ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ‘ನಂದಗೋಕುಲ’ ಈಗ ತೀವ್ರ ತಿರುವು ಪಡೆದಿದೆ. ಅಪ್ಪಟ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಧಾರಾವಾಹಿಯಲ್ಲಿ ನಂದಕುಮಾರ್ ಮತ್ತು ಗಿರಿಜಾ ದಂಪತಿಯ ಸುಂದರ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಆರಂಭದಲ್ಲಿ ಮಕ್ಕಳ ಪಾಲಿಗೆ ಆದರ್ಶಪ್ರಾಯವಾಗಿದ್ದ ನಂದಕುಮಾರ್, ಈಗ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಆದರ್ಶ ತಂದೆಯ ಇಮೇಜ್ ಬದಲಾವಣೆ:
ನಂದಕುಮಾರ್ ಈ ಹಿಂದೆ ಶಿಸ್ತಿನ ಸಿಪಾಯಿಯಾಗಿದ್ದರೂ ಮಕ್ಕಳ ಏಳಿಗೆಯನ್ನೇ ಬಯಸುವ ‘ಬೆಸ್ಟ್ ಅಪ್ಪ’ ಎನಿಸಿಕೊಂಡಿದ್ದರು. ಆದರೆ ಈಗ ಅವರ ಅತಿಯಾದ ಶಿಸ್ತು ಮತ್ತು ಹಠಮಾರಿತನ ಮನೆಯವರ ಪಾಲಿಗೆ ನರಕವಾಗಿ ಪರಿಣಮಿಸುತ್ತಿದೆ.

ಮಗ ಕೇಶವನಿಗೆ ಅವಮಾನ:
ಮಗ ಕೇಶವನ ವಿಷಯದಲ್ಲಿ ನಂದ ನಡೆದುಕೊಳ್ಳುತ್ತಿರುವ ರೀತಿ ನಿಜಕ್ಕೂ ಬೇಸರ ತರಿಸುವಂತಿದೆ. ಮಗ ಅಪ್ಪ ಹೇಳಿದ ಕೆಲಸವನ್ನೆಲ್ಲಾ ಶ್ರದ್ಧೆಯಿಂದ ಮಾಡುತ್ತಿದ್ದರೂ, ಸಣ್ಣ ಪುಟ್ಟ ತಪ್ಪುಗಳನ್ನು ದೊಡ್ಡದಾಗಿ ಮಾಡಿ ಬಿಂಬಿಸುತ್ತಿರುವ ನಂದ, “ನಿನ್ನನ್ನು ನಂಬಿದರೆ ನಾನು ಬೀದಿಗೆ ಬರಬೇಕಾಗುತ್ತದೆ” ಎಂದು ಹಂಗಿಸುತ್ತಿರುವುದು ಕೇಶವನ ಆತ್ಮವಿಶ್ವಾಸವನ್ನು ಕುಗ್ಗಿಸುತ್ತಿದೆ.

ಅಮೂಲ್ಯಳ ಆಸೆಗೆ ತಣ್ಣೀರು:
ಅಮೂಲ್ಯ ಮನೆಯ ಜವಾಬ್ದಾರಿ ಹಂಚಿಕೊಳ್ಳಲು ಟ್ಯೂಷನ್ ಮಾಡುತ್ತಿದ್ದರೆ, ಅದನ್ನು ಪ್ರೋತ್ಸಾಹಿಸುವ ಬದಲು ಅವಳ ಮೇಲೆಯೂ ಕಿಡಿ ಕಾರುತ್ತಿದ್ದಾರೆ. ನಂದಕುಮಾರ್ ಅದಕ್ಕೆ ತಡೆಯೊಡ್ಡಿದ್ದಾರೆ. ಮಗಳ ಸ್ವಾವಲಂಬನೆಯನ್ನು ಬೆಂಬಲಿಸುವ ಬದಲು, ತಮ್ಮ ಅಹಂಕಾರಕ್ಕಾಗಿ ಅವಳನ್ನು ಮನೆಯೊಳಗೆ ಕೂಡಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ.
ಸೊಸೆಯ ಕುತಂತ್ರಕ್ಕೆ ಬಲಿಯಾದ ಮಾವ:
ಮನೆ ಹಾಳು ಸೊಸೆ ಪ್ರಿಯಾ ಆಡುವ ಚಾಡಿ ಮಾತುಗಳಿಗೆ ನಂದಕುಮಾರ್ ಮರುಳಾಗುತ್ತಿದ್ದಾರೆ. ಪ್ರಿಯಾ ಹೇಳುವ ಸುಳ್ಳನ್ನೇ ನಿಜವೆಂದು ನಂಬಿ ಅಮೂಲ್ಯ ಮತ್ತು ಕೇಶವನ ಮೇಲೆ ಕೂಗಾಡುತ್ತಿರುವುದು ವೀಕ್ಷಕರ ಸಿಟ್ಟಿಗೆ ಕಾರಣವಾಗಿದೆ.

ವೀಕ್ಷಕರ ತೀವ್ರ ಆಕ್ರೋಶ:
ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಕರು ನಂದಕುಮಾರ್ ವರ್ತನೆಗೆ ಕಿಡಿ ಕಾರುತ್ತಿದ್ದಾರೆ. “ನಂದಗೋಕುಲ ಎನ್ನುವ ಸುಂದರ ಮನೆಯನ್ನು ನಂದ ತಾನೇ ಹಾಳು ಮಾಡಿಕೊಳ್ಳುತ್ತಿದ್ದಾನೆ” ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಒಟ್ಟಿನಲ್ಲಿ, ವೀಕ್ಷಕರು ಈಗ ನಂದಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಇವನೊಬ್ಬ ತಲೆ ಕೆಟ್ಟ ಮಾವ, ತನ್ನದೇ ಕೈಯಾರೆ ತನ್ನ ಸುಂದರ ಸಂಸಾರವನ್ನು ನರಕ ಮಾಡಿಕೊಳ್ಳುತ್ತಿದ್ದಾನೆ” ಎಂಬ ಕಾಮೆಂಟ್‌ಗಳು ಹರಿದು ಬರುತ್ತಿವೆ. ನಂದಕುಮಾರ್ ತೆಗೆದುಕೊಳ್ಳುತ್ತಿರುವ ತಪ್ಪು ನಿರ್ಧಾರಗಳು ಮತ್ತು ಕೋಪದ ಕೈಗೆ ಬುದ್ಧಿ ಕೊಡುತ್ತಿರುವ ರೀತಿ ನಂದಗೋಕುಲದ ನೆಮ್ಮದಿಯನ್ನು ಕಸಿಯುತ್ತಿದೆ. ನಂದಕುಮಾರ್ ಮುಂದಾದರೂ ತನ್ನ ತಪ್ಪು ತಿದ್ದಿಕೊಂಡು ಮನೆಯನ್ನು ಉಳಿಸಿಕೊಳ್ಳುತ್ತಾರಾ ಅಥವಾ ಸಂಸಾರ ಒಡೆಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.






















