ದಾಂಡೇಲಿ (ಉತ್ತರ ಕನ್ನಡ) ಸಂ.ಕ. ಸಮಾಚಾರ : ಶಬ್ದ ಮಾಲಿನ್ಯ ನಿಯಂತ್ರಣ ಮತ್ತು ನಿಯಮ 2000 ರನ್ವಯ ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿ.ಎನ್.ಎಸ್.ಎಸ್), 2023 ಕಲಂ 163 ರಡಿ ಪ್ರದತ್ತವಾದ ಅಧಿಕಾರದ ಮೇರೆಗೆ ಸಾರ್ವಜನಿಕ ಸುವ್ಯವಸ್ಥೆಯ ಹಿತದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಯಾವುದೇ ಡಿಜೆ ವ್ಯವಸ್ಥೆಗಳು, ಬೇಸ್ ಬೂಸ್ಟರ್‌ಗಳು, ಮೊಬೈಲ್ ಡಿಜೆ ವಾಹನಗಳು ಹಾಗೂ 75 ಡೆಸಿಬೆಲ್ ಮೀರಿದ ಶಬ್ದ ವೃದ್ಧಿ ಸಾಧನಗಳ ಬಳಕೆಯನ್ನು ಮುಂದಿನ ಆದೇಶದವರೆಗೆ ಸಂಪೂರ್ಣವಾಗಿ ನಿಷೇಧಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ಆದೇಶಿಸಿದ್ದಾರೆ.
ಆದೇಶದಲ್ಲಿ ವಸತಿ ಪ್ರದೇಶಗಳು, ಸೈಲೆಂಟ್ ಝೋನ್ ಗಳು (ಆಸ್ಪತ್ರೆ, ಶಾಲೆ, ನ್ಯಾಯಾಲಯ ಹಾಗೂ ಧಾರ್ಮಿಕ ಸ್ಥಳಗಳಿಂದ 100 ಮೀಟರ್ ವ್ಯಾಪ್ತಿಯೊಳಗಿನ ಪ್ರದೇಶಗಳು), ಇಳಿವು ರಸ್ತೆ/ಸಂಚಾರ ದಟ್ಟಣೆ ಪ್ರದೇಶಗಳು, ಸಮುದಾಯ ಸೂಕ್ಷ್ಮ ಪ್ರದೇಶಗಳು ಸೇರಿ
ಜಿಲ್ಲೆಯಾದ್ಯಂತ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಡಿಜೆ ಅಥವಾ ಹೆಚ್ಚಿನ ಶಬ್ದ ಸಾಧನಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಮುಂದುವೆರದು ಯಾವುದೇ ಸಾರ್ವಜನಿಕ ಕಾರ್ಯಕ್ರಮ, ಮೆರವಣಿಗೆ ಅಥವಾ ಆಚರಣೆಯನ್ನು ಆಯೋಜಿಸುವವರು ಅತೀ ಅವಶ್ಯವಿದ್ದಲ್ಲಿ ಪೂರ್ವ ಲಿಖಿತ ಷರತ್ತುಬದ್ಧ ಮಿತ ಶಬ್ದ ವ್ಯವಸ್ಥೆಗಳಿಗೆ ಮಾತ್ರ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಶಬ್ದ ನಿಯಮಗಳ ಪಾಲನೆಗೆ ಸಂಬಂಧಿಸಿದಂತೆ ಲಿಖಿತ ಮುಚ್ಚಳಿಕೆ ಪತ್ರ ನೀಡಬೇಕು ಹಾಗೂ ಈ ಆದೇಶದ ಉಲ್ಲಂಘನೆ ಮಾಡಿದರೆ ಆಯೋಜಕರು ವೈಯಕ್ತಿಕವಾಗಿ ಹೊಣೆಗಾರರಾಗಿರುತ್ತಾರೆ ಎಂದು ತಿಳಿಸಿದ್ದಾರೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.





















