ಹುಬ್ಬಳ್ಳಿ: ಪಂಚಪೀಠಗಳಲ್ಲಿ ಒಂದಾದ ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಪವಿತ್ರ ಕೈಲಾಸ ಪರ್ವತ ಪರಿಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಮೊದಲ ದಿನ ಜಗದ್ಗುರುಗಳು ಯಮದ್ವಾರದಿಂದ ಜಡಿಪುಕವರೆಗೆ ಸುಮಾರು 12 ಕಿ.ಮೀ. ದೂರದ ಪರಿಕ್ರಮವನ್ನು ಪೂರ್ಣಗೊಳಿಸಿದರು. ಈ ಹಂತವು ದಕ್ಷಿಣ ದಿಕ್ಕಿನಿಂದ ಆರಂಭವಾಗಿ ಉತ್ತರ ದಿಕ್ಕಿನವರೆಗೆ ಸಾಗಿತು. ಈ ವೇಳೆ ಕೈಲಾಸ ಪರ್ವತ, ನಂದಿ ಪರ್ವತ ಸೇರಿದಂತೆ ವಿವಿಧ ಪರ್ವತಗಳ ಅಪರೂಪದ ನೈಸರ್ಗಿಕ ದೃಶ್ಯಾವಳಿಗಳನ್ನು ವೀಕ್ಷಿಸಿದರು. ಕರ್ನಾಟಕದ ವಿವಿಧ ಗುರು-ವಿರಕ್ತಮಠಗಳ ಮಠಾಧೀಶರು ಹಾಗೂ ಭಕ್ತರು ಈ ಯಾತ್ರೆಯಲ್ಲಿ ಭಾಗವಹಿಸಿದ್ದರು.
ಜೂನ್ 30ರಂದು ನಡೆದ ಎರಡನೇ ದಿನದ ಪರಿಕ್ರಮದಲ್ಲಿ ಜಡಿಪುಕದಿಂದ ಜಟಿಲಾಪುಕವರೆಗೆ ಸುಮಾರು 22 ಕಿ.ಮೀ. ದೂರವನ್ನು ಪಾದಯಾತ್ರೆಯ ಮೂಲಕ ಕ್ರಮಿಸಿದರು. ಈ ಹಂತವು ಉತ್ತರ ದಿಕ್ಕಿನಿಂದ ಆರಂಭವಾಗಿ ಆಗ್ನೇಯ ದಿಕ್ಕಿನವರೆಗೆ ಸಾಗಿತು.

ಕೈಲಾಸ ಪರಿಕ್ರಮದ ಅತ್ಯಂತ ಕಠಿಣ ಮತ್ತು ದುರ್ಗಮ ಹಂತವೆಂದು ಪರಿಗಣಿಸಲ್ಪಡುವ ಈ ಮಾರ್ಗದಲ್ಲಿ ಯಾತ್ರಿಕರು ಮೈನಸ್ ಡಿಗ್ರಿ ತಾಪಮಾನ ಹಾಗೂ ಸಮುದ್ರಮಟ್ಟದಿಂದ ಸುಮಾರು 18,741 ಅಡಿ ಎತ್ತರದ ಪ್ರದೇಶವನ್ನು ದಾಟಬೇಕಾಗುತ್ತದೆ. ಈ ಮಾರ್ಗದಲ್ಲಿ ದೋಲ್ಮಾ ಲಾ ಪಾಸ್, ಗೌರೀಕುಂಡ ಸೇರಿದಂತೆ ಹಲವು ಪವಿತ್ರ ಕ್ಷೇತ್ರಗಳು ಎದುರಾಗುತ್ತವೆ.
ಜುಲೈ 1ರಂದು ಮೂರನೇ ದಿನದ ಪರಿಕ್ರಮವನ್ನು ಶ್ರೀಗಳು ಪೂರ್ಣಗೊಳಿಸಿದರು. ಯಾತ್ರೆಯ ವೇಳೆ ಹಿಮಾಚ್ಛಾದಿತ ಪರ್ವತಗಳು, ಮಂಜಿನಿಂದ ಆವೃತವಾದ ಕಣಿವೆಗಳು, ಹರಿಯುವ ಹಿಮನದಿಗಳು ಹಾಗೂ ಅಪರೂಪದ ನೈಸರ್ಗಿಕ ಸೌಂದರ್ಯವನ್ನು ಜಗದ್ಗುರುಗಳು ಮತ್ತು ಯಾತ್ರಿಕರು ಕಣ್ತುಂಬಿಕೊಂಡರು. ಕರ್ನಾಟಕದ ವಿವಿಧ ಮಠಗಳ ಸ್ವಾಮೀಜಿಗಳು ಹಾಗೂ ಭಕ್ತರು ಈ ಪವಿತ್ರ ಯಾತ್ರೆಯಲ್ಲಿ ಭಾಗವಹಿಸಿದ್ದರು.




















