SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಕಾಳಿನದಿ ಜಲಕ್ರೀಡೆ ನಿಷೇಧಕ್ಕೆ ಪ್ರವಾಸೋದ್ಯಮ ವಲಯದ ವಿರೋಧ

ಕಾಳಿನದಿ ಜಲಕ್ರೀಡೆ ನಿಷೇಧಕ್ಕೆ ಪ್ರವಾಸೋದ್ಯಮ ವಲಯದ ವಿರೋಧ

0
258

ಉತ್ತರ ಕನ್ನಡ(ದಾಂಡೇಲಿ): ಮಳೆಗಾಲದ ಹಿನ್ನೆಲೆಯಲ್ಲಿ ಜೂನ್ 1ರಿಂದ ಆಗಸ್ಟ್ 31ರವರೆಗೆ ಕಾಳಿನದಿ ಸೇರಿದಂತೆ ಜಿಲ್ಲೆಯ ಜಲಮೂಲಗಳಲ್ಲಿ ಜಲಸಾಹಸ ಕ್ರೀಡೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುವುದಕ್ಕೆ ದಾಂಡೇಲಿ ಹಾಗೂ ಜೋಯಿಡಾ ಭಾಗದ ಪ್ರವಾಸೋದ್ಯಮ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ರೆಸಾರ್ಟ್, ಹೋಂ ಸ್ಟೇ ಹಾಗೂ ಪ್ರವಾಸೋದ್ಯಮ ಉದ್ಯಮಿಗಳ ಪ್ರಕಾರ, ಕಾಳಿನದಿಯ ಮೇಲ್ಭಾಗದಲ್ಲಿರುವ ಸೂಪಾ ಜಲಾಶಯದಲ್ಲಿ ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸುವುದರಿಂದ ದಾಂಡೇಲಿ ಭಾಗದಲ್ಲಿ ನದಿಯ ಹರಿವು ಸಾಮಾನ್ಯ ಮಟ್ಟದಲ್ಲೇ ಇರುತ್ತದೆ. ಜಿಲ್ಲೆಯ ಇತರೆ ಭಾಗಗಳಂತೆ ಇಲ್ಲಿ ಆರಂಭಿಕ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ಅವರು ವಾದಿಸಿದ್ದಾರೆ.

ಭಾರೀ ಮಳೆಯ ಸಂದರ್ಭಗಳಲ್ಲಿ ಮಾತ್ರ ಜಲಕ್ರೀಡೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬಹುದು. ಆದರೆ ಮೂರು ತಿಂಗಳ ಸಂಪೂರ್ಣ ನಿಷೇಧದಿಂದ ಪ್ರವಾಸಿಗರ ಆಗಮನ ಕಡಿಮೆಯಾಗಿ ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಸಾವಿರಾರು ಕುಟುಂಬಗಳ ಜೀವನೋಪಾಯಕ್ಕೆ ಹೊಡೆತ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಭೌಗೋಳಿಕ ಪರಿಸ್ಥಿತಿಯನ್ನು ಪರಿಗಣಿಸಿ ಕಾಳಿನದಿ ಪ್ರದೇಶಕ್ಕೆ ಪ್ರತ್ಯೇಕ ಮಾರ್ಗಸೂಚಿ ರೂಪಿಸಿ ನಿಷೇಧ ಆದೇಶವನ್ನು ಸಡಿಲಗೊಳಿಸಬೇಕು ಎಂದು ಪ್ರವಾಸೋದ್ಯಮ ಕ್ಷೇತ್ರದ ಪ್ರತಿನಿಧಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.