ಹುಬ್ಬಳ್ಳಿ: ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಪಡೆಯಲು ಮುಂದಾಗಿರುವುದು ಖಂಡನೀಯ. ಇದನ್ನು ಖಂಡಿಸಿ ಅಹಿಂದ ಕರ್ನಾಟಕ ಸಂಘಟನೆ ವತಿಯಿಂದ ಮೇ 28ರಂದು ರಾಜ್ಯದಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಸಂಘಟನೆ ಸಂಚಾಲಕ ಸಿದ್ದಣ್ಣ ತೇಜಿ ಹೇಳಿದರು.
ನಗರದ ಸರ್ಕೀಟ್ ಹೌಸ್‌ನಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂಬ ಉದ್ದೇಶದಿಂದ ಅಹಿಂದ ಸಮುದಾಯಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದವು. ಯಾವುದೇ ಹಗರಣಗಳಲ್ಲಿ ಸಿದ್ದರಾಮಯ್ಯ ಅವರು ಭಾಗಿಯಾಗಿಲ್ಲ. ಅವರ ಮೇಲೆ ಭ್ರಷ್ಟಾಚಾರದ ಆರೋಪಗಳಿಲ್ಲ. ಹೀಗಿದ್ದರೂ ಅವರಿಂದ ಏಕೆ ರಾಜೀನಾಮೆ ಪಡೆಯಲಾಗುತ್ತಿದೆ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ರಾಜೀನಾಮೆ ಪಡೆಯುವ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಸ್ಥಳೀಯ ಸಂಸ್ಥೆ ಸೇರಿದಂತೆ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಾಗುವುದು. ಮೀಸಲಾತಿ ಸೇರಿದಂತೆ ಅಹಿಂದ ಸಮುದಾಯಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವುದಾಗಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದರು. ಆ ಬಗ್ಗೆ ಪರ್ಯಾಯವಾಗಿ ಏನು ಮಾಡುತ್ತಾರೆ ಎಂದು ಹೇಳಬೇಕು. ಏಕಾಏಕಿ ರಾಜೀನಾಮೆ ಕೊಡುತ್ತೇನೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ಮೇ 28ರಂದು ಹುಬ್ಬಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಂಜೆ 4 ಗಂಟೆಗೆ ಪ್ರತಿಭಟನೆ ನಡೆಯಲಿದೆ. ಅದೇ ರೀತಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆ ಜರುಗಲಿದೆ. ಅಗತ್ಯ ಬಿದ್ದರೆ ಕಾಂಗ್ರೆಸ್ ಮುಖಂಡರ ಮನೆ ಎದರು ಪ್ರತಿಭಟನೆ ನಡೆಸಲಾಗುವುದು ಎಂದರು.






















