SK Home Ad
Home ಕ್ರೀಡೆ IPL 2026: ಸನ್‌ರೈಸರ್ಸ್‌ ಎದುರು ಅಬ್ಬರಿಸಿದ ಸೂರ್ಯವಂಶಿ

IPL 2026: ಸನ್‌ರೈಸರ್ಸ್‌ ಎದುರು ಅಬ್ಬರಿಸಿದ ಸೂರ್ಯವಂಶಿ

0
46

ಚಂಡೀಗಢ: ವೈಭವ್‌ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದಾಗಿ ರಾಜಸ್ಥಾನ ರಾಯಲ್ಸ್‌ ತಂಡ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಬೃಹತ್‌ ರನ್‌ ಕಲೆಹಾಕಿದೆ.

ಐಪಿಎಲ್‌ ಪಂದ್ಯಾವಳಿಯ ಎಲಿಮಿನೇಟರ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡಿದ ಆರ್‌ಆರ್‌ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 243 ರನ್‌ ಗಳಿಸಿತು.

ಆರಂಭದಲ್ಲಿಯೇ ಹೈದರಾಬಾದ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ವೈಭವ್‌ ಕೇವಲ 29 ಎಸೆತದಲ್ಲಿ 5 ಬೌಂಡರಿ, 12 ಸಿಕ್ಸರ್‌ ಸೇರಿದಂತೆ 97 ರನ್‌ಗಳಿಸಿ ಪ್ರಫುಲ್ ಹಿಂಗೆ ಎಸೆತದಲ್ಲಿ ಸ್ಮರಣ್ ರವಿಚಂದ್ರನ್‌ಗೆ ಕ್ಯಾಚ್‌ ನೀಡಿ ಔಟಾದರು.

ವೈಭವ್‌ ಔಟಾಗುವ ಹೊತ್ತಿಗೆ ರಾಜಸ್ಥಾನ ಕೇವಲ 8 ಓವರ್‌ಗಳಲ್ಲಿಯೇ 125 ರನ್‌ ಕಲೆಹಾಕಿತ್ತು. ತಂಡದ ಮೊತ್ತಕ್ಕೆ ಮತ್ತೆ 12 ಸೇರುವಷ್ಟರಲ್ಲಿಯೇ ಯಶಸ್ವಿ ಜೈಸ್ವಾಲ್‌ (29) ಕೂಡ ಪೆವಿಲಿಯನ್‌ ಕಡೆಗೆ ಸಾಗಿದರು.

ಮೂರನೇ ವಿಕೆಟ್‌ಗೆ ಧ್ರುವ್ ಜುರೆಲ್ ಮತ್ತು ರಿಯಾನ್ ಪರಾಗ್ ಜೋಡಿ ಕೇವಲ 21 ಎಸೆತದಲ್ಲಿ 55 ರನ್‌ಗಳ ಜತೆಯಾಟ ನಡೆಸಿ ತಂಡದ ಮೊತ್ತವನ್ನು 13.5 ಓವರ್‌ಗಳಲ್ಲಿ 192ಕ್ಕೆ ಕೊಂಡೊಯ್ದರು. ಆದರೆ, ಆಗ ಪ್ರಫುಲ್ ಹಿಂಗೆ ಈ ಜೋಡಿಯನ್ನು ಬೇರ್ಪಡಿಸಿದರು.

ಜುರೆಲ್ 21 ಎಸೆತದಲ್ಲಿ 5 ಬೌಂಡರಿ, 3 ಸಿಕ್ಸರ್‌ನಿಂದ 50 ರನ್‌ಗಳಿಸಿ ಔಟಾದರೆ, ರಿಯಾನ್‌ ಪರಾಗ್‌ 12 ಎಸೆತದಲ್ಲಿ 26 ರನ್‌ಗಳಿಸಿ ಹೊರನಡೆದರು. ಬಳಿಕ ಡೊನೊವನ್ ಫೆರೀರಾ (12), ದಾಸುನ್ ಶನಕ (5) ಅಲ್ಪ ಕಾಣಿಕೆ ನೀಡಿ ಔಟಾದರು.

ಸನ್‌ರೈಸರ್ಸ್‌ ಹೈದರಾಬಾದ್‌ ಪರ ಪ್ರಫುಲ್ ಹಿಂಗೆ 54ಕ್ಕೆ 3 ವಿಕೆಟ್‌ ಉರುಳಿಸಿದರು. ನಿತೀಶ್ ಕುಮಾರ್ ರೆಡ್ಡಿ 12ಕ್ಕೆ 1, ಶಿವಂಗ್ ಕುಮಾರ್ 19ಕ್ಕೆ 1 ಮತ್ತು ಈಶಾನ್ ಮಾಲಿಂಗ 40ಕ್ಕೆ 1 ವಿಕೆಟ್‌ ಪಡೆದರು.