ಬೆಂಗಳೂರು: ಮೆಟ್ರೋ ವಿಸ್ತರಣೆಯಲ್ಲಿ ಬೆಂಗಳೂರು ಶತಕ ಬಾರಿಸಿದೆ. 2014ರಲ್ಲಿ ನಗರದಲ್ಲಿ ಕೇವಲ 17 ಕಿ.ಮೀ. ಇದ್ದ ಮೆಟ್ರೋ ಮಾರ್ಗದ ಉದ್ದ ಈಗ 100 ಕಿ.ಮೀ.ಗೆ ತಲುಪಿದೆ. ದೆಹಲಿ ಎನ್ಸಿಆರ್ ಮತ್ತು ಮುಂಬೈ ಬಳಿಕ 100 ಕಿ.ಮೀ. ಮೆಟ್ರೋ ಜಾಲ ಹೊಂದಿದ ದೇಶದ ಮೂರನೇ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ. ಈ ಸಾಧನೆಯನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, ‘ಡಿ.ಕೆ. ಶಿವಕುಮಾರ್ ಅವರೇ, ನಾವು ಎಲ್ಲದರಲ್ಲೂ ಸೆಂಚುರಿ ಬಾರಿಸುತ್ತಿದ್ದೇವೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಬೆಂಗಳೂರಿನ ಐಐಎಂಬಿ ಆಡಿಟೋರಿಯಂನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮೆಟ್ರೋ ವಿಸ್ತರಣೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ಸಹಕಾರವನ್ನು ಪ್ರಸ್ತಾಪಿಸಿದರು. ಮೆಟ್ರೋ ಜಾಲದ ವಿಸ್ತರಣೆಯು ನಗರಗಳ ಅಭಿವೃದ್ಧಿ ಮಾತ್ರವಲ್ಲದೆ, ಮಧ್ಯಮ ವರ್ಗದ ಜನರ ಪ್ರಯಾಣ ಮತ್ತು ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿಯೂ ಮಹತ್ವದ ಹೆಜ್ಜೆಯಾಗಿದೆ ಎಂದರು.
ದೇಶದ ರೈಲ್ವೆ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು. ರೈಲು ಎಂಜಿನ್ಗಳು, ಕೋಚ್ಗಳು ಹಾಗೂ ಪ್ರಯಾಣಿಕರ ಸೇವೆಗಳಲ್ಲಿ ಭಾರತ ತನ್ನದೇ ಆದ ಛಾಪು ಮೂಡಿಸುತ್ತಿದೆ. ವಂದೇ ಭಾರತ್ ರೈಲುಗಳು ಮತ್ತು ಅಮೃತ ಭಾರತ್ ರೈಲು ನಿಲ್ದಾಣಗಳು ವಿಕಸಿತ ಭಾರತದ ಸಂಕಲ್ಪಕ್ಕೆ ಸಾಕ್ಷಿಯಾಗಿವೆ. ಕರ್ನಾಟಕದಲ್ಲಿಯೇ 60ಕ್ಕೂ ಹೆಚ್ಚು ರೈಲು ನಿಲ್ದಾಣಗಳನ್ನು ಅಮೃತ ಭಾರತ್ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ. ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಆಧುನಿಕ ಸೌಲಭ್ಯಗಳನ್ನು ರೈಲು ನಿಲ್ದಾಣಗಳಲ್ಲಿಯೂ ಒದಗಿಸಲಾಗುತ್ತಿದೆ ಎಂದು ಹೇಳಿದರು.
ಹೊಸ ಪಿಂಕ್ ಮೆಟ್ರೋ ಮಾರ್ಗದ ಸೇವೆಯನ್ನು ಉಲ್ಲೇಖಿಸಿದ ಮೋದಿ, ಈ ಯೋಜನೆಯನ್ನು ಕಂಡು ದಿವಂಗತ ಅನಂತಕುಮಾರ್ ಅವರ ಆತ್ಮ ಸಂತೋಷಗೊಂಡಿರಬಹುದು ಎಂದು ಸ್ಮರಿಸಿದರು.
ದೇಶದ ರೈಲ್ವೆ ಬಜೆಟ್ ಹಲವು ಪಟ್ಟು ಹೆಚ್ಚಳವಾಗಿದ್ದು, ಕರ್ನಾಟಕದ ಪಾಲಿನ ರೈಲ್ವೆ ಅನುದಾನವೂ ಒಂಬತ್ತು ಪಟ್ಟು ಏರಿಕೆಯಾಗಿದೆ ಎಂದು ತಿಳಿಸಿದರು. ವಿಕಸಿತ ಭಾರತ ನಿರ್ಮಾಣದಲ್ಲಿ ಇಂಧನ ಭದ್ರತೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಇರಾನ್ ಯುದ್ಧದಂತಹ ಜಾಗತಿಕ ಸಂಘರ್ಷಗಳು ಇಂಧನ ಪೂರೈಕೆಯ ಮಹತ್ವ ಮತ್ತು ಅದರಲ್ಲಿರುವ ಸವಾಲುಗಳನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿವೆ. ಇಂತಹ ಸವಾಲುಗಳನ್ನು ಎದುರಿಸಲು ಭಾರತ ಕಳೆದ ಹಲವು ವರ್ಷಗಳಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದರು.
ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದರ ಜತೆಗೆ ಕಚ್ಚಾ ತೈಲ ಸಂಗ್ರಹವನ್ನೂ ವೃದ್ಧಿಸಲಾಗಿದೆ. ರೈಲ್ವೆ ಮಾರ್ಗಗಳ ವಿದ್ಯುದೀಕರಣಕ್ಕೂ ಆದ್ಯತೆ ನೀಡಲಾಗಿದೆ. ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದು ದೇಶದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
ತಂತ್ರಜ್ಞಾನ ಕ್ಷೇತ್ರದಲ್ಲಿನ ಭಾರತದ ಪ್ರಗತಿಯನ್ನೂ ಪ್ರಧಾನಿ ಪ್ರಸ್ತಾಪಿಸಿದರು. ಚಿಪ್ನಿಂದ ಶಿಪ್ವರೆಗೆ, ಕೃತಕ ಬುದ್ಧಿಮತ್ತೆಯಿಂದ (ಎಐ) ಕ್ವಾಂಟಂ ತಂತ್ರಜ್ಞಾನದವರೆಗೆ ಭಾರತ ಹೊಸ ಆವಿಷ್ಕಾರಗಳ ಮೂಲಕ ಮುನ್ನಡೆಯುತ್ತಿದೆ. ದೇಶದ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯ 300 ಗಿಗಾವ್ಯಾಟ್ ದಾಟಿರುವುದು ಮಹತ್ವದ ಸಾಧನೆಯಾಗಿದೆ. ಆಧುನಿಕ ತಂತ್ರಜ್ಞಾನ, ಮೂಲಸೌಕರ್ಯ ಮತ್ತು ಇಂಧನ ಭದ್ರತೆಯ ಬಲದೊಂದಿಗೆ ಭಾರತ ಅಭಿವೃದ್ಧಿಯ ಹೊಸ ಗುರಿಗಳತ್ತ ಸಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.






















