SK Home Ad
Home ಸಿನಿ ಮಿಲ್ಸ್ ಬ್ರಾಹ್ಮಿ ಮುಹೂರ್ತದಲ್ಲಿ ಬಿಡುಗಡೆಯಾದ ‘ರಾಮಾಯಣ’ ಟ್ರೈಲರ್: ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅಬ್ಬರ

ಬ್ರಾಹ್ಮಿ ಮುಹೂರ್ತದಲ್ಲಿ ಬಿಡುಗಡೆಯಾದ ‘ರಾಮಾಯಣ’ ಟ್ರೈಲರ್: ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅಬ್ಬರ

0
53

ಮುಂಬೈ: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಮಹಾಕಾವ್ಯ ‘ರಾಮಾಯಣ’ ಚಿತ್ರದ ಮೊದಲ ಟ್ರೈಲರ್‌ ಗುರುವಾರ ಬ್ರಾಹ್ಮಿ ಮುಹೂರ್ತದಲ್ಲಿ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.

ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಮಹತ್ವಾಕಾಂಕ್ಷೆಯ ಈ ಚಿತ್ರದಲ್ಲಿ ಕನ್ನಡದ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ, ರಣಬೀರ್ ಕಪೂರ್ ಶ್ರೀರಾಮನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ.

ಬೆಳಗ್ಗೆ 4.15ಕ್ಕೆ ಬಿಡುಗಡೆಯಾದ ಟ್ರೈಲರ್‌ಗೆ “The Ramayana Trailer. This is where the EPIC BEGINS” ಎಂಬ ಟ್ಯಾಗ್‌ಲೈನ್ ನೀಡಲಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಟ್ರೈಲರ್ ಲಕ್ಷಾಂತರ ವೀಕ್ಷಣೆಗಳನ್ನು ಪಡೆದು ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದುಕೊಂಡಿದೆ.

ಸುಮಾರು 4 ನಿಮಿಷ 10 ಸೆಕೆಂಡುಗಳ ಅವಧಿಯ ಟ್ರೈಲರ್‌ನಲ್ಲಿ ಧರ್ಮ ಮತ್ತು ಅಧರ್ಮದ ನಡುವಿನ ಮಹಾಸಂಗ್ರಾಮವನ್ನು ಭವ್ಯವಾಗಿ ಕಟ್ಟಿಕೊಡಲಾಗಿದೆ. ಅತ್ಯಾಧುನಿಕ VFX, ಅದ್ದೂರಿ ಯುದ್ಧದ ದೃಶ್ಯಗಳು ಹಾಗೂ ಭವ್ಯ ಸೆಟ್‌ಗಳು ಚಿತ್ರದ ಭವ್ಯತೆಯನ್ನು ಅನಾವರಣಗೊಳಿಸುತ್ತವೆ.

ಟ್ರೈಲರ್‌ನ ಪ್ರಮುಖ ಆಕರ್ಷಣೆಯಾಗಿ ರಾವಣನ ಪಾತ್ರದಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಇನ್ನು ಅಯೋಧ್ಯೆಯ ಸುಂದರ ಸನ್ನಿವೇಶಗಳ ನಡುವೆ ರಣಬೀರ್ ಕಪೂರ್ ಶ್ರೀರಾಮನಾಗಿ ಮತ್ತು ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ತಮ್ಮ ಸಹಜ ಅಭಿನಯದ ಮೂಲಕ ಮನಗೆದ್ದಿದ್ದಾರೆ. ರಾಮ-ಸೀತೆಯ ಭಾವನಾತ್ಮಕ ಕ್ಷಣಗಳು, ವನವಾಸದ ಸನ್ನಿವೇಶಗಳು ಹಾಗೂ ಲಕ್ಷ್ಮಣನಾಗಿ ರವಿ ದುಬೆ ಅವರ ಪಾತ್ರಕ್ಕೂ ಟ್ರೈಲರ್‌ನಲ್ಲಿ ಮಹತ್ವದ ಸ್ಥಾನ ನೀಡಲಾಗಿದೆ.

ಬಿಗ್‌ ಬಜೆಟ್ ಸಿನಿಮಾ: ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಚಿತ್ರ ‘ರಾಮಾಯಣ’ ಎಂದು ಹೇಳಲಾಗುತ್ತಿದ್ದು, ಸುಮಾರು ₹4,000 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಪೌರಾಣಿಕ ಕಥಾನಕವನ್ನು ವಿಶ್ವಮಟ್ಟದ ತಾಂತ್ರಿಕ ಗುಣಮಟ್ಟದೊಂದಿಗೆ ತೆರೆಗೆ ತರುವ ಪ್ರಯತ್ನಕ್ಕೆ ಟ್ರೈಲರ್ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಸಿನಿಮಾ ಬಿಡುಗಡೆಯ ಕುರಿತು ಅಭಿಮಾನಿಗಳ ನಿರೀಕ್ಷೆ ಇನ್ನಷ್ಟು ಹೆಚ್ಚಿಸಿದೆ.