SK Home Ad
Home ಅಂಕಣ ಅಂಕಣ ಬರಹ | ಈಶ್ವರ್-ಇದು ಅಸಡ್ಡೆಯಾ.. ವ್ಯಂಗ್ಯವಾ ಸೊಕ್ಕಾ….?!

ಅಂಕಣ ಬರಹ | ಈಶ್ವರ್-ಇದು ಅಸಡ್ಡೆಯಾ.. ವ್ಯಂಗ್ಯವಾ ಸೊಕ್ಕಾ….?!

0
61

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ʻಅದೇನೋ ಉತ್ತರ ಕರ್ನಾಟಕದ ಭಾಷೆಯಂತೆ…’
ಶಾಸಕ ಪ್ರದೀಪ್ ಈಶ್ವರ ಆಡಿದ ಈ ಮಾತು ತಾತ್ಸಾರವಾ, ಉಡಾಫೆಯಾ, ಅಥವಾ ವ್ಯಂಗ್ಯವಾ? ಚಿಕ್ಕಬಳ್ಳಾಪುರವನ್ನು ಪ್ರತಿನಿಧಿಸುವ ಪ್ರದೀಪ್ ಈಶ್ವರ್ ಮಾತಿಗೆ ನಿಂತರೆ ಇಂತಹ ಹತ್ತಾರು ಅಸಡ್ಡೆ, ಅಪ್ರಸ್ತುತ ಅಸಹ್ಯದ, ಧಿಮಾಕಿನ ಮಾತುಗಳು ಅಣಿಮುತ್ತಿನಂತೆ ಉರುಳಿಬಿಡುತ್ತವೆ…!

ಅವರ ಈ ಮಾತಿಗೆ ಈಗ ಉತ್ತರ ಕರ್ನಾಟಕದಾದ್ಯಂತ ಆಕ್ರೋಶ ಎದ್ದಿದೆ. ಇದು ಕೇವಲ ಭಾಷೆಯ ಕುರಿತಾದ ಅಸಡ್ಡೆಯಲ್ಲ. ಉತ್ತರ ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆ, ಬದುಕು, ಜನಜೀವನ, ಪರಂಪರೆಗಳನ್ನೇ ಒಬ್ಬ ಶಾಸಕ, ಅದೂ ಆಡಳಿತ ಪಕ್ಷದ ಶಾಸಕ ಅಸಡ್ಡೆಯಾಗಿ ಕಂಡಿದ್ದಾರೆ ಎನ್ನುವುದಿಲ್ಲಿ ಮುಖ್ಯ.

ಇನ್ನೊಂದು. ಇದು ಉದ್ದೇಶಪೂರ್ವಕವೋ ಅಥವಾ ಅಧಿಕಾರದ ʻಮನಸ್ಥಿತಿ’ಯ ಠೇಂಕಾರವೋ?

ಪ್ರದೀಪ್ ಈಶ್ವರ್ ʻಪರಿಶ್ರಮಿ’ಸುತ್ತಿರುವುದು ವೃತ್ತಿಯಿಂದ, ಯುವ ಸಮೂಹವನ್ನು ಸರ್ಕಾರಿ ಬಾಬುಗಳನ್ನಾಗಿ ಮಾಡಿ, ಅತ್ಯಂತ ಬುದ್ಧಿವಂತ, ಘನತೆವೆತ್ತ ಉದ್ಯೋಗಿಗಳಾಗಿ ನಿರ್ಮಿಸುವ ತರಬೇತಿದಾರರಿವರು.

ವರ್ಷಕ್ಕೆ ಸಾವಿರಾರು ಮಂದಿಗೆ ಕೋಚಿಂಗ್ ಕ್ಲಾಸ್ ನಡೆಸುವ ಈ ʻಪರಿಶ್ರಮಿ’ಗೆ ಜನ ಮನ್ನಣೆ ನೀಡಿ ಶಾಸಕರನ್ನಾಗಿಸಿದರೆ ಠೇಂಕಾರ ಬರುವುದು ಸಹಜ. ಈಗ ಆಗಿರುವುದೂ ಅದೇಯೇನೋ….

ಕಳೆದ ಮೂರು ವರ್ಷಗಳಲ್ಲಿ ಪ್ರದೀಪ್ ಈಶ್ವರ್ ಅವರ ಜನಪ್ರತಿನಿಧಿತ್ವ, ಹಾವ- ಭಾವ, ಆಂಗಿಕ ಭಾಷೆ (ಬಾಡಿ ಲ್ಯಾಂಗ್ವೆಜ್) ಮತ್ತು ಬಾಯಿ ಹಾಗೂ ಮಿದುಳಿನ ನಡುವಿನ ಸಂಬಂಧ ಎಲ್ಲವೂ ಬದಲಾದಂತೆ ತೋರುತ್ತದೆ.

ಅವರ ಮಾತು ಮತ್ತು ಚಲನೆಯಿಂದಲೇ ಹತ್ತಾರು ಸಾರೆ ವಿವಾದಕ್ಕೂ ಸಿಲುಕಿದ್ದಾರೆ. ಹಾಗಂತ ಇಂತಹ ವಿವಾದಗಳಿಂದಲೇ ತಾವು ಜನಪ್ರಿಯರಾಗಬಹುದು ಎಂಬ ಆಸೆ ಅವರಿಗಿದ್ದರೂ ಆಶ್ಚರ್ಯವಿಲ್ಲ.

ಅವರ ಸಹೋದ್ಯೋಗಿ ಶಾಸಕರ ಬಗ್ಗೂ ಅಷ್ಟೇ ಲಘುವಾಗಿ ಮಾತನಾಡಿ ವಿಶ್ವಾಸಾರ್ಹತೆ ಮತ್ತು ಪ್ರೀತಿಯ ಸಂಬಂಧಗಳಿಗೆ ತೊಡಕಾಗಿದ್ದಾರೆ ಎನ್ನಲಡ್ಡಿಯಿಲ್ಲ.

ʻಅದ್ಯಾವುದೋ ಉತ್ತರ ಕರ್ನಾಟಕದ ಭಾಷೆ’ ಎಂದು ಅಸಡ್ಡೆಯ ಮಾತನಾಡಿದ ಪ್ರದೀಪ್ ಈಶ್ವರರನ್ನೇ, ʻಅವರ್ಯಾರೋ ಮಾತು- ತಲೆ ಸಮ ಇಲ್ಲದ ಶಾಸಕನಂತೆ’ ಎಂದರೆ…? ಅಥವಾ ಜನ ನಂಬಿಕೆ ಕಳೆದುಕೊಂಡ ಶಾಸಕರೆಂದರೂ ಈಶ್ವ‌ರ್ ಈ ಟೀಕೆಯನ್ನು ಸಹಿಸಿಕೊಳ್ಳುತ್ತಾರಾ?

ಹಾಗಂತ, ʻಅದೇನೋ ಉತ್ತರ ಕರ್ನಾಟಕ ಭಾಷೆಯಂತೆʼ ಎಂದು ಮಾತಿನ ಓಘದಲ್ಲೋ, ಅಪ್ರಾಸಂಗಿಕವಾಗಿಯೋ, ಅರಿಯದೇ ಆಡಿದ ಮಾತು ಇದಲ್ಲ. ಏಕೆಂದರೆ ಪ್ರದೀಪ್ ಈಶ್ವರ್ ಜ್ಞಾನವಂತ, ಬುದ್ಧಿವಂತ. ಕೆಎಎಸ್, ಐಎಎಸ್, ಐಪಿಎಸ್. ನೀಟ್ ಪರೀಕ್ಷೆಗಳಿಗೆ ಸಿದ್ಧಗೊಳಿಸುವ, ಜನರ ಹತ್ತಿರ ಹೋಗಿ ಕಾಲಿಗೆ ಬಿದ್ದು, ಮಕ್ಕಳ ಸಿಂಬಳ ಒರೆಸಿ ಮನಗೆಲ್ಲುವ ಎಲ್ಲ ಚಾಕಚಕತ್ಯತೆ ಇದೆ. ಹಾಗೇ ಸತ್ಯವನ್ನೂ ಮುಚ್ಚಿಡಲಾಗದ, ʻನಾನು ಕೋಟಿ ಕೋಟಿ ಚೆಲ್ಲಿ ಮತ ಪಡೆದವ’ ಎಂದು ಬಹಿರಂಗವಾಗಿಯೇ ಹೇಳಿಕೊಳ್ಳುವ ʻತಾಕತ್ತು’ ಹೊಂದಿದ್ದಾರಿವರು! ಇಂತಿಪ್ಪ ಪ್ರದೀಪ ಅವರಿಗೆ ರಾಜ್ಯದ ಭಾಷಾ ವೈವಿಧ್ಯ, ಸಾಂಸ್ಕೃತಿಕ ಇತಿಹಾಸ ಮತ್ತು ಪರಂಪರೆಗಳ ಶ್ರೇಷ್ಠತೆಯ ಅರಿವಿಲ್ಲ ಎಂದು ಹೇಗೆ ಊಹಿಸುವುದು? ಏಕೆಂದರೆ ಇವರು ʻಜಾಣʼ!!!

ಪ್ರದೀಪ್ ಈಶ್ವರ್ ಆಡಿರುವ ʻಅದೇನೋ ಉತ್ತರ ಕರ್ನಾಟಕದ ಭಾಷೆಯಂತೆ…’ ಎನ್ನುವುದು ಹಲವು ಜಿಜ್ಞಾಸೆಗಳನ್ನೂ ಹುಟ್ಟಿ ಹಾಕಿದೆ. ಉತ್ತರ ಕರ್ನಾಟಕದ ಗಂಡು ಭಾಷೆ ಹಾಗೂ ಭಾವನೆಯೊಂದಿಗೆ ಹೃದಯಕ್ಕೆ ಹತ್ತಿರವಾದದ್ದು.

ಆದರೆ ಉತ್ತರ ಕರ್ನಾಟಕದ ಭಾಷೆಯನ್ನು ತಮಾಷೆ, ಹಾಸ್ಯಗಳ ಸರಕಾಗಿಸುವ, ಕೀಳಾಗಿ ಕಾಣುವ ಪ್ರವೃತ್ತಿ ಇದೇ ಮೊದಲೇನಲ್ಲ. ಪ್ರದೀಪ್ ಈಶ್ವರ್ ಕೂಡ ಈ ಧೋರಣೆಗೆ ಮೊದಲಿಗರಲ್ಲ. ಹಾಗೇ ಕೊನೆಯವರೂ ಆಗಲಿಕ್ಕಿಲ್ಲ.

ರಾಜ್ಯಕ್ಕೆ ʻಕರ್ನಾಟಕ’ ಎಂದು ಹೆಸರು ಕೊಟ್ಟಿದ್ದೇ ಉತ್ತರ ಕರ್ನಾಟಕದ ಸಂಘಸಂಸ್ಥೆಗಳು. ಕರ್ನಾಟಕವನ್ನು ಒಗ್ಗೂಡಿಸಿದವರೇ ಉತ್ತರ ಕರ್ನಾಟಕದ ಜನ. ಕನ್ನಡ ಉಳಿಸಿ. ಬೆಳೆಸಿ, ಶ್ರೀಮಂತಗೊಳಿಸಿದವರೇ ಉತ್ತರ ಕರ್ನಾಟಕದ ಮಂದಿ.

ಕನ್ನಡಕ್ಕಾಗಿ ಕೈ ಎತ್ತಿ.. ಅದನ್ನು ಕೋಮಲ, ಹಾಗೇ ಗಟ್ಟಿಯಾಗಿ ಸಮೃದ್ಧಗೊಳಿಸಿದವರೇ ಉತ್ತರ ಕರ್ನಾಟಕದ ಮಂದಿ ಮತ್ತು ಭಾಷೆ. ಕರ್ನಾಟಕ ಏಕೀಕರಣ ಚಳವಳಿಯ ಬೀಜ ಬಿತ್ತಿ ವ್ಯಾಪಿಸುವಂತಾದದ್ದು ಇದೇ ಧಾರವಾಡ ಹಾಗೂ ಉತ್ತರ ಕರ್ನಾಟಕದಲ್ಲಿ…!

ಭಾಷೆಗೆ ಧಕ್ಕೆ ಬಂದಾಗ ಹೋರಾಡಿದ್ದು ಇದೇ ಉತ್ತರ ಕರ್ನಾಟಕ ಮಂದಿ. ಗೋಕಾಕ್ ಚಳವಳಿ, ಭಾಷಾ ಚಳವಳಿ, ರೈತರ ನೆಲ-ಜಲ, ಸಂಸ್ಕೃತಿ, ಪರಂಪರೆಗಳ ರಕ್ಷಣೆಗಾಗಿನ ಹೋರಾಟಗಳಿರಬಹುದು… ಇವೆಲ್ಲ ನಡೆದದ್ದು ಇಲ್ಲಿಯೇ.

ಕನ್ನಡ ಸಾಂಸ್ಕೃತಿಕ ನಕಾಶೆಯನ್ನು ಬಿಚ್ಚಿಕೊಂಡು ಒಮ್ಮೆ ಕಣ್ಣಾಡಿಸಿ. ಏನು ಕಾಣುತ್ತೇವೆ ಅಲ್ಲಿ…? ಬಸವಣ್ಣನವರ ವಚನ, ಅಕ್ಕಮಹಾದೇವಿರು ಆತ್ಮಾನುಸಂಧಾನ, ಸರ್ವಜ್ಞರ ತ್ರಿಪದಿ, ದಾಸ ಸಾಹಿತ್ಯದ ಭಕ್ತಿರಸ, ರನ್ನ, ಪಂಪರ ನೆರಳು… ಓಹ್.. ಒಂದೇ ಎರಡೇ…!? ಜ್ಞಾನಪೀಠ ಪುರಸ್ಕೃತರು, ನೂರಾರು ಸಂಖ್ಯೆಯ ವಿದ್ವಾಂಸರು, ಜೊತೆಗೆ ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಕರುನಾಡನ್ನು ಕಟ್ಟುವ ಕೈಂಕರ್ಯದಲ್ಲಿ ತೊಡಗಿಸಿಕೊಂಡವರೆಲ್ಲ ಉತ್ತರ ಕರ್ನಾಟಕದವರು.

ಹಾಗೆಯೇ ಕನ್ನಡಿಗರ ಹೃದಯ ಶ್ರೀಮಂತಿಕೆಯನ್ನು ಭಾರತ ಮತ್ತು ಇಡೀ ವಿಶ್ವಕ್ಕೆ ತೋರಿಸಿದವರು ಇಲ್ಲಿನವರೇ. ವಿಷಾದನೀಯ ಸಂಗತಿ ಎಂದರೆ, ಉತ್ತರ ಕರ್ನಾಟಕ ಭಾಷೆ, ಪರಂಪರೆ, ಉಡುಗೆ-ತೊಡುಗೆ, ಸಂಸ್ಕೃತಿಗಳು ಕೀಳಾಗಿ ಪ್ರದರ್ಶಿತವಾಗುತ್ತಿರುವುದು. ಹಾಗೇ ಹಾಸ್ಯವಾಗಿ, ವ್ಯಂಗ್ಯವಾಗಿ ಕಾಣುವ “ಎಲೈಟ್’ ಕ್ರೌರ್ಯ ಬೆಳೆದು ಬಿಟ್ಟಿದೆ!

ಒಂದು ಭಾಷೆ, ಅದರ ಹಿಂದಿನ ಬದುಕನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಭಾಷೆ ಎಂದರೆ ಕೇವಲ ಪದಗಳ ಜೋಡಣೆಯಲ್ಲ. ಒಂದು ನೆಲದ ಸಂಸ್ಕೃತಿ, ನೋವು, ನಗು ಮತ್ತು ಒಟ್ಟಾರೆ ಬದುಕಿನ ಸಮಗ್ರ ಅನುಭವ. ಈ ಪ್ರಾದೇಶಿಕ ಭಾಷೆಗಳ ಮಹತ್ವ ಮತ್ತು ಬೆಳವಣಿಗೆಗಳೇ ಹಾಗೆ. ಅವನ್ನು ಕೇವಲ ಪ್ರಾದೇಶಿಕ ರೂಪದಲ್ಲೇ ನೋಡಬೇಕು.
ಕನ್ನಡವನ್ನೇ ನೋಡಿ. ಕನ್ನಡದ ಕಾಗುಣಿತ, ಅದರ ಶಿಷ್ಟ ಪರಂಪರೆ ಎಲ್ಲವೂ ಬರವಣಿಗೆಯಲ್ಲಿ ಒಂದೇ ಆಗಿರುತ್ತವೆ. ಆದರೆ ಉಚ್ಚಾರಣೆ, ಹಾವ-ಭಾವ ಹಾಗೂ ಹೇಳುವ ರೀತಿ ವಿಭಿನ್ನವಾಗಿರುತ್ತದೆ.
ಧಾರವಾಡ ಕನ್ನಡವೇ ಕನ್ನಡದ ಏಕೈಕ ರೂಪವಲ್ಲ. ಹಾಗೇ ಮೈಸೂರು ಅಥವಾ ಬೆಂಗಳೂರು ಕನ್ನಡವೊಂದೇ ಭಾಷೆಯಾಗದು. ಮಂಗಳೂರು, ಉತ್ತರ ಕನ್ನಡ, ಮಂಡ್ಯ ಎಲ್ಲ ಕಡೆಯ ಮಾತುಗಳೂ ಸೇರಿ ಕನ್ನಡವನ್ನು ಸಮೃದ್ಧಗೊಳಿಸಿವೆ. ನಾಡಿನ ವೈವಿಧ್ಯವನ್ನು ಶ್ರೀಮಂತಗೊಳಿಸಿವೆ.

ಎಲ್ಲ ಭಾಷೆಗಳ ವಿಷಯದಲ್ಲೂ ಇದು ಸತ್ಯ. ಹಿಂದಿಯನ್ನೇ ತೆಗೆದುಕೊಳ್ಳಿ, ದೆಹಲಿ ಹಿಂದಿಯೇ ಬೇರೆ. ಉತ್ತರ ಪ್ರದೇಶ ಹಿಂದಿಯೇ ಬೇರೆ. ಮಧ್ಯಪ್ರದೇಶದ, ಬಿಹಾರಿಗಳದ್ದೇ ಬೇರೆ. ಅದೇ ಕಾಶ್ಮೀರಿ ಹಿಂದಿನೂ ವಿಭಿನ್ನ, ಬಂಗಾಳಿ, ತೆಲುಗು ಎಲ್ಲ ಭಾಷೆಗಳ ವಿಷಯದಲ್ಲೂ ಹಾಗೇ. ಎಲ್ಲ ಬಗೆಯ ಆಡು ಮಾತುಗಳಿಂದಲೇ ಒಟ್ಟಾರೆ ಭಾಷೆ ರೂಪುಗೊಂಡಿರುತ್ತದೆ. ಈ ವಿಭಿನ್ನತೆಯಿಂದಲೇ ಆಯಾ ಭಾಷೆಗಳ ಉಳಿವು ಮತ್ತು ಸಾಂಸ್ಕೃತಿಕ ಘನತೆ ಮೈದಾಳಿರುತ್ತವೆ.

ಉತ್ತರ ಕರ್ನಾಟಕದ ಭಾಷೆಯನ್ನು ಹಾಸ್ಯಕ್ಕೆ ಬಳಸುವುದು ತಪ್ಪಲ್ಲ. ಆದರೆ ಭಾಷೆಯನ್ನು ಮಾತನಾಡುವ ಜನರನ್ನೇ ಹಾಸ್ಯಾಸ್ಪದರಾಗಿ ಚಿತ್ರಿಸುವುದು ತಪ್ಪು. ಆಡುವ ಭಾಷೆ ಮತ್ತು ಜನರನ್ನು ಪ್ರತ್ಯೇಕವಾಗಿ ಅಪಹಾಸ್ಯ ಮಾಡುತ್ತಿರುವ ಮನರಂಜನೆ ಹೆಸರಿನ ಪೂರ್ವಗ್ರಹ, ಮಾನಸಿಕವಾಗಿ ಜನರಲ್ಲಿ ಅದೇ ರೀತಿಯ ಪ್ರಜ್ಞೆ ಬೆಳೆಸುವ ಅಪಾಯ ಇರುತ್ತದೆ.

ಈಗ ಉತ್ತರ ಕರ್ನಾಟಕದವರೆಂದರೆ ಮುಗ್ಧರು, ಬೊದ್ದುಗಳು, ಬಡವರು, ಧೋತಿ, ಪಂಚೆ, ಸೀರೆ ಸಂಸ್ಕೃತಿಯವರು, ಏನೂ ಲೋಕ ಜ್ಞಾನ ಅರಿಯದವರು ಎನ್ನುವ ಭಾವ ಮೂಡಿಸುವ ವಿಫಲ ಯತ್ನ ನಡೆಯುತ್ತದೆ.

ಸಿನೆಮಾಗಳನ್ನೇ ನೋಡಿ. ಉತ್ತರ ಕರ್ನಾಟಕದ ಭಾಷೆ ಬಳಸುವಾಗ ವ್ಯಕ್ತಿಯನ್ನು ಬೊದ್ಧನಂತೆ, ಕೂಲಿನಾಲಿಯಾಗಿಯೇ ಬಿಂಬಿಸುತ್ತಾರೆ. ಹಾಸ್ಯದಲ್ಲೂ ಕೂಡ ಅಷ್ಟೇ.

ಇಷ್ಟು ವರ್ಷಗಳಲ್ಲಿ ಎಂದಾದರೂ ಉತ್ತರ ಕರ್ನಾಟಕ ಭಾಷೆಯಲ್ಲೇ ನಾಯಕರಾಗಿ, ಸಿನೆಮಾದ ಮಹಾನಾಯಕರಾರಾದರೂ ಪಾತ್ರ ಮಾಡಿದ್ದಾರಾ? ಉತ್ತರ ಕರ್ನಾಟಕ ಭಾಷೆಯನ್ನೇ ಬಳಸಿಕೊಂಡು ನಾಯಕ ನಾಯಕಿಯರು ಸಿನೆಮಾ ರಂಗದಲ್ಲಿ ಬೆಳೆದಿದ್ದಾರಾ? ಇಲ್ಲ.

ಉತ್ತರ ಕರ್ನಾಟಕದ ಭಾಷೆಯನ್ನು ಕೇವಲ ಹಾಸ್ಯಕ್ಕೆ ಸೀಮಿತಗೊಳಿಸದಿರಿ. ಅದೇ ಭಾಷೆ ಮಾತನಾಡುವ ವ್ಯಕ್ತಿಗೆ ನಾಯಕ ಸ್ಥಾನ, ಪ್ರೇಮಿ, ವಿಜ್ಞಾನಿ, ವೈದ್ಯ, ಶಿಕ್ಷಕ ಇಂತಹ ಗಂಭೀರ ಸಾಮಾಜಿಕ ಹೊಣೆಗಾರಿಕೆಯ ಪಾತ್ರಗಳನ್ನು ಏಕೆ ಕೊಡುವುದಿಲ್ಲ? ಪೂರ್ವಗ್ರಹ ಏಕೆ? ಈ ಧೋರಣೆ ವಿರುದ್ಧ 2014ರ ಅಕ್ಟೋಬರ್‌ನಲ್ಲಿ ಹುಬ್ಬಳ್ಳಿಯ ಯುವ ತಂತ್ರಜ್ಞ, ರೋಷನ್ ರಾಯ್ಕರ್ ಎನ್ನುವಾತ, ವಾಣಿಜ್ಯ ಸಿನೆಮಾಗಳು ಹಾಗೂ ಟಿವಿಗಳಲ್ಲಿ ಉತ್ತರ ಕರ್ನಾಟಕವನ್ನು ಗೇಲಿ ಮಾಡುವವರನ್ನು ಅನಿಮೇಷನ್ ಮೂಲಕ ತೋರಿಸಿ, ಸೃಜನಶೀಲತೆಯನ್ನು ಎತ್ತಿ ಹಿಡಿದರು.

ಹಾಗೇ ರಂಗಭೂಮಿಯ ಯಶವಂತ ಸರದೇಶಪಾಂಡೆ, ರಾಜು ತಾಳಿಕೋಟೆ, ಗಂಗಾವತಿ ಪ್ರಾಣೇಶ್ ಹೀಗೆ ಹಲವು ಮಂದಿ ಉತ್ತರ ಕರ್ನಾಟಕ ಭಾಷೆಯ ಮಹತ್ವವನ್ನು ತೋರಿಸಿದವರು. ʻಅವರೇನ್ರೀ ಉತ್ತರ ಕರ್ನಾಟಕದವರು… ಬೆಂಗಳೂರಿಗೆ ಅಂತ ಬಾರ್ತಾರೆ… ಇಲ್ಲೇ ಝಾಂಡಾ ಊರಿ ಬಿಡ್ತಾರೆ… ಎಂದು ಕೇಳಿದವರು ಈಗ ಪ್ರಭುತ್ವದಲ್ಲಿದ್ದಾರೆ!. ಸೋನುನಿಗಮ್ ಅಂಥವರು, ಕನ್ನಡ ಮಾತಾಡೊಲ್ಲ ಎಂದು ಈಟಿ, ಬಿ.ಟಿ ಮಂದಿ ಹಂಗಿಸಿದಾಗ ಪ್ರತಿಭಟಿಸಿದವರು ಉತ್ತರ ಕರ್ನಾಟಕದ ಮಂದಿ..

ರಾಜ್ಯ ಇಡೀ ಜನರದ್ದು ಎನ್ನುವ ಅಭಿಮಾನ, ಪ್ರಜ್ಞೆ ಆಳುವವರಿಗೆ ಇರಬೇಕು. ʻಅದೇನೋ ಉತ್ತರ ಕರ್ನಾಟಕ ಭಾಷೆಯಂತೆ’ ಎನ್ನುವವರು ಉತ್ತರ ಭಾರತದಿಂದಲೋ, ಬೇರೆ ರಾಜ್ಯಗಳಿಂದಲೋ, ಬಾಂಗ್ಲಾದಿಂದಲೋ ಬಂದು ನೆಲೆಸಿದವರ ಬಗ್ಗೆ ಧ್ವನಿ ಎತ್ತುತ್ತಾರಾ? ಇಲ್ಲವಲ್ಲ..!? ಏಕೆಂದರೆ ಅವರ ಟ್ಯೂಷನ್ ನಡೆಯುವುದೇ ಅಲ್ಲಿಯ ಮಂದಿಯಿಂದ! ಬೆಂಗಳೂರಿನ ಥಳಕು, ಬಳಕು, ಬಿನ್ನಾಣ ಮತ್ತು ಹಣದ ಹೊಳೆಯ ಹರಿವು ಕೇವಲ ಬೆಂಗಳೂರಿನವರಿಂದ ಅಲ್ಲ ಎನ್ನುವ ಕನಿಷ್ಟ ಪರಿಜ್ಞಾನವೂ ಇವರಿಗಿಲ್ಲ.

ಪ್ರದೀಪ್‌ ಈಶ್ವ‌ರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಹಾಗೆಯೇ ಅದರೊಟ್ಟಿಗೆ ಉತ್ತರ ಕರ್ನಾಟಕ ಭಾಷೆ, ಜನ, ಸಂಸ್ಕೃತಿಯನ್ನು, ಕಲ್ಯಾಣ ಕರ್ನಾಟಕದ ಶ್ರೀಮಂತಿಕೆ ಮತ್ತು ವೈವಿಧ್ಯತೆಯನ್ನು, ಕರಾವಳಿಯ ಕಲಾ ಸಿರಿಯನ್ನು, ವ್ಯಾವಹಾರಿಕ ಚತುರತೆಯನ್ನು, ಬದುಕು-ಪರಂಪರೆಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಅಗತ್ಯತೆ ಬಗ್ಗೆ, ಹಾಗೇ ನಮ್ಮನ್ನು ಟೀಕೆ ಮಾಡಿದರೆ ಜೋಕೆ ಎನ್ನುವ ಎಚ್ಚರಿಕೆಯನ್ನು ನೀಡುವ ಕಾಲವೂ ಕೂಡ ಈಗ ಬಂದಿದೆಯಲ್ಲವೇ..!? ಹಾಗೇ ಈಶ್ವರರಂಥವರ ನಾಲಿಗೆಗೆ ನಾಡ ಹಬ್ಬ ಆಚರಣೆಯ ಈ ಸಂದರ್ಭದಲ್ಲಿ ನಾಡದೊರೆ ಲಗಾಮು ಹಾಕಬೇಕಿದೆ… “