ಪ್ರವಾಸಿಗರ ಸುರಕ್ಷತೆಗೆ ಆದ್ಯತೆ: ಉತ್ತರ ಕನ್ನಡದಲ್ಲಿ ವಾಟರ್ ಅಡ್ವೆಂಚರ್ ಚಟುವಟಿಕೆಗಳಿಗೆ ಬ್ರೇಕ್
ದಾಂಡೇಲಿ (ಉತ್ತರ ಕನ್ನಡ ) : ಮುಂಗಾರು ಮಳೆಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರ ಕನ್ನಡ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ಜಿಲ್ಲೆಯ ನದಿಗಳು, ನದಿ ಹಿನ್ನೀರು ಪ್ರದೇಶಗಳು, ಸಮುದ್ರ ತೀರಗಳು ಹಾಗೂ ದ್ವೀಪಗಳಲ್ಲಿ ನಡೆಯುವ ಎಲ್ಲಾ ಜಲ ಸಾಹಸ ಕ್ರೀಡೆಗಳಿಗೆ ಜೂನ್ 1ರಿಂದ ಆಗಸ್ಟ್ 31ರವರೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ.
ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ಸಮಿತಿಯ ಅಧ್ಯಕ್ಷೆಯೂ ಆಗಿರುವ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಪ್ರವಾಸಿಗರು ಹಾಗೂ ಸಾರ್ವಜನಿಕರ ಜೀವ ರಕ್ಷಣೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ವಿಶೇಷವಾಗಿ ದಾಂಡೇಲಿಯ ಕಾಳಿ ನದಿಯಲ್ಲಿ ನಡೆಯುವ ವೈಟ್ ವಾಟರ್ ರಾಫ್ಟಿಂಗ್, ಗಣೇಶಗುಡಿ ಮತ್ತು ಕಾಳಿ ನದಿ ಹಿನ್ನೀರಿನ ಬೋಟಿಂಗ್, ನಡುಗಡ್ಡೆ ಪ್ರದೇಶಗಳ ಸ್ಕೂಬಾ ಡೈವಿಂಗ್ ಸೇರಿದಂತೆ ವಿವಿಧ ಜಲ ಸಾಹಸ ಚಟುವಟಿಕೆಗಳು ದೇಶ-ವಿದೇಶದ ಪ್ರವಾಸಿಗರನ್ನು ಸೆಳೆಯುತ್ತವೆ. ಆದರೆ ಮಳೆಗಾಲದಲ್ಲಿ ನದಿಗಳಲ್ಲಿ ನೀರಿನ ಹರಿವು ಏಕಾಏಕಿ ಹೆಚ್ಚಾಗುವುದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವುದು ಹಾಗೂ ಹವಾಮಾನ ವೈಪರೀತ್ಯಗಳಿಂದ ಅಪಘಾತಗಳ ಸಂಭವ ಹೆಚ್ಚಾಗುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧ ಹೇರಲಾಗಿದೆ.
ಜಿಲ್ಲಾಡಳಿತದ ಆದೇಶದ ಪ್ರಕಾರ, ಕಾಳಿ ನದಿಯಲ್ಲಿ ರಾಫ್ಟಿಂಗ್, ನದಿ ಹಿನ್ನೀರಿನಲ್ಲಿ ಬೋಟಿಂಗ್, ಸ್ಕೂಬಾ ಡೈವಿಂಗ್, ಸಮುದ್ರದಾಳದ ಜಲ ಸಾಹಸ ಚಟುವಟಿಕೆಗಳು, ಬೋಟ್ ಸ್ಕೀಯಿಂಗ್, ಬನಾನಾ ಬೋಟ್ ರೈಡ್, ಕಯಾಕಿಂಗ್ ಸೇರಿದಂತೆ ಎಲ್ಲಾ ರೀತಿಯ ಜಲ ಸಾಹಸ ಕ್ರೀಡೆಗಳನ್ನು ಮೂರು ತಿಂಗಳ ಅವಧಿಗೆ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಈ ನಿಷೇಧ ಆದೇಶವನ್ನು ಪ್ರಕೃತಿ ವಿಕೋಪ ನಿರ್ವಹಣಾ ಅಧಿನಿಯಮದ ಸೆಕ್ಷನ್ 33 ಮತ್ತು 34ರ ಅಡಿಯಲ್ಲಿ ಜಾರಿಗೊಳಿಸಲಾಗಿದೆ. ಆದೇಶವನ್ನು ಉಲ್ಲಂಘಿಸುವ ಪ್ರವಾಸೋದ್ಯಮ ಸಂಸ್ಥೆಗಳು, ಬೋಟ್ ನಿರ್ವಾಹಕರು ಹಾಗೂ ಸಂಬಂಧಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ನಿಷೇಧ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಜವಾಬ್ದಾರಿಯನ್ನು ಸಂಬಂಧಿಸಿದ ಸಹಾಯಕ ಆಯುಕ್ತರು, ತಹಶೀಲ್ದಾರರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ಹಾಗೂ ಇತರ ಇಲಾಖಾ ಅಧಿಕಾರಿಗಳಿಗೆ ನೀಡಲಾಗಿದೆ. ಜೂನ್ 1ರಿಂದಲೇ ಆದೇಶ ಕಟ್ಟುನಿಟ್ಟಾಗಿ ಜಾರಿಯಾಗಲಿದ್ದು, ಪ್ರವಾಸಿಗರು ಮತ್ತು ಸಾರ್ವಜನಿಕರು ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.
ಪ್ರತಿ ವರ್ಷ ಮುಂಗಾರು ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ನದಿ ಮತ್ತು ಸಮುದ್ರ ತೀರ ಪ್ರದೇಶಗಳಲ್ಲಿ ಅಪಘಾತಗಳ ಸಾಧ್ಯತೆ ಹೆಚ್ಚಾಗುವ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆಯ ಕ್ರಮವಾಗಿ ಜಲ ಸಾಹಸ ಕ್ರೀಡೆಗಳಿಗೆ ತಾತ್ಕಾಲಿಕ ನಿಷೇಧ ಹೇರಲಾಗುತ್ತದೆ. ಈ ವರ್ಷವೂ ಸಾರ್ವಜನಿಕರ ಸುರಕ್ಷತೆಯನ್ನು ಪ್ರಮುಖ ಆದ್ಯತೆಯಾಗಿ ಪರಿಗಣಿಸಿ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ.





















