SK Home Ad
Home ನಮ್ಮ ಜಿಲ್ಲೆ ಶಿವಮೊಗ್ಗ ಪೋಷಕರ ವಿರುದ್ಧ ಡೆತ್‌ನೋಟ್ ಬರೆದು 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

ಪೋಷಕರ ವಿರುದ್ಧ ಡೆತ್‌ನೋಟ್ ಬರೆದು 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

0
99

ಶಿವಮೊಗ್ಗ: ಪೋಷಕರ ವಿರುದ್ಧ ಡೆತ್‌ನೋಟ್ ಬರೆದಿದ್ದಾಳೆ ಎನ್ನಲಾದ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಸೃಷ್ಟಿ ಎಂದು ಗುರುತಿಸಲಾಗಿದೆ. ನಗರದ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ಸೃಷ್ಟಿಯ ಕುಟುಂಬದಲ್ಲಿ ಮೂವರು ಮಕ್ಕಳಿದ್ದು, ರಾಯರ ಆರಾಧನೆ ಹಿನ್ನೆಲೆಯಲ್ಲಿ ಪೋಷಕರು ಇಬ್ಬರು ಮಕ್ಕಳನ್ನು ಕರೆದುಕೊಂಡು ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಸೃಷ್ಟಿಯನ್ನು ಮನೆಯಲ್ಲಿ ಒಬ್ಬಳನ್ನೇ ಬಿಟ್ಟು ಹೋಗಿದ್ದರು ಎಂದು ತಿಳಿದುಬಂದಿದೆ.

ಪೋಷಕರು ಮನೆಗೆ ವಾಪಸ್‌ ಬರುವಷ್ಟರಲ್ಲಿ ಸೃಷ್ಟಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಪೋಷಕರ ವಿರುದ್ಧ ಡೆತ್‌ನೋಟ್ ಬರೆದಿದ್ದಾಳೆ ಎನ್ನಲಾಗಿದ್ದು, ‘ಓದು’ ಎಂದು ಪೋಷಕರು ಒತ್ತಡ ಹಾಕಿದ್ದೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಘಟನೆಗೆ ಸಂಬಂಧಿಸಿದಂತೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಡೆತ್‌ನೋಟ್‌ನಲ್ಲಿನ ಅಂಶಗಳು ಹಾಗೂ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.