ಕಳೆದ ಜನವರಿಯಿಂದ ದೇಶದ ಗಮನ ಸೆಳೆದಿದ್ದ ಸಂಸತ್ತಿನ ಸುದೀರ್ಘ ಬಜೆಟ್ ಅಧಿವೇಶನವು ಶನಿವಾರ ಅಧಿಕೃತವಾಗಿ ಮುಕ್ತಾಯಗೊಂಡಿದೆ. ಲೋಕಸಭೆ ಮತ್ತು ರಾಜ್ಯಸಭೆ ಎರಡನ್ನೂ ಅನಿರ್ದಿಷ್ಟಾವಧಿಗೆ ಮುಂದೂಡುವ ಮೂಲಕ ಈ ಬಾರಿಯ ಸಂಸದೀಯ ಪ್ರಕ್ರಿಯೆಗೆ ತೆರೆ ಎಳೆಯಲಾಗಿದೆ. ಈ ಅಧಿವೇಶನವು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಂತ ನಿರ್ಣಾಯಕ ಮತ್ತು ಪರಿಣಾಮಕಾರಿ ಎಂದು ಸಭಾಪತಿಗಳು ಬಣ್ಣಿಸಿದ್ದಾರೆ.
ಶನಿವಾರ ಬೆಳಿಗ್ಗೆ 11 ಗಂಟೆಗೆ ಲೋಕಸಭೆ ಸಮಾವೇಶಗೊಳ್ಳುತ್ತಿದ್ದಂತೆಯೇ ಸ್ಪೀಕರ್ ಓಂ ಬಿರ್ಲಾ ಸಮಾರೋಪದ ಭಾಷಣ ಮಾಡಿದರು. ಅಧಿವೇಶನದಲ್ಲಿ ನಡೆದ ಚರ್ಚೆಗಳು ಮತ್ತು ಅಂಗೀಕಾರವಾದ ಮಸೂದೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ, ಬಳಿಕ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಆದ್ರೆ ಈ ಅಧಿವೇಶನದ ಅಂತ್ಯವು ಆಡಳಿತ ಪಕ್ಷಕ್ಕೆ ಸ್ವಲ್ಪ ಮಟ್ಟಿನ ಹಿನ್ನಡೆಯನ್ನು ತಂದಿದೆ. ಬಹುನಿರೀಕ್ಷಿತ ಮಹಿಳಾ ಮೀಸಲಾತಿ ತಿದ್ದುಪಡಿ ಕಾಯ್ದೆಯು ಲೋಕಸಭೆಯಲ್ಲಿ ಸೋಲುಂಡ ಬೆನ್ನಲ್ಲೇ ಸದನವನ್ನು ಮುಂದೂಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಲೋಕಸಭೆ ಸ್ಥಾನಗಳ ಹೆಚ್ಚಳಕ್ಕೆ ಸಂಬಂಧಿಸಿದ ಮತ್ತೊಂದು ಪ್ರಮುಖ ಮಸೂದೆಯನ್ನು ಸರ್ಕಾರ ಮತಕ್ಕೆ ಹಾಕದೆ ಉಳಿಸಿಕೊಂಡಿರುವುದು ಗಮನಾರ್ಹ.
ಮತ್ತೊಂದೆಡೆ ರಾಜ್ಯಸಭೆಯಲ್ಲಿ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಕಲಾಪವನ್ನು ಅಂತ್ಯಗೊಳಿಸಿದರು. ಈ ಅಧಿವೇಶನವು ಮೇಲ್ಮನೆಯ ಪಾಲಿಗೆ ವಿಶೇಷವಾಗಿತ್ತು. ಹಿರಿಯ ನಾಯಕ ಹರಿವಂಶಯವರನ್ನು ರಾಜ್ಯಸಭೆಯ ಉಪಸಭಾಪತಿಯನ್ನಾಗಿ ಈ ಕಲಾಪದ ಅವಧಿಯಲ್ಲಿಯೇ ಮರು ಆಯ್ಕೆ ಮಾಡಲಾಯಿತು. ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ರಾಜ್ಯಸಭೆಯು ಈ ಬಾರಿ ಸಕ್ರಿಯವಾಗಿ ಕಾರ್ಯನಿರ್ವಹಿಸಿತು ಎಂದು ಸಭಾಪತಿಗಳು ಶ್ಲಾಘಿಸಿದರು.
ಮಹಿಳಾ ಮೀಸಲಾತಿ ಸೇರಿದಂತೆ ಮೂರು ಮಹತ್ವದ ಮಸೂದೆಗಳ ಚರ್ಚೆಗಾಗಿ ಏಪ್ರಿಲ್ 16 ರಿಂದ ಮೂರು ದಿನಗಳ ಕಾಲ ವಿಶೇಷ ಕಲಾಪವನ್ನು ಆಯೋಜಿಸಲಾಗಿತ್ತು. ಸುದೀರ್ಘ ಚರ್ಚೆಗಳು ನಡೆದರೂ ಮೀಸಲಾತಿ ಮಸೂದೆಯ ಸೋಲು ಅಚ್ಚರಿ ಮೂಡಿಸಿದೆ. ಒಟ್ಟಾರೆಯಾಗಿ ಈ ಬಜೆಟ್ ಅಧಿವೇಶನವು ದೇಶದ ಆರ್ಥಿಕ ಮತ್ತು ಸಾಮಾಜಿಕ ಪಥವನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿರುವ ಸಂಸತ್ತು, ಮುಂದಿನ ಅಧಿವೇಶನದಲ್ಲಿ ಯಾವ ಹೊಸ ತಂತ್ರಗಳೊಂದಿಗೆ ಸಮಾವೇಶಗೊಳ್ಳಲಿದೆ ಎಂಬುದು ಕುತೂಹಲಕಾರಿಯಾಗಿದೆ.























