Home Advertisement
Home ಸುದ್ದಿ ರಾಜ್ಯ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ 4 ಚೀತಾ: ಭರ್ಜರಿ ಸ್ವಾಗತ

ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ 4 ಚೀತಾ: ಭರ್ಜರಿ ಸ್ವಾಗತ

0
87

ಬೆಂಗಳೂರು: ಕರ್ನಾಟಕದಲ್ಲಿ ವನ್ಯಜೀವಿ ಸಂರಕ್ಷಣೆ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿ ದಕ್ಷಿಣ ಆಫ್ರಿಕಾದಿಂದ ನಾಲ್ಕು ಚೀತಾಗಳು ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸಿವೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ವತಃ ಹಾಜರಾಗಿ ಈ ಅಪರೂಪದ ವನ್ಯಜೀವಿಗಳನ್ನು ಸ್ವಾಗತಿಸಿದರು.

ಕಲಬುರಗಿ ಕಾರ್ಯಕ್ರಮ ಮುಗಿಸಿಕೊಂಡು ಹೈದ್ರಾಬಾದ್ ಮಾರ್ಗವಾಗಿ ಬೆಂಗಳೂರಿಗೆ ತಲುಪಿದ ಸಚಿವರು, ನೇರವಾಗಿ ವಿಮಾನ ನಿಲ್ದಾಣದ ಸರಕು ಸಾಗಣೆ ವಿಭಾಗಕ್ಕೆ ತೆರಳಿ ಚೀತಾಗಳನ್ನು ಪರಿಶೀಲಿಸಿದರು. ಬಳಿಕ ಈ ಚೀತಾಗಳನ್ನು ಸುರಕ್ಷಿತವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ (Bannerghatta Biological Park) ಸಾಗಿಸಲಾಯಿತು.

ವಿಶೇಷ ಕಾಳಜಿ – ಕ್ವಾರಂಟೈನ್, ಆರೋಗ್ಯ ಪರಿಶೀಲನೆ : ಚೀತಾಗಳಿಗೆ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. 30 ದಿನಗಳ ಕ್ವಾರಂಟೈನ್ ವ್ಯವಸ್ಥೆ, ನಿಯೋಜಿತ ಆಹಾರ ವ್ಯವಸ್ಥೆ, ನಿಯಮಿತ ಆರೋಗ್ಯ ತಪಾಸಣೆ ಹಾಗೂ ಪಶುವೈದ್ಯರ ನಿಗಾವಳಿ ಜೊತೆಗೆ ಹವಾಮಾನ ಬದಲಾವಣೆಯಿಂದ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮೃಗಾಲಯ ಅಧಿಕಾರಿಗಳ ಪ್ರಕಾರ, ಚೀತಾಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅವುಗಳು ಹೊಸ ಪರಿಸರಕ್ಕೆ ಹೊಂದಿಕೊಳ್ಳುವ ಪ್ರಕ್ರಿಯೆಯಲ್ಲಿ ಇದ್ದು. ಆರಂಭಿಕ ದಿನಗಳಲ್ಲಿ ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಬಿಡುವುದಿಲ್ಲ. ತಜ್ಞರ ಸಲಹೆ ಮೇರೆಗೆ ಹಂತ ಹಂತವಾಗಿ ಪ್ರದರ್ಶನಕ್ಕೆ ಅವಕಾಶ ನೀಡುವ ನಿರೀಕ್ಷೆ ಇದೆ.

ವನ್ಯಜೀವಿ ಸಂರಕ್ಷಣೆಗೆ ಮತ್ತೊಂದು ಹೆಜ್ಜೆ : ಒಮ್ಮೆ ಕರ್ನಾಟಕದ ಕಾಡುಗಳಲ್ಲಿ ಕಾಣಿಸಿಕೊಂಡಿದ್ದ ಚೀತಾಗಳು ಸಂಪೂರ್ಣವಾಗಿ ನಾಶವಾದ ಹಿನ್ನೆಲೆ, ಮೃಗಾಲಯ ಮಟ್ಟದಲ್ಲಿ ಅವುಗಳನ್ನು ಪರಿಚಯಿಸುವ ಮೂಲಕ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಇದು. ಈ ಕ್ರಮವು ಸಂರಕ್ಷಣೆ ಮತ್ತು ಜೈವ ವೈವಿಧ್ಯತೆಯ ಬಗ್ಗೆ ಜಾಗೃತಿ ಹೆಚ್ಚಿಸಲು ಸಹಕಾರಿಯಾಗಲಿದೆ.

ಸಚಿವ ಈಶ್ವರ ಖಂಡ್ರೆ, “ಚೀತಾಗಳ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಸಂರಕ್ಷಣೆ ಮತ್ತು ಜನಜಾಗೃತಿಯ ನಡುವೆ ಸಮತೋಲನ ಸಾಧಿಸುವುದು ಮುಖ್ಯ” ಎಂದು ತಿಳಿಸಿದ್ದಾರೆ.