Home Advertisement
Home ನಮ್ಮ ಜಿಲ್ಲೆ ಕಲಬುರಗಿ ಸಿಎಂ ಬದಲಾವಣೆ : ಹೈಕಮಾಂಡ್ ಆದಷ್ಟು ಬೇಗ ಉತ್ತರ ನೀಡಲಿದೆ

ಸಿಎಂ ಬದಲಾವಣೆ : ಹೈಕಮಾಂಡ್ ಆದಷ್ಟು ಬೇಗ ಉತ್ತರ ನೀಡಲಿದೆ

0
87

ಸಂ.ಕ.ಸಮಾಚಾರ ​ಕಲಬುರಗಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತಾಗಿ ಕೇಳಿಬರುತ್ತಿರುವ ರಾಜಕೀಯ ಚರ್ಚೆಗಳ ನಡುವೆ, ಕಾಂಗ್ರೆಸ್ ಹೈಕಮಾಂಡ್ ಶೀಘ್ರದಲ್ಲೇ ಸ್ಪಷ್ಟನೆ ನೀಡಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ಪಕ್ಷದ ಪ್ರತಿಯೊಬ್ಬ ನಾಯಕ ಮತ್ತು ಕಾರ್ಯಕರ್ತ ಬದ್ಧರಾಗಿರುತ್ತಾರೆ.ಹೈಕಮಾಂಡ್‌ನ ಅಂತಿಮ ನಿರ್ಧಾರವೇ ಪರಮೋಚ್ಚ” ಎಂದು ಹೇಳಿದರು.

‘ದಲಿತ ಸಿಎಂ’ ಚರ್ಚೆ: ರಾಜ್ಯದಲ್ಲಿ ಕೇಳಿಬರುತ್ತಿರುವ ‘ದಲಿತ ಸಿಎಂ’ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ, ಇದು ಜನರ ಪ್ರೀತಿ ಮತ್ತು ವಿಶ್ವಾಸದ ಪ್ರತಿಬಿಂಬವಾಗಿದೆ ಎಂದರು. “ಇದು ಜನಾಭಿಪ್ರಾಯವಾಗಿದ್ದು, ಪಕ್ಷದ ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲದೆ ಆಡಳಿತ ಸುಗಮವಾಗಿ ನಡೆಯುತ್ತಿದೆ” ಎಂದು ಸ್ಪಷ್ಟಪಡಿಸಿದರು.

ಸರ್ಕಾರದ ಕಾರ್ಯಕ್ಷಮತೆ : ಸುಮಾರು ₹4 ಲಕ್ಷ ಕೋಟಿ ಬಜೆಟ್‌ನ ವಿವಿಧ ಯೋಜನೆಗಳು ಸರಾಗವಾಗಿ ಜಾರಿಯಾಗುತ್ತಿವೆ ಎಂದು ಅವರು ಹೇಳಿದರು. ಸಚಿವರು ತಮ್ಮ ಇಲಾಖೆಯ ಕೆಲಸಗಳಿಗಾಗಿ ದೆಹಲಿಗೆ ತೆರಳಿ, ಎಐಸಿಸಿ ಕಚೇರಿಯಲ್ಲಿ ರಾಜಕೀಯ ವಿಚಾರಗಳನ್ನು ಮಂಡಿಸುವುದು ಸಾಮಾನ್ಯ ಎಂದೂ ತಿಳಿಸಿದರು. “ನಾನು ಸದ್ಯ ದೆಹಲಿಗೆ ಹೋಗುವ ಯೋಚನೆ ಮಾಡಿಲ್ಲ,” ಎಂದು ಪರಮೇಶ್ವರ ಸ್ಪಷ್ಟಪಡಿಸಿದರು.

DK ‘ಬರ್ತ್‌ಡೇ ಗಿಫ್ಟ್’ : ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ‘ಬರ್ತ್‌ಡೇ ಗಿಫ್ಟ್’ ಆಗಿ ಸಿಗುತ್ತದೆಯೇ ಎಂಬ ಪ್ರಶ್ನೆಗೆ, “ಒಬ್ಬಿಬ್ಬರು ಹೇಳಿಕೆ ನೀಡಿದ ತಕ್ಷಣ ಅದು ಗೊಂದಲವಾಗುವುದಿಲ್ಲ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ,” ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಕುರಿತು ಮೌನ: ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷಗಳ ಕಾಲ ಮುಂದುವರಿಯಲಿದ್ದಾರೆ ಎಂಬ ಪ್ರಶ್ನೆಗೆ ಪರಮೇಶ್ವರ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದ್ದು ಕುತೂಹಲ ಮೂಡಿಸಿದೆ.

ನೇಮಕಾತಿ ಘೋಷಣೆ : ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56,834 ಹುದ್ದೆಗಳಿಗೆ ವಾರದೊಳಗೆ ಅಧಿಸೂಚನೆ ಹೊರಡಿಸಲಾಗುವುದು. ಖಾಲಿ ಹುದ್ದೆಗಳ ಭರ್ತಿಗಾಗಿ ಒಳಮೀಸಲಾತಿ ಸಮಸ್ಯೆ ಎದುರಾಗಿತ್ತು. ಅದೀಗ ಸರಕಾರ ಬಗೆಹರಿಸಿದೆ. ಈಗಾಗಲೇ ಸಾವಿರಾರು ಹುದ್ದೆಗಳ ನೇಮಕಾತಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದರು.

56 ಸಾವಿರ ಹುದ್ದೆಗಳಲ್ಲಿ 8 ಸಾವಿರ ಪೊಲೀಸ್ ಕಾನ್ಸ್ಟೇಬಲ್ ಹಾಗೂ 600 ನೂತನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. 545 ಪಿಎಸ್ಐ ನೇಮಕಾತಿ ಪ್ರಕರಣ ಬಳಿಕ ಅವುಗಳನ್ನು ಸ್ಥಗಿತಗೊಳಿಸಿ ಮತ್ತೊಮ್ಮೆ ನೇಮಕಾತಿ ಮಾಡಿಕೊಂಡಿದ್ದೇವೆ. ಅದರ ಜೊತೆಗೆ 402 ಪಿಎಸ್ಐ ಗಳ ನೇಮಕ ಮಾಡಿಕೊಂಡು ತರಬೇತಿಗೆ ಕಳುಹಿಸಿದ್ದೇವೆ. ಹೀಗೆ ಒಟ್ಟು 947 ಸಬ್ ಇನ್ಸ್ಪೆಕ್ಟರ್ ಗಳ ನೇಮಕ ಮಾಡಿದ್ದೇವೆ ಎಂದರು.

ಇದಕ್ಕೂ ಮೊದಲು ಒಳಮೀಸಲಾತಿ ಸಮಸ್ಯೆಯಿಂದ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿತ್ತು. ಈಗ ಸರ್ಕಾರ ಅದನ್ನು ಬಗೆಹರಿಸಿದೆ ಎಂದು ಹೇಳಿದರು.