ಖಾಸಗಿ ಸೋಪ್ ಕಂಪನಿಯೊಂದರ ವಿರುದ್ಧ ನಟಿ ತಮನ್ನಾ ಭಾಟಿಯಾ ಸಲ್ಲಿಸಿದ್ದ 1 ಕೋಟಿ ರೂಪಾಯಿ ಪರಿಹಾರದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಇದರೊಂದಿಗೆ ಸುಮಾರು 16 ವರ್ಷಗಳ ಕಾಲ ನಡೆದ ಸುದೀರ್ಘ ಕಾನೂನು ಹೋರಾಟವು ನಟಿಯ ಹಿನ್ನಡೆಯೊಂದಿಗೆ ಅಂತ್ಯಗೊಂಡಿದೆ.
2008ರ ಅಕ್ಟೋಬರ್‌ನಲ್ಲಿ ತಮನ್ನಾ ಖಾಸಗಿ ಸೋಪ್ ಕಂಪನಿಯೊಂದರ ಉತ್ಪನ್ನಗಳಿಗೆ ಬ್ರಾಂಡ್ ರಾಯಭಾರಿಯಾಗಲು ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದದ ಅವಧಿಯು ಅಕ್ಟೋಬರ್ 2009ಕ್ಕೆ ಮುಕ್ತಾಯವಾಗಿತ್ತು. ಆದ್ರೆ ಒಪ್ಪಂದದ ಅವಧಿ ಮುಗಿದ ನಂತರವೂ, ಅಂದರೆ 2010 ಮತ್ತು 2011ರ ಅವಧಿಯಲ್ಲಿ ಕಂಪನಿಯು ತನ್ನ ಫೋಟೋಗಳನ್ನು ಜಾಹೀರಾತುಗಳಲ್ಲಿ ಮತ್ತು ಸೋಪ್ ಪ್ಯಾಕೇಜಿಂಗ್‌ನಲ್ಲಿ ಬಳಸಿಕೊಂಡಿದೆ ಎಂದು ತಮನ್ನಾ ಆರೋಪಿಸಿದ್ದರು. ಇದರಿಂದ ತಮಗೆ ಆರ್ಥಿಕ ನಷ್ಟವಾಗಿದ್ದು, ಮಾರುಕಟ್ಟೆ ಮೌಲ್ಯ ಕುಸಿದಿದೆ ಎಂದು ವಾದಿಸಿ 1 ಕೋಟಿ ರೂ. ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ಮೊದಲು ಪ್ರಕರಣದ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು ಸಾಕ್ಷ್ಯಾಧಾರಗಳ ಕೊರತೆಯಿಂದ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ತಮನ್ನಾ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಏಪ್ರಿಲ್ 16, 2026 ರಂದು ಈ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ವೇಲ್ಮುರುಗನ್ ಮತ್ತು ಕೆ. ಗೋವಿಂದರಾಜನ್ ತಿಲಕಾವತಿ ಅವರಿದ್ದ ಪೀಠವು ಮಹತ್ವದ ತೀರ್ಪು ನೀಡಿದೆ.
ಒಪ್ಪಂದದ ಅವಧಿ ಮುಗಿದ ನಂತರವೂ ಕಂಪನಿಯು ಜಾಹೀರಾತುಗಳನ್ನು ಪ್ರಸಾರ ಮಾಡಿದೆ ಮತ್ತು ಫೋಟೋಗಳನ್ನು ಬಳಸಿದೆ ಎಂದು ಸಾಬೀತುಪಡಿಸಲು ನಟಿಯ ಪರವಾಗಿ ಯಾವುದೇ ಬಲವಾದ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹಿಂದಿನ ಏಕಸದಸ್ಯ ಪೀಠದ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣಗಳಿಲ್ಲ ಎಂದು ಹೇಳಿದ ನ್ಯಾಯಾಲಯವು ತಮನ್ನಾ ಅರ್ಜಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಈ ತೀರ್ಪು ಪ್ರಸಿದ್ಧ ವ್ಯಕ್ತಿಗಳು ಮತ್ತು ಕಂಪನಿಗಳ ನಡುವಿನ ಬ್ರಾಂಡ್ ಒಪ್ಪಂದಗಳ ಕಾನೂನು ಸೂಕ್ಷ್ಮತೆಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.






















