SK Home Ad
Home ನಮ್ಮ ಜಿಲ್ಲೆ ಮೈಸೂರು ಇಟ್ಟಿಗೆ ಗೂಡು ಕುಸಿದು ದುರಂತ: ಬಿಸಿ ಬೂದಿಯಲ್ಲಿ ಸಿಲುಕಿ ಮೂವರು ಕಾರ್ಮಿಕರ ಸಾವು

ಇಟ್ಟಿಗೆ ಗೂಡು ಕುಸಿದು ದುರಂತ: ಬಿಸಿ ಬೂದಿಯಲ್ಲಿ ಸಿಲುಕಿ ಮೂವರು ಕಾರ್ಮಿಕರ ಸಾವು

0
22

ಮೈಸೂರು: ಇಟ್ಟಿಗೆ ಗೂಡು ಕುಸಿದು ಬಿದ್ದ ಪರಿಣಾಮ, ಬಿಸಿ ಇಟ್ಟಿಗೆ ಮತ್ತು ಉರಿಯುತ್ತಿದ್ದ ಬೂದಿಯ ಅಡಿಯಲ್ಲಿ ಸಿಲುಕಿ ಮೂವರು ಕಾರ್ಮಿಕರು ದಾರುಣವಾಗಿ ಮೃತಪಟ್ಟ ಘಟನೆ ತಿ. ನರಸೀಪುರ ತಾಲ್ಲೂಕಿನ ಬೂದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಬೂದಹಳ್ಳಿ ಗ್ರಾಮದ ರಾಜೇಶ್ (32), ನಾರಾಯಣ (53) ಮತ್ತು ನಾಗರಾಜು (62) ಎಂದು ಗುರುತಿಸಲಾಗಿದೆ.

ಘಟನೆಯ ಹಿನ್ನೆಲೆ: ಗ್ರಾಮದ ಕಾಂಗ್ರೆಸ್ ಮುಖಂಡ ಸಿದ್ದರಾಜು ಎಂಬುವರು ಖಾಸಗಿ ಜಮೀನೊಂದರಲ್ಲಿ ಇಟ್ಟಿಗೆ ಗೂಡು ನಡೆಸುತ್ತಿದ್ದು, ರಾಜೇಶ್, ನಾರಾಯಣ ಮತ್ತು ನಾಗರಾಜು ಅವರು ಶನಿವಾರ ಬೆಳಿಗ್ಗೆ 6 ಗಂಟೆಗೆ ಇಟ್ಟಿಗೆ ಗೂಡಿನ ಕೆಲಸಕ್ಕೆ ತೆರಳಿದ್ದರು. ಇಟ್ಟಿಗೆ ಬೇಯಿಸಲು ಹಾಕಿದ್ದ ಬೆಂಕಿ ಹಾಗೂ ಕಾವು ಸಂಪೂರ್ಣವಾಗಿ ಆರುವ ಮೊದಲೇ, ಯಾವುದೇ ಸುರಕ್ಷತಾ ಕ್ರಮಗಳನ್ನು ವಹಿಸದೆ ಗೂಡು ಬಿಚ್ಚುವ ಕೆಲಸದಲ್ಲಿ ಕಾರ್ಮಿಕರನ್ನು ತೊಡಗಿಸಲಾಗಿತ್ತು.

ಬೆಳಿಗ್ಗೆ ಸುಮಾರು 11.30ರ ವೇಳೆಗೆ ಇಟ್ಟಿಗೆ ಗೂಡು ಏಕಾಏಕಿ ಕುಸಿದು ಬಿದ್ದಿದೆ. ಈ ವೇಳೆ ಸುಡುತ್ತಿದ್ದ ಇಟ್ಟಿಗೆಗಳು ಹಾಗೂ ಬೆಂಕಿಯ ಬೂದಿ ಕಾರ್ಮಿಕರ ಮೇಲೆ ಬಿದ್ದಿದ್ದು, ತೀವ್ರವಾಗಿ ಸುಟ್ಟ ಗಾಯಗೊಂಡ ರಾಜೇಶ್ ಮತ್ತು ನಾರಾಯಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಿಕಿತ್ಸೆ ಫಲಿಸದೆ ಮತ್ತೊಬ್ಬ ಸಾವು: ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ನಾಗರಾಜು ಅವರನ್ನು ತಕ್ಷಣವೇ ತಿ.ನರಸೀಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಧ್ಯಾಹ್ನ 3.30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ನಾಗರಾಜು ಕೂಡ ಕೊನೆಯುಸಿರೆಳೆದಿದ್ದಾರೆ.

ಪೊಲೀಸ್ ದೂರು: ಗೂಡು ನಡೆಸುತ್ತಿದ್ದ ಸಿದ್ದರಾಜು ಅವರ ನಿರ್ಲಕ್ಷ್ಯ ಮತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದೇ ಈ ದುರಂತಕ್ಕೆ ಕಾರಣವೆಂದು ಮೃತ ರಾಜೇಶ್ ಅವರ ಸಹೋದರ ಕುಮಾರ್ ಎಂ. ಅವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.