ಹುಬ್ಬಳ್ಳಿ : ರಾಜ್ಯದ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಕೋರಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಅ.12 ರಂದು ನವದೆಹಲಿಯಲ್ಲಿ ಕರ್ನಾಟಕದ ಕಬ್ಬು ಬೆಳೆಗಾರರ ನಿಯೋಗವು ತಮ್ಮನ್ನು ಭೇಟಿಯಾಗಿ ಮೂರು ಪ್ರಮುಖ ಸಮಸ್ಯೆಗಳ ಬಗ್ಗೆ ದೂರು ನೀಡಿತ್ತು. ಆ ಹಿನ್ನೆಲೆಯಲ್ಲಿ ಈ ಪತ್ರ ಬರೆದಿರುವುದಾಗಿ ಸಚಿವರು ತಿಳಿಸಿದ್ದಾರೆ.
ಪತ್ರದಲ್ಲಿರುವ 3 ಪ್ರಮುಖ ಅಂಶಗಳು:
1. ಸಕ್ಕರೆ ಇಳುವರಿ ಕಡಿಮೆ ತೋರಿಸಲಾಗುತ್ತಿದೆ:
ರೈತರು ನೀಡಿರುವ ದೂರಿನ ಪ್ರಕಾರ, ಕೆಲವು ಸಕ್ಕರೆ ಕಾರ್ಖಾನೆಗಳು ನಿಜವಾದ ಸಕ್ಕರೆ ಇಳುವರಿಗಿಂತ ಕಡಿಮೆ ಇಳುವರಿ ತೋರಿಸುತ್ತಿವೆ. ಇದರಿಂದ ಕಬ್ಬಿನ ದರ ನಿಗದಿಯಲ್ಲಿ ವ್ಯತ್ಯಾಸವಾಗಿ ರೈತರಿಗೆ ಆರ್ಥಿಕ ನಷ್ಟವಾಗುತ್ತಿದೆ.
2. ತೂಕದಲ್ಲಿ ವ್ಯತ್ಯಾಸ:
ಕಾರ್ಖಾನೆಯಲ್ಲಿ ದಾಖಲಾಗುವ ಕಬ್ಬಿನ ತೂಕ ಮತ್ತು ಹೊರಗಿನ ತೂಕದ ಯಂತ್ರದಲ್ಲಿ ತೋರಿಸುವ ತೂಕದ ನಡುವೆ ವ್ಯತ್ಯಾಸವಿದೆ. ಇದರಿಂದ ರೈತರಿಗೆ ಕಡಿಮೆ ಹಣ ಪಾವತಿಯಾಗುತ್ತಿದೆ ಎಂಬ ದೂರು ಕೇಳಿಬಂದಿದೆ.
3. ಯಂತ್ರದಿಂದ ಕಟಾವು ಮಾಡಿದ ಕಬ್ಬಿಗೆ ಶೇ.8 ಕಡಿತ:
ಯಾಂತ್ರಿಕವಾಗಿ ಕಟಾವು ಮಾಡಿದ ಕಬ್ಬಿಗೆ ಶೇ.8 ರಷ್ಟು ತೂಕವನ್ನು ಕಡಿತ ಮಾಡಲಾಗುತ್ತಿದೆ. ಇದು ಇತರೆ ರಾಜ್ಯಗಳಿಗಿಂತ ಅಧಿಕವಾಗಿದ್ದು, ಯಂತ್ರದ ಕಟಾವುಗೆ ಮುಂದಾಗುವ ರೈತರಿಗೆ ಹೆಚ್ಚುವರಿ ಆರ್ಥಿಕ ಹೊರೆಯಾಗುತ್ತಿದೆ.
ಕೇಂದ್ರ ಸಚಿವರ 4 ಬೇಡಿಕೆಗಳು:
(i) ಇಳುವರಿ ಪರಿಶೀಲನೆ: ಕಾರ್ಖಾನೆಗಳು ತೋರಿಸುವ ಸಕ್ಕರೆ ಇಳುವರಿ ಅಂಕಿಅಂಶಗಳ ಸ್ವತಂತ್ರ ಪರಿಶೀಲನೆ ನಡೆಸಬೇಕು. ಪಾರದರ್ಶಕತೆಗಾಗಿ ಪ್ರಮುಖ ಕಬ್ಬು ಬೆಳೆಯುವ ಪ್ರದೇಶಗಳಲ್ಲಿ ಇಳುವರಿ ಪರೀಕ್ಷಾ ಕೇಂದ್ರ / ಚೆಕ್ ಪೋಸ್ಟ್ ಸ್ಥಾಪಿಸುವ ಬಗ್ಗೆಯೂ ಪರಿಶೀಲಿಸಬೇಕು.
(ii) ತೂಕದ ಯಂತ್ರಗಳ ತಪಾಸಣೆ: ರಾಜ್ಯದ ಸಕ್ಷಮ ಪ್ರಾಧಿಕಾರಗಳು ಕಾರ್ಖಾನೆಗಳಲ್ಲಿರುವ ತೂಕದ ಯಂತ್ರಗಳ ನಿಯಮಿತ ಮಾಪನಾಂಕ ನಿರ್ಣಯ, ಪರಿಶೀಲನೆ ಮತ್ತು ತಪಾಸಣೆ ನಡೆಸಬೇಕು.
(iii) ಕಡಿತದ ಮರುಪರಿಶೀಲನೆ: ಯಂತ್ರದ ಕಟಾವಿನ ಕಬ್ಬಿಗೆ ಮಾಡುವ ಶೇ.8 ರಷ್ಟು ಕಡಿತವು ಸಮರ್ಥನೀಯವಾಗಿದೆಯೇ ಎಂದು ಸಕ್ಕರೆ ಕಾರ್ಖಾನೆಗಳು ಮತ್ತು ರೈತ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಮರುಪರಿಶೀಲಿಸಬೇಕು.
(iv) ರಾಜ್ಯ ಸಲಹಾ ಬೆಲೆ (SAP) ಘೋಷಿಸಿ: ಕೇಂದ್ರ ಸರ್ಕಾರ ನಿಗದಿಪಡಿಸುವ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ಗಿಂತ ಹೆಚ್ಚಿನ ಬೆಲೆ ನೀಡುವಂತೆ ರಾಜ್ಯ ಸರ್ಕಾರಗಳು SAP ಘೋಷಿಸಬೇಕು. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ ರಾಜ್ಯಗಳು SAP ನೀಡುತ್ತಿವೆ. ತಮಿಳುನಾಡು ಪ್ರತಿ ಮೆಟ್ರಿಕ್ ಟನ್ಗೆ 709.5 ರೂ. ವಿಶೇಷ ನೆರವು ನೀಡುತ್ತಿದೆ. ಕರ್ನಾಟಕದ ರೈತರ ಬೇಡಿಕೆಯಂತೆ ರಾಜ್ಯ ಸರ್ಕಾರವೂ ಸೂಕ್ತ SAP ಪರಿಗಣಿಸಬೇಕು ಎಂದು ಜೋಶಿ ಮನವಿ ಮಾಡಿದ್ದಾರೆ.
ಈ ಸಮಸ್ಯೆಗಳ ಪರಿಶೀಲನೆಗಾಗಿ ನೀತಿ ಆಯೋಗದ ಮಾಜಿ ಸದಸ್ಯ ಪ್ರೊ. ರಮೇಶ್ ಚಂದ್ ಅಧ್ಯಕ್ಷತೆಯಲ್ಲಿ ಈಗಾಗಲೇ ಸಮಿತಿ ರಚಿಸಲಾಗಿದೆ. ಈ ಸಮಿತಿಯು ರಾಜ್ಯ ಸರ್ಕಾರ, ಎಲ್ಲಾ ರಾಜ್ಯಗಳ ರೈತ ಪ್ರತಿನಿಧಿಗಳು ಮತ್ತು ಸಕ್ಕರೆ ಕಾರ್ಖಾನೆಗಳ ಸಂಘಗಳೊಂದಿಗೆ ಸಮಾಲೋಚನೆ ನಡೆಸಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.




















