Home Advertisement
Home ನಮ್ಮ ಜಿಲ್ಲೆ ಯಾದಗಿರಿ ಯಾದಗಿರಿ ಬಸ್-ಕಾರು ಡಿಕ್ಕಿ ದುರಂತ: ಮೃತರ ಸಂಖ್ಯೆ 9ಕ್ಕೆ ಏರಿಕೆ

ಯಾದಗಿರಿ ಬಸ್-ಕಾರು ಡಿಕ್ಕಿ ದುರಂತ: ಮೃತರ ಸಂಖ್ಯೆ 9ಕ್ಕೆ ಏರಿಕೆ

0
84

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಸಮೀಪ ಶುಕ್ರವಾರ ಸಂಭವಿಸಿದ ಭೀಕರ ಬಸ್-ಕಾರು ಅಪಘಾತದಲ್ಲಿ ಮೃತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ ಒಂದೇ ಕುಟುಂಬದ ಬಹುತೇಕ ಸದಸ್ಯರು ಸಾವನ್ನಪ್ಪಿರುವುದು ಘಟನೆಗೆ ಇನ್ನಷ್ಟು ವಿಷಾದ ತಂದಿದೆ.

ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಕೃಷ್ಣ ನಾಯಕ್ (52), ಅವರ ಪತ್ನಿ ಅನಂತಾ ಕಲಾ (45), ಶರಣಪ್ಪ (36), ಅವರ ಪತ್ನಿ ನಿಸರ್ಗಾ (30), ಮಕ್ಕಳಾದ ಸಿದ್ಧಾರ್ಥ (5), ಅದ್ವಿಕ್ (5), ಒಂದೂವರೆ ವರ್ಷದ ಶ್ರೀನಿಧಿ, ಶಶಿಕಲಾ (30) ಹಾಗೂ ಚಂದನಾ (8) ಸೇರಿ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ.

ಈ ದುರ್ಘಟನೆಯಲ್ಲಿ ಶಶಿಕಲಾ ಅವರ ಪುತ್ರ ವಿರಾಟ್ ಮಾತ್ರ ಅದ್ಭುತವಾಗಿ ಬದುಕುಳಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದರ್ಶನದಿಂದ ಮರಳುವಾಗ ದುರಂತ: ಸಿರವಾರ ಪಟ್ಟಣ ಪಂಚಾಯಿತಿ ಸದಸ್ಯರಾಗಿದ್ದ ಕೃಷ್ಣ ನಾಯಕ್ ತಮ್ಮ ಕುಟುಂಬ ಸಮೇತ ಸುರಪುರದಲ್ಲಿರುವ ವೇಣುಗೋಪಾಲ ಸ್ವಾಮಿಯ ದರ್ಶನಕ್ಕಾಗಿ ಕಾರಿನಲ್ಲಿ ತೆರಳಿದ್ದರು. ದರ್ಶನ ಮುಗಿಸಿ ವಾಪಸ್ ಸಿರವಾರದತ್ತ ಬರುತ್ತಿದ್ದಾಗ ಶಾಂತಪುರ ಕ್ರಾಸ್ ಬಳಿ ಕಾರು ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸಿದಾಗ ಎದುರುಗಡೆಯಿಂದ ಬರುತ್ತಿದ್ದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬಸ್ ಮತ್ತು ಕಾರು ಎರಡೂ ಉಜ್ಜಿಕೊಂಡು ಹೋಗಿದ್ದು, ಬಸ್‌ನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಕಾರಿಗೂ ವ್ಯಾಪಿಸಿದೆ. ಬೆಂಕಿಯ ಕೆನ್ನಾಲಿಗೆಯಲ್ಲಿ ಕೆಲವರು ಸುಟ್ಟು ಕರಕಲಾಗಿದ್ದು, ಉಳಿದವರು ಭಾರೀ ಗಾಯಗಳಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಘಟನೆಯ ಬಳಿಕ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ ರಕ್ಷಣಾ ಕಾರ್ಯ ನಡೆಸಿದರು. ಸ್ಥಳೀಯರು ಸಹ ಸಹಾಯಕ್ಕೆ ಮುಂದಾದರು.

ಬಸ್ ಪ್ರಯಾಣಿಕರು ಸುರಕ್ಷಿತ : ಘಟನೆಯ ಸಮಯದಲ್ಲಿ ಬಸ್‌ನಲ್ಲಿ ಇದ್ದ ಸುಮಾರು 20 ಮಂದಿ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಎಸ್‌ಪಿ ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ.

ಅಧಿಕಾರಿಗಳ ಭೇಟಿ: ಘಟನಾ ಸ್ಥಳಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕ್, ಎಸ್‌ಪಿ ಪೃಥ್ವಿಕ್ ಶಂಕರ್, ಡಿವೈಎಸ್‌ಪಿ ಇನಾಮದಾರ್ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.