SK Home Ad
Home ನಮ್ಮ ಜಿಲ್ಲೆ ರಾಯಚೂರು ಮಂತ್ರಾಲಯದಲ್ಲಿ 50 ಕೋಟಿ ವೆಚ್ಚದ ನೀರು ಸಂಗ್ರಹಣಾ ಜಲಾಶಯ ನಿರ್ಮಾಣಕ್ಕೆ ಭೂಮಿಪೂಜೆ

ಮಂತ್ರಾಲಯದಲ್ಲಿ 50 ಕೋಟಿ ವೆಚ್ಚದ ನೀರು ಸಂಗ್ರಹಣಾ ಜಲಾಶಯ ನಿರ್ಮಾಣಕ್ಕೆ ಭೂಮಿಪೂಜೆ

0
66

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತರಿಗೆ ನೀರಿನ ಸಮಸ್ಯೆಯಾಗದಂತೆ ಸೂಕ್ತ ನೀರಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮಂತ್ರಾಲಯದಲ್ಲಿ ನೀರು ಸಂಗ್ರಹಣಾ (ಇಂಪೌಂಡಿಂಗ್) ಜಲಾಶಯ ನಿರ್ಮಾಣಕ್ಕೆ ಶ್ರೀರಾಘವೇಂದ್ರ ಸ್ವಾಮಿಗಳು ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಸಾನ್ನಿಧ್ಯದಲ್ಲಿ ಭೂಮಿಪೂಜೆಯನ್ನು ಎಚ್‌ಎಎಲ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ರವಿ ನೆರವೇರಿಸಿದರು

50 ಕೋಟಿ ರೂ. ವೆಚ್ಚದಲ್ಲಿ ಜಲಾಶಯದ ನಿರ್ಮಾಣವಾಗಲಿದ್ದು, ಬೆಂಗಳೂರಿನ ಹಿಂದುಸ್ತಾನ್ ಏರೋನಾಟಿಕ್ ಲಿಮಿಟೆಡ್(ಎಚ್‌ಎಎಲ್)ನ ಸಿಎಸ್‌ಆರ್ ಅನುದಾನದಲ್ಲಿ ನಿರ್ಮಾಣ ಮಾಡುತ್ತಿದೆ. ಈ ಜಲಾಶಯದ ನಿರ್ಮಾಣಕ್ಕಾಗಿ ಶ್ರೀಮಠದ 40 ಎಕರೆ ಪ್ರದೇಶವನ್ನು ಮೀಸಲಿಡಲಾಗಿದೆ. ಈ ಜಲಾಶಯದ ಯೋಜನೆ, ವಿನ್ಯಾಸವನ್ನು ಹಾಗೂ ಅಂದಾಜು ವೆಚ್ಚದ ಸಿದ್ಧತೆ ಜವಾಬ್ದಾರಿಯನ್ನು ಬೆಂಗಳೂರಿನ ಇಐ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ವಹಿಸಲಾಗಿದೆ.

ಮಂತ್ರಾಲಯ ಕ್ಷೇತ್ರವು ತುಂಗಭದ್ರಾ ನದಿಯ ದಡದಲ್ಲಿದ್ದರೂ ನದಿಯಲ್ಲಿನ ನೀರಿನ ಹರಿವು ಋತುಮಾನಕ್ಕೆ ಅನುಗುಣವಾಗಿರುತ್ತದೆ ಮತ್ತು ಮಳೆಗಾಲದಲ್ಲಿ ನದಿಯ ಹರಿವು ಜಲಾನಯನ ಪ್ರದೇಶಗಳಲ್ಲಿ ಆಗುವ ಮಳೆಯನ್ನೇ ಅವಲಂಬಿಸಿರುತ್ತದೆ. ಮಂತ್ರಾಲಯದಲ್ಲಿ ನೀರನ್ನು ಸಂಗ್ರಹಿಸಿಡುವ ಜಲಾಶಯವಿಲ್ಲದ ಯಾತ್ರಾರ್ಥಿಗಳು ಹಾಗೂ ಗ್ರಾಮಸ್ಥರು ಮೇಲಿಂದ ಮೇಲೆ ನೀರಿನ ಅಭಾವವನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಸಮಸ್ಯೆಯನ್ನು ಪರಿಹರಿಸುವ ದೂರದೃಷ್ಟಿಯಿಂದ ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸಿ ಬೇಸಿಗೆ ಸಂದರ್ಭದಲ್ಲಿ ನೀರಿನ ಬಳಕೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ.

ಎಚ್ಎಎಲ್‌ನ ಎಚ್.ಆರ್. ಬಾಲಸುಬ್ರಹ್ಮಣ್ಯಂ, ಅಧಿಕಾರಿಗಳಾದ ಮಂಜುನಾಥ, ರಮೇಶ. ರಂಗನಾಥ ಹಾಗೂ ಶ್ರೀಮಠದ ವ್ಯವಸ್ಥಾಪಕ ಶ್ರೀನಿವಾಸರಾವ್, ಪಂಡಿತರು, ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.