SK Home Ad
Home ಸುದ್ದಿ ರಾಜ್ಯ AI ಲೋಕಕ್ಕೆ ಕರ್ನಾಟಕದ ಸ್ಟಾರ್ಟ್‌ಅಪ್ ಕಥೆಯಿಂದ ವಿಡಿಯೋವರೆಗೆ

AI ಲೋಕಕ್ಕೆ ಕರ್ನಾಟಕದ ಸ್ಟಾರ್ಟ್‌ಅಪ್ ಕಥೆಯಿಂದ ವಿಡಿಯೋವರೆಗೆ

0
54

ಬೆಂಗಳೂರು: ಕರ್ನಾಟಕದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರ ಸಮ್ಮುಖದಲ್ಲಿ ಹೊಸ ತಲೆಮಾರಿನ ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ಟಾರ್ಟ್‌ಅಪ್ Merakify.ai ಅಧಿಕೃತವಾಗಿ ಉದ್ಘಾಟನೆಯಾಗಿದೆ. ಪ್ರವಾಹ ಲ್ಯಾಬ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಡಿ ಅಭಿವೃದ್ಧಿಪಡಿಸಲಾದ ಈ ಆನ್‌ಲೈನ್ AI ವೇದಿಕೆ, ಕಥೆಗಾರರು, ಸಿನಿಮಾ ನಿರ್ಮಾಪಕರು, ಲೇಖಕರು, ಕಂಟೆಂಟ್ ಕ್ರಿಯೇಟರ್‌ಗಳು ಹಾಗೂ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.

ಈ ಸ್ಟಾರ್ಟ್‌ಅಪ್ ಅನ್ನು ಎಂಎಲ್‌ಸಿ ಸುನೀಲಗೌಡ ಪಾಟೀಲ ಅವರ ಪುತ್ರಿ ಸಾನ್ವಿ ಪಾಟೀಲ ತಮ್ಮ ಯುವ ಸ್ನೇಹಿತರೊಂದಿಗೆ ಆರಂಭಿಸಿದ್ದು, ತಂತ್ರಜ್ಞಾನ ಕ್ಷೇತ್ರದಲ್ಲಿ ಯುವಕರ ಸಾಮರ್ಥ್ಯವನ್ನು ಪ್ರದರ್ಶಿಸುವ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ. ಪಾಟೀಲ ಸಂಸ್ಥೆ ಹಾಗೂ AI ವೇದಿಕೆಯನ್ನು ಉದ್ಘಾಟಿಸಿ ಸಂಸ್ಥಾಪಕರಿಗೆ ಶುಭ ಹಾರೈಸಿದರು.

Merakify.ai ವೇದಿಕೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಬಳಕೆದಾರರ ಕಲ್ಪನೆಗಳನ್ನು ಗುಣಮಟ್ಟದ ವಿಡಿಯೋಗಳಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ. ಕಥೆ ಬರವಣಿಗೆ, ಚಿತ್ರಕಥೆ ರೂಪಿಸುವುದು, ಜಾಹೀರಾತುಗಳ ಸೃಷ್ಟಿ, ಶಿಕ್ಷಣಕ್ಕೆ ಸಂಬಂಧಿಸಿದ ವಿಡಿಯೋಗಳು, ಸಾಮಾಜಿಕ ಜಾಲತಾಣಗಳಿಗೆ ಕಂಟೆಂಟ್ ಹಾಗೂ ಉದ್ಯಮಗಳಿಗೆ ಅಗತ್ಯವಾದ ಪ್ರಚಾರ ಸಾಮಗ್ರಿಗಳನ್ನು ಸುಲಭವಾಗಿ ಸಿದ್ಧಪಡಿಸಲು ಈ ವೇದಿಕೆ ನೆರವಾಗಲಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಎಂ.ಬಿ. ಪಾಟೀಲ, ಕರ್ನಾಟಕವು ದೇಶದ ಸ್ಟಾರ್ಟ್‌ಅಪ್ ರಾಜಧಾನಿಯಾಗಿ ಗುರುತಿಸಿಕೊಂಡಿದ್ದು, ಇಂತಹ ಯುವ ಉದ್ಯಮಿಗಳ ಪ್ರಯತ್ನಗಳು ರಾಜ್ಯವನ್ನು ಜಾಗತಿಕ ತಂತ್ರಜ್ಞಾನ ನಕ್ಷೆಯಲ್ಲಿ ಇನ್ನಷ್ಟು ಬಲಪಡಿಸಲಿವೆ ಎಂದು ಹೇಳಿದರು. ಯುವಕರು ಹೊಸ ಆಲೋಚನೆಗಳನ್ನು ತಂತ್ರಜ್ಞಾನ ನೆರವಿನಿಂದ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನವನ್ನು ಶಿಕ್ಷಣ, ಸಿನಿಮಾ, ಜಾಹೀರಾತು, ಉದ್ಯಮ ಹಾಗೂ ಡಿಜಿಟಲ್ ಕಂಟೆಂಟ್ ನಿರ್ಮಾಣ ಕ್ಷೇತ್ರಗಳಿಗೆ ತಲುಪಿಸುವ ಉದ್ದೇಶದಿಂದ Merakify.ai ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಸೃಜನಶೀಲರಿಗೆ ಸಮಯ ಉಳಿತಾಯವಾಗುವುದರ ಜೊತೆಗೆ ಗುಣಮಟ್ಟದ ವಿಡಿಯೋ ನಿರ್ಮಾಣವೂ ಸುಲಭವಾಗಲಿದೆ.

ಕಾರ್ಯಕ್ರಮದಲ್ಲಿ ಬೆಕ್ಕಿನ ಕಲ್ಮಠ–ಶಿವಮೊಗ್ಗ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಮಾಜಿ ಶಾಸಕ ಪ್ರೊ. ರಾಜು ಆಲಗೂರ, ವಿಡಿಎ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಮುಖಂಡ ಹಮೀದ್ ಮುಶ್ರಿಫ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ಸಂಸ್ಥೆಯ ಮುಂದಿನ ಬೆಳವಣಿಗೆಗೆ ಶುಭ ಹಾರೈಸಿದರು.