SK Home Ad
Home ಸುದ್ದಿ ದೇಶ PF ಟ್ರಸ್ಟ್‌ಗಳಿಗೆ ಗುಡ್ ನ್ಯೂಸ್: EPFO ಕ್ಷಮಾದಾನ ಯೋಜನೆ ಘೋಷಣೆ

PF ಟ್ರಸ್ಟ್‌ಗಳಿಗೆ ಗುಡ್ ನ್ಯೂಸ್: EPFO ಕ್ಷಮಾದಾನ ಯೋಜನೆ ಘೋಷಣೆ

0
40

ನವದೆಹಲಿ: ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಧೀನದಲ್ಲಿರುವ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) 2026ರ ವಿಶೇಷ ಕ್ಷಮಾದಾನ (Amnesty) ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯಡಿ ಆದಾಯ ತೆರಿಗೆ ಕಾಯ್ದೆ, 1961ರ ಅಡಿಯಲ್ಲಿ ಗುರುತಿಸಲ್ಪಟ್ಟಿರುವ ವಿನಾಯಿತಿ ಪಡೆದ ಭವಿಷ್ಯ ನಿಧಿ (PF) ಟ್ರಸ್ಟ್‌ಗಳನ್ನು ನಿರ್ವಹಿಸುತ್ತಿರುವ ಸಂಸ್ಥೆಗಳಿಗೆ ತಮ್ಮ ಕಾನೂನು ಮತ್ತು ಆಡಳಿತಾತ್ಮಕ ಸ್ಥಿತಿಯನ್ನು ಕ್ರಮಬದ್ಧಗೊಳಿಸಲು ಒಂದು ಬಾರಿಯ ಅವಕಾಶ ನೀಡಲಾಗಿದೆ.

ಈ ಯೋಜನೆ ಜೂನ್ 29, 2026ರಂದು ಅಧಿಸೂಚನೆಯಾಗಿದ್ದು, ಆ ದಿನಾಂಕದಿಂದ ಆರು ತಿಂಗಳ ಕಾಲ ಮಾನ್ಯವಾಗಿರುತ್ತದೆ. ಉದ್ಯೋಗದಾತರು, ಪಾಲುದಾರರು ಹಾಗೂ ಸಂಬಂಧಿತ ಸಂಸ್ಥೆಗಳು ಈ ಯೋಜನೆಯ ಪ್ರಯೋಜನ ಪಡೆಯುವಂತೆ ಇಪಿಎಫ್‌ಒ ಸೂಚಿಸಿದೆ.

ಇದನ್ನೂ ಓದಿ: S. ಜಾನಕಿ ನೆನಪು ಚಿರಸ್ಥಾಯಿ: ಸರ್ಕಾರಕ್ಕೆ ಹಂಸಲೇಖ ವಿಶೇಷ ಮನವಿ

ಯಾವ ಸಂಸ್ಥೆಗಳಿಗೆ ಅನ್ವಯ? : ಈ ಯೋಜನೆಯು ಆದಾಯ ತೆರಿಗೆ ಕಾಯ್ದೆಯಡಿ ಗುರುತಿಸಲ್ಪಟ್ಟಿರುವ ಭವಿಷ್ಯ ನಿಧಿ ಟ್ರಸ್ಟ್‌ಗಳನ್ನು ನಿರ್ವಹಿಸುತ್ತಿರುವ, ಆದರೆ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಅಧಿಕೃತ ವಿನಾಯಿತಿ ಅಧಿಸೂಚನೆ ಪಡೆಯದ ಸಂಸ್ಥೆಗಳಿಗೆ ಅನ್ವಯಿಸುತ್ತದೆ.

ಇಪಿಎಫ್‌ಒ ಯೋಜನೆಯಲ್ಲಿ ಎರಡು ವರ್ಗದ ಸಂಸ್ಥೆಗಳನ್ನು ಗುರುತಿಸಲಾಗಿದೆ: ವರ್ಗ-1 : ಈಗಾಗಲೇ ವಿನಾಯಿತಿ ಪಡೆಯದ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಅಥವಾ ಅಂತಹ ವ್ಯವಸ್ಥೆಗೆ ಬದಲಾಗಲು ಬಯಸುವ ಸಂಸ್ಥೆಗಳು. ವರ್ಗ-2 : ಸಾಮಾಜಿಕ ಭದ್ರತಾ ಸಂಹಿತೆ, 2020ರ ಅಡಿಯಲ್ಲಿ ವಿನಾಯಿತಿ ಪಡೆದ ಸಂಸ್ಥೆಗಳಾಗಿ ಮುಂದುವರಿಯಲು ಬಯಸುವ ಸಂಸ್ಥೆಗಳು.

ಇದನ್ನೂ ಓದಿ: ಮೈಸೂರು: ಗಾನಕೋಗಿಲೆ ಎಸ್. ಜಾನಕಿ ಅಂತಿಮ ದರ್ಶನಕ್ಕೆ ಜನಸಾಗರ

ಹಿಂದಿನ ಅವಧಿಗೂ ಮಾನ್ಯತೆ : ಸಂಸ್ಥೆಯ ಟ್ರಸ್ಟ್ ಸ್ಥಿತಿಯನ್ನು ಅದರ ಆರಂಭದಿಂದಲೇ ಪೂರ್ವಾನ್ವಯವಾಗಿ ಕ್ರಮಬದ್ಧಗೊಳಿಸಲು ಅವಕಾಶ ಕಲ್ಪಿಸಲಾಗಿದೆ.

ಕೆಲವು ನಿಯಮಗಳಿಗೆ ವಿನಾಯಿತಿ : ಸಾಮಾಜಿಕ ಭದ್ರತಾ ಸಂಹಿತೆಯಡಿ ಅನ್ವಯವಾಗುವ ಕನಿಷ್ಠ ಉದ್ಯೋಗಿಗಳ ಸಂಖ್ಯೆ ಮತ್ತು ಕಾರ್ಪಸ್ ಗಾತ್ರದಂತಹ ನಿಯಮಗಳಿಗೆ ಮನ್ನಾ ನೀಡಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಶಾಸಕ ಸೈಯದ್ ಯಾಸೀನ್ ನಿಧನ

ಕಾನೂನು ಪ್ರಕ್ರಿಯೆಗಳಿಂದ ಪರಿಹಾರ : ಸದಸ್ಯರ ಖಾತೆಗಳಿಗೆ ಕಾನೂನುಬದ್ಧ ದರದ ಬಡ್ಡಿ ಹಾಗೂ ಕೊಡುಗೆಗಳನ್ನು ನೀಡಿದ್ದರೆ, ಬಾಕಿ, ದಂಡ, ಹಾನಿ ಮತ್ತು ಬಡ್ಡಿಗೆ ಸಂಬಂಧಿಸಿದ ಪ್ರಕರಣಗಳನ್ನು ಹಿಂಪಡೆಯುವ ಅಥವಾ ರದ್ದುಪಡಿಸುವ ಅವಕಾಶವೂ ದೊರೆಯಲಿದೆ.

ಅರ್ಜಿ ಸಲ್ಲಿಸುವುದು ಹೇಗೆ? : ಯೋಜನೆಯ ಲಾಭ ಪಡೆಯಲು ಅರ್ಹ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ ಅಧಿಕೃತ ಅರ್ಜಿ ಸಲ್ಲಿಸಬೇಕು. ಸಂಬಂಧಿತ ಪ್ರಾದೇಶಿಕ ಕಚೇರಿಗೆ ಇಮೇಲ್ ಮೂಲಕ ಅರ್ಜಿಯನ್ನು ಕಳುಹಿಸಬಹುದಾಗಿದೆ. ಆಸಕ್ತಿ ಹೊಂದಿರುವ ಸಂಸ್ಥೆಗಳು ತಮ್ಮ ಇಚ್ಛೆಯನ್ನು rc.exemption@epfindia.gov.in ಇಮೇಲ್ ವಿಳಾಸಕ್ಕೆ ತಿಳಿಸಬಹುದು.

ಇದನ್ನೂ ಓದಿ: S. Janaki: ಐದು ದಶಕಗಳಿಗೂ ಮೀರಿದ ಅಮೋಘ ಸಂಗೀತ ಪಯಣ

ಅನುಸರಣೆ ಲೆಕ್ಕಪರಿಶೋಧನೆ ಕಡ್ಡಾಯ : ಹಣಕಾಸು ಖಾತೆಗಳನ್ನು ಚಾರ್ಟರ್ಡ್ ಅಕೌಂಟೆಂಟ್ ಮೂಲಕ ಆಡಿಟ್ ಮಾಡಿಸಬೇಕು. ಇಪಿಎಫ್ ಅಧಿಕಾರಿಗಳು ಸೂಚಿಸುವ ವಿಶೇಷ ಅಥವಾ ಅನುಸರಣೆ ಲೆಕ್ಕಪರಿಶೋಧನೆಗಳನ್ನು ಅರ್ಜಿ ಸಲ್ಲಿಸಿದ ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕು.

ಹೆಚ್ಚಿನ ಮಾಹಿತಿಗೆ : ಇಪಿಎಫ್‌ಒ ಪ್ರಕಟಿಸಿರುವ ಗೆಜೆಟ್ ಅಧಿಸೂಚನೆ GSR 525(E) ಹಾಗೂ ಇಪಿಎಫ್‌ಒ ವೆಬ್‌ಸೈಟ್‌ನಲ್ಲಿ ಯೋಜನೆಯ ಸಂಪೂರ್ಣ ಮಾಹಿತಿ, ಕಾರ್ಯವಿಧಾನ ಮತ್ತು ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಸಂಬಂಧಿತ ಪ್ರಾದೇಶಿಕ ಕಚೇರಿಗಳು ಕೂಡ ಅಗತ್ಯ ಮಾರ್ಗದರ್ಶನ ಮತ್ತು ಸಹಾಯವನ್ನು ಒದಗಿಸಲಿವೆ.

ಈ ಯೋಜನೆಯಿಂದ ದೇಶದ ಅನೇಕ ಸಂಸ್ಥೆಗಳು ತಮ್ಮ PF ಟ್ರಸ್ಟ್‌ಗಳ ಕಾನೂನುಬದ್ಧ ಸ್ಥಿತಿಯನ್ನು ಸರಿಪಡಿಸಿಕೊಳ್ಳಲು ಮತ್ತು ಬಾಕಿ ಕಾನೂನು ತೊಂದರೆಗಳಿಂದ ಹೊರಬರಲು ನೆರವಾಗಲಿದೆ ಎಂದು ಇಪಿಎಫ್‌ಒ ತಿಳಿಸಿದೆ.