SK Home Ad
Home ನಮ್ಮ ಜಿಲ್ಲೆ ಧಾರವಾಡ ಹುಬ್ಬಳ್ಳಿ ಫ್ಲೈಓವರ್ ಕಾಮಗಾರಿ: ಜನರ ಸಹನೆ ಮೀರಿ ಆಕ್ರೋಶ

ಹುಬ್ಬಳ್ಳಿ ಫ್ಲೈಓವರ್ ಕಾಮಗಾರಿ: ಜನರ ಸಹನೆ ಮೀರಿ ಆಕ್ರೋಶ

0
81

ಹುಬ್ಬಳ್ಳಿ ಫ್ಲೈ ಓವರ್ ಯಮಯಾತನೆ-ಛೀ…: ಜನಪ್ರತಿನಿಧಿಗಳು ಸ್ಕೂಟರ್-ಬೈಕ್ ಏರಿ ಸಂಚರಿಸಲಿ – ಸಾರ್ವಜನಿಕರ ಆಕ್ರೋಶ

ಬಿ.ಅರವಿಂದ


ಹುಬ್ಬಳ್ಳಿ: ಫ್ಲೈ ಓವರ್ ಕಾಮಗಾರಿ ಯಾವಗಲಾದರೂ ಮುಗಿಯಲಿ. ಈ ಬಗ್ಗೆ ಆಡಳಿತ ಯಂತ್ರ ನೀಡುತ್ತಿರುವ ಡೆಡ್‌ಲೈನ್‌ಗಳನ್ನು ನಾವಂತೂ ನಂಬಿಲ್ಲ… ಕೊನೇ ಪಕ್ಷ ಕಾಮಗಾರಿ ವ್ಯಾಪ್ತಿಯ ರಸ್ತೆಗಳನ್ನು ಓಡಾಡುವಂತೆ ಆದರೂ ಮಾಡಿ… ಇಷ್ಟೂ ಮಾಡಲಾಗುತ್ತಿಲ್ಲವೇ ನಿಮಗೆ…? ನಾವು ಅನುಭವಿಸುತ್ತಿರುವ ಯಮಯಾತನೆಯ ಅನುಭವದ ಅರಿವು ಆಗಬೇಕಿದ್ದರೆ, ಶಾಸಕರು, ಸಚಿವರು, ಕಾರ್ಪೋರೇಟರ್‌ಗಳು ದ್ವಿಚಕ್ರ ವಾಹನವನ್ನು ಏರಿ ಕಾಮಗಾರಿ ವ್ಯಾಪ್ತಿಯಲ್ಲಿ ಒಮ್ಮೆ ಓಡಾಡಿ ಬರಲಿ, ಅದರಲ್ಲೂ ಜನಪ್ರತಿನಿಧಿಗಳೇ ದ್ವಿಚಕ್ರ ವಾಹನವನ್ನು ಚಲಿಸಿಕೊಂಡು ಓಡಾಡಿ ಬಂದರೆ ಇನ್ನೂ ಸ್ಪಷ್ಟವಾಗಿ ಅನುಭವಕ್ಕೆ ಬರುತ್ತದೆ… ಇದು ಈಗ ಹುಬ್ಬಳ್ಳಿ ಸಾರ್ವಜನಿಕರ ಆಕ್ರೋಶ !

ಫ್ಲೈ ಓವರ್ ಕಾಮಗಾರಿಯಿಂದಾಗಿ ಸೃಷ್ಟಿಯಾಗಿರುವ ಈ ಹೊಸ ನರಕದ ಬಗ್ಗೆ ಸಾರ್ವಜನಿಕರು ರಾಜ್ಯ ಮತ್ತು ಕೇಂದ್ರ ಸರ್ಕಾರ, ಶಾಸಕರು ಹಾಗೂ ಕಾರ್ಪೋರೇಟರ್‌ಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಛೀ ಎಂದು ವ್ಯವಸ್ಥೆಗೆ `ಮಹಾಮಂಗಳಾರತಿ’ ಮಾಡುತ್ತಿದ್ದಾರೆ !!

ಕಾಮಗಾರಿ ಪೂರ್ಣಗೊಂಡ ನಂತರ ಕೆಳ ರಸ್ತೆಗಳನ್ನು ಸರಿ ಮಾಡದೇ ಬಿಡುತ್ತೇವೆ? ಏಕೆ ಹೀಗೆ ಬೆನ್ನು ಬೀಳುತ್ತಿದ್ದೀರಿ ಎಂಬುದು ಆಳುವವರ ಸಹಜ ತರ್ಕವಾಗಿರುತ್ತದೆ. ಆದರೆ ಜನ ಅನುಭವಿಸುತ್ತಿರುವ ನರಕ ಆಡಳಿತ ಯಂತ್ರ ಅಥವಾ ಸರ್ಕಾರದ ತರ್ಕವನ್ನು ಮೀರಿದ್ದಾಗಿದೆ. ಆದ್ದರಿಂದಲೇ ಮೊದಲು ಫ್ಲೈ ಓವರ್ ವ್ಯಾಪ್ತಿಯ ರಸ್ತೆಗಳ ಗುಂಡಿಗಳನ್ನು ಮುಚ್ಚಿ, ಮೋಟರೇಬಲ್ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ.

ಗುಂಡಿಗಳ ಅಪಾಯದ ಸುಳಿ… : ಇತ್ತ ಹೊಸೂರು ಸರ್ಕಲ್‌ನಿಂದ (ಕೆನರಾ ಹೋಟೆಲ್ ಮುಂಭಾಗ) ಅತ್ತ ಲ್ಯಾಮಿಂಗ್ಟನ್ ರಸ್ತೆಯ ಮಹಾನಗರ ಪಾಲಿಕೆ ಮಧ್ಯೆ ಎಲ್ಲಿಂದ ಎಲ್ಲಿಯೇ ಹೋದರೂ ಅಕ್ಷರಶಃ ನರಕ. ಇನ್ನು ವಾಹನವನ್ನು ತೆಗೆದುಕೊಂಡು, ಅದರಲ್ಲೂ ದ್ವಿಚಕ್ರ ವಾಹನವನ್ನು ಓಡಿಸಿಕೊಂಡು ಹೋಗುವುದಂತೂ ಸಾಧ್ಯವೇ ಇಲ್ಲ.

ಇತ್ತೀಚೆಗೆ ಸುರಿದ ಮಳೆಯ ನಂತರವಂತೂ ಕಾಮಗಾರಿ ನಡೆಯುತ್ತಿರುವ ಹೊಸೂರು ಸರ್ಕಲ್, ವಿಶೇಷವಾಗಿ ಕಿತ್ತೂರು ಚನ್ನಮ್ಮ ಸರ್ಕಲ್, ಹಳೇ ಕೋರ್ಟ್ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್ ಹಾಗೂ ಗ್ಲಾಸ್ ಹೌಸ್ ಸರ್ಕಲ್, ಬಸವವನ ಸರ್ಕಲ್‌ಗಳನ್ನು ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲಿ ಆಳವಾದ ಗುಂಡಿಗಳು ನಿರ್ಮಾಣವಾಗಿವೆ. ಗುಂಡಿಗಳ ಅಪಾಯ ಒಂದೆಡೆಯಾದರೆ ಬಸ್‌ಗಳು, ಕಾರು-ಜೀಪುಗಳು ಹಾಗೂ ಇತರ ದೊಡ್ಡ ವಾಹನಗಳು ನಿಯಂತ್ರಣ ತಪ್ಪಿ ಹಿಂಬದಿಯಿಂದ ಗುದ್ದಿಯಾವು ಎನ್ನುವ ಭಯ ಬೇರೆ…!

ಮೋಟರೇಬಲ್ ಅತ್ಯಗತ್ಯ…: ಯಾವುದೇ ಯೋಜನೆ ನಡೆಯುವಾಗ, ಅದರಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯ ಇಲ್ಲದೇ ಕೆಲಸಗಳು ಆಗುವಾಗ ಕಾಮಗಾರಿ ವಿಳಂಬವಾಗುವುದು ಹಾಗೂ ಜನ ಸಹಿಸಿಕೊಳ್ಳಬೇಕು ಎನ್ನುವುದು ಸಹಜ. ಇದಕ್ಕೆ ಜನರ ತಕರಾರೂ ಇಲ್ಲ. ಆದ್ದರಿಂದಲೇ ಕಳೆದ ಮೂರು ವರ್ಷಗಳಿಂದ ನರಕದಲ್ಲಿ ವಾಸಿಸುತ್ತಲೇ ಹುಬ್ಬಳ್ಳಿ ಫ್ಲೈ ಓವರ್ ಕನಸಿನಲ್ಲಿ ಜನತೆ ನಗುತ್ತಿದ್ದಾರೆ.

ಕುಂಟು ನೆಪಗಳನ್ನು ಬದಿಗಿಟ್ಟು ಕೂಡಲೇ ಆಡಳಿತ ಯಂತ್ರ ಸ್ಪಂದಿಸಬೇಕಾಗಿದೆ. ಕನಿಷ್ಟ ಪಕ್ಷ ಗುಂಡಿಗಳನ್ನು ತುಂಬಿ, ವಾಹನಗಳು ಹೆಚ್ಚು ಅಪಾಯವಿಲ್ಲದಂತೆ ಓಡಾಡುವ ಪರಿಸ್ಥಿತಿಯನ್ನು ಸೃಷ್ಟಿಸಬೇಕಾಗಿದೆ. ರಸ್ತೆಗಳಿಗೆ ಸಂಬಂಧಿಸಿದ ವಿವಿಧ ಕಾನೂನುಗಳೇ ಹೇಳುವಂತೆ ಪಕ್ಕಾ ರಸ್ತೆ ತಡವಾಗುವ ಸಂದರ್ಭದಲ್ಲಿ, ಮೋಟರೇಬಲ್ ಮಾಡಲೇಬೇಕಿದೆ. ಇದು ಜನಪ್ರತಿನಿಧಿಗಳ ಹೊಣೆಗಾರಿಕೆಯೂ ಆಗಿದೆ.

ಡೆಡ್‌ಲೈನ್‌ ಸಾಕು ಕ್ರಮ ತೆಗೆದುಕೊಳ್ಳಿ: ಪಕ್ಕಾ ರಸ್ತೆಗಳನ್ನು ಕಾಮಗಾರಿ ಮುಗಿಯುವ ತನಕ ಮಾಡಲಾಗುವುದಿಲ್ಲ ಎಂಬ ಕಲ್ಪನೆ ನಮಗೂ ಇದೆ. ಕೊನೇ ಪಕ್ಷ ಮೋಟರೇಬಲ್ ಮಾಡಲು ಕೂಡ ಸ್ಥಳೀಯ ಆಡಳಿತಕ್ಕೆ ಆಗುವುದಿಲ್ಲವೇ? ಈಗಾಗಲೇ ಸಾಕಷ್ಟು ಡೆಡ್‌ಲೈನ್‌ಗಳನ್ನು ಗುತ್ತಿಗೆದಾರರಿಗೆ ನೀಡಿರುವ ಶಾಸಕರು ಕೂಡಲೇ ಕ್ರಮ ತೆಗೆದುಕೊಳ್ಳಲಿ ಎಂದು ಹೊಂಬಳ, ಕೆಸಿಸಿಐ ಸದಸ್ಯ ಜಗದೀಶ ಎಸ್. ಆಕ್ರೋಶ ವ್ಯಕ್ತಪಡಿಸಿದ್ದಾರೆ

ಫ್ಲೈ ಓವರ್ ರಸ್ತೆಗಳಲ್ಲಿ ಓಡಾಡುವುದೇ ಪಾಪ: ಫ್ಲೈ ಓವರ್ ಕಾಮಗಾರಿ ಮುಗಿಯುವ ಆಶಾಭಾವನೆಯನ್ನೇ ನಾವು ಬಿಟ್ಟಿದ್ದೇವೆ. ಕಿತ್ತೂರು ಚನ್ನಮ್ಮ ಸರ್ಕಲ್ ಕೇಂದ್ರವಾಗಿಟ್ಟುಕೊಂಡು ರಸ್ತೆಗಳಲ್ಲಿ ಓಡಾಡುವುದೇ ಪಾಪ ಎನ್ನುವಂತಾಗಿದೆ. ಏಕಾದರೂ ನಮಗೆ ಈ ಶಿಕ್ಷೆಯನ್ನು ಆಡಳಿತ ಯಂತ್ರ ನೀಡುತ್ತಿದೆ? ಎಂದು ನಗರದ ಹಿರಿಯ ನಾಗರಿಕ ರಾಜಶೇಖರ ಟೊಂಗಳಿ ಹತಾಶೆ ಭಾವನೆ ವ್ಯಕ್ತಪಡಿಸಿದ್ದಾರೆ.

ಕಾಟಾಚಾರಕ್ಕೆ ಮಾಡುವುದು ಬೇಡ: ಕಾಮಗಾರಿ ವ್ಯಾಪ್ತಿಯ ರಸ್ತೆಗಳಲ್ಲಿ ಜನತೆ (ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು) ಓಡಾಡುವಷ್ಟು ಕನಿಷ್ಟ ಅನುಕೂಲತೆಗಳನ್ನು ಕಲ್ಪಿಸುವುದು ಇಂದಿನ ಆಧುನಿಕ ಯುಗದಲ್ಲಿ ಖಂಡಿತ ಕಷ್ಟವಲ್ಲ. ಕೂಡಲೇ ಯೋಜನಾ ವ್ಯಾಪ್ತಿಯ ಎಲ್ಲೆಡೆ ರಸ್ತೆಗಳ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಬೇಕು. ಈ ಮುಚ್ಚುವಿಕೆ ನುಣುಪಾಗಿ ಇರಬೇಕು. ಕಾಟಾಚಾರಕ್ಕೆ ಜಲ್ಲಿ ಹಾಕಿ ಬಿಡಬಾರದು ಎಂದು ಕಾರ್ಪೋರೇಟ್ ಉದ್ಯೋಗಿ ಅಶ್ವಿನಿ ಅಣ್ವೇಕರ್ ಮನವಿ ಮಾಡಿದ್ದಾರೆ.