ಶರಣಪ್ಪ(30),ಸಿದ್ದಾರ್ಥ ಶರಣಪ್ಪ(03) ಹಾಗೂ ಶಶಿಕಲಾ (30) ಎಂದು ಗುರುತಿಸಲಾಗಿದೆ. ಅದ್ವಿಕಾ ತಂದೆ ಶರಣಪ್ಪ(05) ಹಾಗೂ ಶ್ರೀನಿಧಿ ತಂದೆ ಶರಣಪ್ಪ(1.5 ವರ್ಷ) ಎಂಬ ಮಕ್ಕಳ ಪರಿಸ್ಥಿತಿ ಚಿಂತಾಜಕವಾಗಿದ್ದು,ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಸ್‌ನಲ್ಲಿದ್ದ ಎಲ್ಲಾ 20 ಪ್ರಯಾಣಿಕರು ಸುರಕ್ಷಿತಾಗಿದ್ದಾರೆ ಎನ್ನಲಾಗಿದೆ.

ರಕ್ಷಣಾ ಕಾರ್ಯ ಮುಂದುವರಿಕೆ : ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಹಾಗೂ ಶೋಧ ಕಾರ್ಯ ಕೈಗೊಂಡಿದ್ದಾರೆ. ಬೆಂಕಿ ತೀವ್ರವಾಗಿದ್ದರಿಂದ ರಕ್ಷಣಾ ಕಾರ್ಯ ಕೆಲಕಾಲ ಕಷ್ಟಕರವಾಗಿತ್ತು. ಗಾಯಾಳುಗಳಿರುವ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಅಪಘಾತಕ್ಕೆ ಕಾರಣವೇನು?: ಲಿಂಗಸುಗೂರಿನಿಂದ ಕಲಬುರಗಿ ಕಡೆಗೆ ಹೊರಟಿದ್ದ ಬಸ್ ಹಾಗೂ ಎದುರುಗಡೆಯಿಂದ ಬರುತ್ತಿದ್ದ ಕಾರಿನ ನಡುವೆ ಸಂಭವಿಸಿದ ಈ ಅಪಘಾತಕ್ಕೆ ವೇಗ ಹಾಗೂ ನಿರ್ಲಕ್ಷ್ಯ ಚಾಲನೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ಆದಾಗ್ಯೂ, ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಸುರಪುರ ಶಾಸಕ ರಾಜಾ ವೇಣುಗೋಪಾಲ್ ನಾಯಕ ಹಾಗೂ ಸಚಿವರಾದ ಶರಣಬಸಪ್ಪಗೌಡ ದರ್ಶಾನಪೂರ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‍ಪಿ) ಪೃತ್ವಿಕ್ ಶಂಕರ್ ಭೇಟಿ ನೀಡಿ ನೀಡಿದರು.