ಶಾಲೆಯೊಳಗಿನ ಚರ್ಚೆ ಪೊಲೀಸ್ ಠಾಣೆಗೆ; ಯೂಟ್ಯೂಬರ್ ಪ್ರವೇಶದ ಆರೋಪ, ಪರಸ್ಪರ ದೂರು | ಡಿಡಿಪಿಐ ಭೇಟಿ, ನಿಷ್ಪಕ್ಷಪಾತ ತನಿಖೆಗೆ ಆಗ್ರಹ
ದಾಂಡೇಲಿ (ಸಂ.ಕ. ಸಮಾಚಾರ): ಶಿಕ್ಷಕರ ದಿನಾಚರಣೆ ಆಚರಣೆಯ ವಿಚಾರವಾಗಿ ದಾಂಡೇಲಿಯ ಬಾಂಗೂರನಗರ ಸರ್ಕಾರಿ ಮಾದರಿ ಹಿರಿಯ ಕನ್ನಡ ಶಾಲೆಯಲ್ಲಿ ಎಸ್‌ಡಿಎಂಸಿ ಹಾಗೂ ಶಿಕ್ಷಕರ ನಡುವೆ ಉಂಟಾದ ಭಿನ್ನಾಭಿಪ್ರಾಯ ಇದೀಗ ಪೊಲೀಸ್ ದೂರು ಮತ್ತು ಇಲಾಖಾ ತನಿಖೆಯ ಹಂತ ತಲುಪಿದೆ.
ಸರ್ಕಾರಿ ರಜೆ ಇಲ್ಲದ ಹಿನ್ನೆಲೆಯಲ್ಲಿ ಶಾಲೆಯಲ್ಲೇ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಶಿಕ್ಷಕರನ್ನು ಸನ್ಮಾನಿಸಲು ಎಸ್‌ಡಿಎಂಸಿ ನಿರ್ಧರಿಸಿತ್ತು ಎನ್ನಲಾಗಿದೆ. ಆದರೆ ಕೆಲ ಶಿಕ್ಷಕರು ಹಳಿಯಾಳದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆಗೆ ತೆರಳುವ ಇಂಗಿತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಚರ್ಚೆ ನಡೆದಿತ್ತು.
ಈ ವೇಳೆ ಯೂಟ್ಯೂಬರ್ ಒಬ್ಬರು ಅನುಮತಿಯಿಲ್ಲದೆ ಶಾಲಾ ಆವರಣ ಪ್ರವೇಶಿಸಿ ಚಿತ್ರೀಕರಣ ನಡೆಸಿ ಗದ್ದಲಕ್ಕೆ ಕಾರಣರಾದರೆಂಬುದು ಎಸ್‌ಡಿಎಂಸಿ ಆರೋಪ. ಮಹಿಳಾ ಉಪಾಧ್ಯಕ್ಷೆಯೊಂದಿಗೆ ಅವಹೇಳನಕಾರಿಯಾಗಿ ವರ್ತಿಸಿರುವುದಾಗಿಯೂ ಪೊಲೀಸ್ ದೂರು ನೀಡಲಾಗಿದೆ.
ಇದಕ್ಕೆ ಪ್ರತಿಯಾಗಿ ಶಿಕ್ಷಕರು ಎಸ್‌ಡಿಎಂಸಿ ವಿರುದ್ಧ ದಬ್ಬಾಳಿಕೆಯ ಆರೋಪ ಹೊರಿಸಿ ಪೊಲೀಸ್ ದೂರು ನೀಡಿರುವುದು ವಿವಾದವನ್ನು ಮತ್ತಷ್ಟು ತೀವ್ರಗೊಳಿಸಿದೆ.
ಎಸ್‌ಡಿಎಂಸಿ ಅಧ್ಯಕ್ಷ ಮಹಾಂತೇಶ ಎಂ. ಗುತ್ತೆನ್ನವರ ಹಾಗೂ ಸದಸ್ಯರು ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ ನಿಷ್ಪಕ್ಷಪಾತ ಇಲಾಖಾ ತನಿಖೆ ಹಾಗೂ ರಕ್ಷಣೆಗೆ ಮನವಿ ಮಾಡಿದ್ದಾರೆ. ವಿದ್ಯಾರ್ಥಿಯ ತಲೆಗೆ ಹೊಡೆದಿರುವುದಾಗಿ ಆರೋಪಿಸಲಾದ ಫೋಟೊ, ಬಿಸಿಯೂಟದ ಆಹಾರದಲ್ಲಿನ ಹುಳುಗಳ ಚಿತ್ರಗಳು ಹಾಗೂ ಶಾಲೆಯೊಳಗಿನ ಚಿತ್ರೀಕರಣದ ವಿಡಿಯೋ ದಾಖಲೆಗಳನ್ನು ಅಧಿಕಾರಿಗಳಿಗೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಅಧಿಕಾರಿಗಳ ಸೂಚನೆಯಂತೆ ಡಿಡಿಪಿಐ ಬುಧವಾರ ಶಾಲೆಗೆ ಭೇಟಿ ನೀಡಿ ಪ್ರಾಥಮಿಕ ಪರಿಶೀಲನೆ ನಡೆಸಿದ್ದಾರೆ. ಎಸ್‌ಡಿಎಂಸಿ ಅಧ್ಯಕ್ಷರ ವಜಾ ಬೇಡಿಕೆಯನ್ನು ಪುರಸ್ಕರಿಸಲಾಗದು ಎಂದು ಸ್ಪಷ್ಟಪಡಿಸಿರುವ ಅವರು, ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ. ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದ್ದಾರೆನ್ನಲಾಗಿದೆ. ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ. ನಡುವೆ ಸಮನ್ವಯ ಸಾಧಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚಿಸುವ ಕುರಿತು ತಿಳಿಸಿದ್ದಾರೆ.
ಈ ನಡುವೆ ಎಸ್.ಡಿ.ಎಂ.ಸಿ. ರಾಜ್ಯ ಹಾಗೂ ಜಿಲ್ಲಾ ಸಂಘಟನೆಗಳು ಮಧ್ಯೆ ಪ್ರವೇಶಿಸಿದ್ದು, ಸರ್ಕಾರದ ಮಾರ್ಗಸೂಚಿಯಲ್ಲಿ ಎಸ್.ಡಿ.ಎಂ.ಸಿ ಮೇಲೆ ಸಮನ್ವಯ ಸಮಿತಿ ರಚನೆಗೆ ಅವಕಾಶವಿಲ್ಲ. ಇದು ಎಸ್.ಡಿ.ಎಂ.ಸಿ . ಅಧಿಕಾರ ಮೊಟುಕುಗೊಳಿಸುವ ಪ್ರಯತ್ನವಾಗಿದ್ದು, ಈ ಕುರಿತು ಶಿಕ್ಷಣ ಇಲಾಖೆಯ ಉನ್ನತಮಟ್ಟದಲ್ಲಿ ಮಾತುಕತೆ ನಡೆಸಲು ಮುಂದಾಗಿದೆ ಎನ್ನಲಾಗಿದೆ. ಶಿಕ್ಷಕರೇ, ಎಸ್.ಡಿ.ಎಂ.ಸಿ. ವಿರುದ್ಧ ಪೋಲಿಸ್ ದೂರು ನೀಡಿದ್ದು, ಎಸ್.ಡಿ.ಎಂ.ಸಿ. ಶಿಕ್ಷಕರ ಮೇಲೆ ದೂರು ನೀಡಿಲ್ಲ. ಶಿಕ್ಷಕರು ಮತ್ತು ಎಸ್. ಡಿ.ಎಂ.ಸಿ. ಚರ್ಚೆಯ ಮಧ್ಯೆ ಅಕ್ರಮವಾಗಿ ಪ್ರವೇಶಿಸಿ ಗದ್ದಲ ಮಾಡಿ ಚಿತ್ರೀಕರಿಸಿ ಪ್ರಸಾರ ಮಾಡಿದ ಯುಟ್ಯೂಬರ್ ವಿರುದ್ಧ ದೂರು ನೀಡಿದ್ದೇವೆ ಎಂದು ಅಧ್ಯಕ್ಷ ಮಹಾಂತೇಶ ಗುತ್ತೆನ್ನನವರ ತಿಳಿಸಿದ್ದು ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
ಶಿಕ್ಷಕರ ದಿನಾಚರಣೆಯ ಆಚರಣೆ ಕುರಿತ ಚರ್ಚೆಯಿಂದ ಆರಂಭವಾದ ವಿವಾದ ಇದೀಗ ಇಲಾಖಾ ತನಿಖೆ. ವರೆಗೆ ತಲುಪಿದೆ. ಆರೋಪ, ಪ್ರತ್ಯಾರೋಪಗಳ ಸತ್ಯಾಸತ್ಯತೆ ತನಿಖೆಯಿಂದ ಸ್ಪಷ್ಟವಾಗಬೇಕಿದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















