ಧಾರವಾಡ: ಪೊಲೀಸರ ಕಿರಿಕಿರಿಗೆ ಮನನೊಂದ ಯುವಕ ಆದಿತ್ಯ ಮ್ಯಾಗೇರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಆತನ ಮೃತದೇಹವನ್ನು ಊರಿಗೆ ತೆಗೆದುಕೊಂಡು ಹೋಗಬೇಕೆಂದರೂ ಆತನ ತಾಯಿಯ ಬಳಿ ದುಡ್ಡಿದ್ದಿಲ್ಲ ಎಂಬ ಕರಳು ಹಿಂಡುವ ವಿಷಯ ಬೆಳಕಿಗೆ ಬಂದಿದೆ.
ಮಗ ನೇಣಿಗೆ ಶರಣಾಗಿದ್ದಾನೆ ಎಂಬ ವಿಷಯ ತಿಳಿಯುತ್ತಿದ್ದಂತೆ ಉಟ್ಟ ಬಟ್ಟೆಯ ಮೇಲೆಯೇ ಪುತ್ರಿಯೊಂದಿಗೆ ಧಾರವಾಡಕ್ಕೆ ಓಡಿಬಂದ ತಾಯಿ ಕವಿತಾ ಮಗನ ಮುಖ ನೋಡಲಾಗದೇ ತೊಳಲಾಡಿದಳು. ಅಲ್ಲದೇ ಜಿಲ್ಲಾಸ್ಪತ್ರೆ ಶವಾಗಾರದ ಎದುರು ಕುಳಿತು ಮಗನ ಸಾವಿಗೆ ಕಾರಣವಾದವರಿಗೆ ಹಿಡಿಶಾಪ ಹಾಕುತ್ತಲೇ ಇದ್ದರು.
ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬೇಲೂರು ಗ್ರಾಮಕ್ಕೆ ಮಗನ ಮೃಹದೇಹ ತೆಗೆದುಕೊಂಡು ಹೋಗಲು ಆಕೆಯ ಬಳಿ ಹಣವಿರಲಿಲ್ಲ. ಇದನ್ನರಿತ ಆದಿತ್ಯಾ ಸ್ನೇಹಿತರು ಮತ್ತು ಹಿತೈಷಿಗಳು ದುಡ್ಡು ಸೇರಿಸಿ ನೀಡಲು ಮುಂದಾಗಿದ್ದರು. ಆದರೆ, ಅವರ ದೂರದ ಸಂಬಂಧಿಕರು ಧಾರವಾಡದಲ್ಲಿದ್ದು, ಅವರೇ ಆದಿತ್ಯ ಮೃತದೇಹವನ್ನು ಅಂಬ್ಯುಲೆನ್ಸ್ ಮೂಲಕ ಊರಿಗೆ ತೆಗೆದುಕೊಂಡು ಹೋಗುವ ವ್ಯವಸ್ಥೆ ಕಲ್ಪಿಸಿದರು.
ಕ್ರಿಮಿನಲ್ ಪ್ರಕರಣ ದಾಖಲಿಸಲಿ: ಈ ಹಿಂದೆ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟದಲ್ಲಿ ಪಾಲ್ಗೊಂಡಿದ್ದ ಯುವಕರನ್ನು ಬೆನ್ನಟ್ಟಿ ಈ ರೀತಿಯ ಗಾಂಜಾ ಪ್ರಕರಣದಲ್ಲಿ ಕರೆತಂದು ಪೊಲೀಸರು ಕಿರಿಕಿರಿ ನೀಡುತ್ತಿದ್ದಾರೆ. ಅಲ್ಲದೇ ಸಾಕಷ್ಟು ವಿದ್ಯಾರ್ಥಿಗಳಿಂದ ಬೇರೆಯವರ ಮೂಲಕ ಫೋನ್ ಪೇ ಮಾಡಿಸಿಕೊಂಡು ಹಣ ಪೀಕುತ್ತಿದ್ದಾರೆ. ಇಂತಹ ಪೊಲೀಸರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಸೂಕ್ತ ಕ್ರಮ ಆಗಬೇಕು ಎಂದು ನ್ಯಾಯವಾದಿ ಶಿವಾನಂದ ಕವಳಿ ಆಗ್ರಹಿಸಿದ್ದಾರೆ.
ಮೂವರ ಅಮಾನತು: ಯುವಕನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಮುಂದೆ ಪಾಲಕರು ದೂರು ನೀಡಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸದ್ಯ ಮೂವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಶೃತಿ ಅವರು ತಿಳಿಸಿದ್ದಾರೆ.





















