ಹುಬ್ಬಳ್ಳಿ: ಸಾಂಸ್ಕೃತಿಕ ಚೈತನ್ಯವನ್ನು ಹೊತ್ತೊಯ್ಯಲಿರುವ ‘ವಸಂತ ಋತುಗಾನ–ಕಲಾಯಾನ’ ಮಹೋತ್ಸವಕ್ಕೆ ಇಂದಿನಿಂದ ಆರಂಭವಾಗಿದ್ದು, ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಭವ್ಯವಾಗಿ ನಡೆಯುತ್ತಿರುವ ಈ ಕಾರ್ಯಕ್ರಮವು ಉತ್ತರ ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ದೇಶದ ಮಟ್ಟದಲ್ಲಿ ಮೆರೆದಿಡುವ ಈ ಮಹೋತ್ಸವವು ಕಲಾರಸಿಕರಿಂದ ತುಂಬಿದೆ.
‘ಸಂಯುಕ್ತ ಕರ್ನಾಟಕ’ ವತಿಯಿಂದ ಆಯೋಜಿಸಲ್ಪಟ್ಟಿರುವ ಈ ಮಹೋತ್ಸವಕ್ಕೆ ಸಿದ್ಧಾರೂಢ ಮಠ ಟ್ರಸ್ಟ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗ ನೀಡಿದ್ದು, ಜಾನಪದದಿಂದ ಶಾಸ್ತ್ರೀಯದವರೆಗೆ ಹಲವು ಕಲಾ ಪ್ರಕಾರಗಳ ಸಂಯೋಜನೆಯೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.
‘ಸಿದ್ಧಾರೂಢ ಮಹಾತ್ಮೆ’ ವಿಶೇಷ : ಕಲೋತ್ಸವದ ಮೊದಲ ದಿನವಾದ ಇಂದು ಏಪ್ರಿಲ್ 17ರಂದು ರಾತ್ರಿ 7:30ಕ್ಕೆ ಬನಶಂಕರಿ ಕೃಪಾಪೋಷಿತ ನಾಟ್ಯ ಸಂಘದಿಂದ ‘ಶ್ರೀ ಸಿದ್ಧಾರೂಢ ಮಹಾತ್ಮೆ’ ನಾಟಕ ಪ್ರದರ್ಶನ ನಡೆಯಲಿದೆ. ಬಸವರಾಜ ಪಂಚಗಲ್ ರಚಿಸಿರುವ ಈ ನಾಟಕವು ಸಿದ್ಧಾರೂಢರ ಜೀವನ ಹಾಗೂ ಮಹಾತ್ಮೆಯನ್ನು ಕಲಾತ್ಮಕವಾಗಿ ಕಟ್ಟಿಕೊಡುವ ಪ್ರಯತ್ನವಾಗಿದೆ.
ಹಿರಿಯ ರಂಗಭೂಮಿ ನಟಿ ಸುನಂದಾ ಹೊಸಪೇಟೆ ಸೇರಿದಂತೆ ಅನೇಕ ಕಲಾವಿದರು ಈ ನಾಟಕದಲ್ಲಿ ಅಭಿನಯಿಸಲಿದ್ದು, ಹವ್ಯಾಸಿ ಕಲಾತಂಡದ ವಿಭಿನ್ನ ಪ್ರಯೋಗವಾಗಿ ಇದು ಪ್ರೇಕ್ಷಕರ ಮನ ಸೆಳೆಯುವ ನಿರೀಕ್ಷೆಯಿದೆ.
ಪಾತ್ರ ವರ್ಗ: ಸ್ತ್ರೀ ಪಾತ್ರಗಳು – ಸುನಂದಾ ಹೊಸಪೇಟೆ, ನೇತ್ರಾ ಮತ್ತು ಪುರುಷ ಪಾತ್ರಗಳು – ನೋಮಿತ್ ಗೌಡ, ಸುನೀಲ್ ಪತ್ರಿ, ಮಂಜುನಾಥ ಗೌಡ ಪಾಟೀಲ, H S ರಾಮನ ಗೌಡ್ರ, ವಸಂತ ಅಗಸಿಮನಿ, ವಿನೋದ ರಾಜ ಹೂಗಾರ, ಗುರಣ್ಣ, ನಕುಲ ಇಟಗಿ, ಕೃಷ್ಣ ಮಹಾಮನೆ ಹಾಗೂ ಪ್ರಶಾಂತ ಗೋಪಾನ ಕೊಪ್ಪ
ಸುನಂದಾ ಹೊಸಪೇಟೆ – ರಂಗಭೂಮಿಯ ಶಕ್ತಿಶಾಲಿ ಹೆಸರು : ಸುನಂದಾ ಹೊಸಪೇಟೆ ಅವರು ಕನ್ನಡ ರಂಗಭೂಮಿ ಮತ್ತು ಕಿರುತೆರೆಯ ಪ್ರಮುಖ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಮೂಲದ ಇವರು ‘ಕೊರವಂಜಿ’, ‘ಮುದುಕನ ಮದುವೆ’, ‘ಬದುಕು ಬಂಗಾರವಾಯಿತು’ ಸೇರಿದಂತೆ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ತಮ್ಮದೇ ‘ಶ್ರೀ ಬನಶಂಕರಿ ಕೃಪಾ ಪೋಷಿತ ನಾಟ್ಯ ಸಂಘ’ವನ್ನು ಸ್ಥಾಪಿಸಿ ಮುನ್ನಡೆಸುತ್ತಿರುವ ಅವರು, ಕಿರುತೆರೆಯಲ್ಲೂ ಸಕ್ರಿಯರಾಗಿದ್ದು ‘ಪುಟ್ಟಕ್ಕನ ಮಕ್ಕಳು’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಗಮನ ಸೆಳೆದಿದ್ದಾರೆ. ಅವರ ಕಲಾ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರವು 2020ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ.
ಸಮಾರೋಪಕ್ಕೆ ‘ಬಾರದು ಬಪ್ಪದು…’ : ಕಲೋತ್ಸವದ ಸಮಾರೋಪ ದಿನವಾದ ಏಪ್ರಿಲ್ 19ರಂದು ರಾತ್ರಿ 7 ಗಂಟೆಗೆ ಗದಿಗೆಯ್ಯಸ್ವಾಮಿ ಹಿರೇಮಠ ನಿರ್ದೇಶನದ ‘ಬಾರದು ಬಪ್ಪದು…’ ನಾಟಕ ಪ್ರದರ್ಶನ ನಡೆಯಲಿದೆ. ಡಾ. ಗೋವಿಂದ ಮಣ್ಣೂರ ಅವರ ಕೃತಿ ಇದಾಗಿದ್ದು, ಈ ನಾಟಕದೊಂದಿಗೆ ‘ವಸಂತ ಋತುಗಾನ–ಕಲಾಯಾನ’ಕ್ಕೆ ವಿಧ್ಯುಕ್ತ ತೆರೆ ಬೀಳಲಿದೆ.
ಕಲಾ ಸಂಭ್ರಮಕ್ಕೆ ವೇದಿಕೆ ಸಜ್ಜು : ಮೂರು ದಿನಗಳ ಕಾಲ ನಡೆಯಲಿರುವ ಈ ಮಹೋತ್ಸವದಲ್ಲಿ ಜಾನಪದ ಗಾಯನ, ನೃತ್ಯ ರೂಪಕ, ಯಕ್ಷಗಾನ, ನಾಟಕಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಹುಬ್ಬಳ್ಳಿ-ಧಾರವಾಡ ಭಾಗವನ್ನು ಕಲಾ ಸಂಭ್ರಮದಲ್ಲಿ ಮುಳುಗಿಸುವುದರಲ್ಲಿ ಸಂದೇಹವಿಲ್ಲ.
ಒಟ್ಟಿನಲ್ಲಿ ‘ವಸಂತ ಋತುಗಾನ–ಕಲಾಯಾನ’ವು ಕೇವಲ ಉತ್ಸವವಲ್ಲ, ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಜೀವಂತವಾಗಿಡುವ ಮಹಾ ಕಲಾಯಾನವಾಗಿ ಮೂಡಿ ಬರುತ್ತಿದೆ.






















