ಬೆಂಗಳೂರು: ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಅವರು ತಮ್ಮ 64ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಂಭ್ರಮದ ನಡುವೆ ಆಚರಿಸಿಕೊಂಡರು. ಹೆಬ್ಬಾಳದ ಸಮೀಪದ ನಿವಾಸದ ಬಳಿ ಶನಿವಾರ ತಡರಾತ್ರಿಯಿಂದಲೇ ಸಾವಿರಾರು ಅಭಿಮಾನಿಗಳು ಜಮಾಯಿಸಿ ತಮ್ಮ ನೆಚ್ಚಿನ ನಟನಿಗೆ ಶುಭಾಶಯ ಕೋರಿದರು.
ಭಾನುವಾರ ಬೆಳಗ್ಗೆ 11 ಗಂಟೆಯ ಬಳಿಕ ಶಿವರಾಜ್‌ಕುಮಾರ್ ಅವರು ಮನೆಯ ಹೊರಗೆ ಬಂದು ಅಭಿಮಾನಿಗಳನ್ನು ಭೇಟಿ ಮಾಡಿ ಶುಭಾಶಯಗಳನ್ನು ಸ್ವೀಕರಿಸಿದರು. ಈ ವೇಳೆ ಪತ್ನಿ ಗೀತಾ ಶಿವರಾಜ್‌ಕುಮಾರ್ ಕೂಡ ಅವರೊಂದಿಗೆ ಉಪಸ್ಥಿತರಿದ್ದರು. ಇದೇ ವೇಳೆ ಇತ್ತೀಚೆಗೆ ನಿಧನರಾದ ಗಾನಕೋಗಿಲೆ ಎಸ್. ಜಾನಕಿ ಅವರಿಗೆ ಶಿವಣ್ಣ ದಂಪತಿ ಗೌರವ ನಮನ ಸಲ್ಲಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಶಾಸಕ ಸೈಯದ್ ಯಾಸೀನ್ ನಿಧನ
ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ, ನಟ ಶ್ರೀಮುರಳಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ಅಭಿಮಾನಿಗಳಿಗೆ ವಿಶೇಷ ಉಡುಗೊರೆ : ಈ ಬಾರಿಯ ಹುಟ್ಟುಹಬ್ಬವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಿದ ಶಿವರಾಜ್‌ಕುಮಾರ್, ಅಭಿಮಾನಿಗಳಿಗೆ ‘Hat-trick Hero Family Health Card’ ಅನ್ನು ಬಿಡುಗಡೆ ಮಾಡಿದರು. ವೈದೇಹಿ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಈ ಯೋಜನೆ ಜಾರಿಗೆ ತರಲಾಗಿದ್ದು, ಅಭಿಮಾನಿಗಳು ಮತ್ತು ಅವರ ಕುಟುಂಬಗಳ ಆರೋಗ್ಯ ರಕ್ಷಣೆಯೇ ಇದರ ಮುಖ್ಯ ಉದ್ದೇಶವಾಗಿದೆ.
ಇದನ್ನೂ ಓದಿ: ಮುಂಬೈನ ಐತಿಹಾಸಿಕ ತಾಜ್ ಹೋಟೆಲ್‌ಗೆ ಬಾಂಬ್ ಬೆದರಿಕೆ ಕರೆ

ಈ ಯೋಜನೆಯಡಿ ಸುಮಾರು 2,500 ಕುಟುಂಬಗಳು, ಅಂದಾಜು 10,000 ರಿಂದ 12,000 ಜನರು ನೇರ ಪ್ರಯೋಜನ ಪಡೆಯಲಿದ್ದಾರೆ.
ಕಾರ್ಡ್‌ನ ಪ್ರಮುಖ ಸೌಲಭ್ಯಗಳು: ಒಂದು ಉಚಿತ ಆರೋಗ್ಯ ತಪಾಸಣೆ, ಉಚಿತ ತುರ್ತು ಆಂಬುಲೆನ್ಸ್ ಸೇವೆ, ಹೃದಯ ರೋಗಿಗಳ ಚಿಕಿತ್ಸೆಗೆ ಆಸ್ಪತ್ರೆ ಶುಲ್ಕದಲ್ಲಿ 25% ರಿಯಾಯಿತಿ, ಕ್ಯಾನ್ಸರ್ ಚಿಕಿತ್ಸೆಗೆ ಆಸ್ಪತ್ರೆ ಶುಲ್ಕದಲ್ಲಿ 25% ರಿಯಾಯಿತಿ, ಹೊರರೋಗಿ (OPD) ಮತ್ತು ಒಳರೋಗಿ (IPD) ಸೇವೆಗಳಲ್ಲಿ 25% ರಿಯಾಯಿತಿ, 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಚಿಕಿತ್ಸೆಗೆ 25% ರಿಯಾಯಿತಿ, ಡಯಾಲಿಸಿಸ್ ಸೇವೆಗಳಲ್ಲಿ 25% ರಿಯಾಯಿತಿ, ಆರೋಗ್ಯ ತಪಾಸಣೆ ಪ್ಯಾಕೇಜುಗಳಲ್ಲಿ 25% ರಿಯಾಯಿತಿ ಹಾಗೂ ಪ್ರಯೋಗಾಲಯ ಮತ್ತು ರೇಡಿಯಾಲಜಿ ಪರೀಕ್ಷೆಗಳಲ್ಲಿ 25% ರಿಯಾಯಿತಿ. ಆದರೆ ಔಷಧಿಗಳು, ವೈದ್ಯಕೀಯ ಉಪಕರಣಗಳು ಮತ್ತು ಇಂಪ್ಲಾಂಟ್‌ಗಳಿಗೆ ಈ ರಿಯಾಯಿತಿ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: S. ಜಾನಕಿ ನೆನಪು ಚಿರಸ್ಥಾಯಿ: ಸರ್ಕಾರಕ್ಕೆ ಹಂಸಲೇಖ ವಿಶೇಷ ಮನವಿ
2029ರವರೆಗೆ ಕಾರ್ಡ್ ಮಾನ್ಯ : ‘ಹ್ಯಾಟ್ರಿಕ್ ಹೀರೋ ಫ್ಯಾಮಿಲಿ ಹೆಲ್ತ್ ಕಾರ್ಡ್’ ಜುಲೈ 12, 2026ರಿಂದ ಜುಲೈ 12, 2029ರವರೆಗೆ ಮಾನ್ಯವಾಗಿರಲಿದೆ.
ಜಾಹೀರಾತಿನ ಸಂಭಾವನೆ ಬದಲು ಜನಸೇವೆ : ವೈದೇಹಿ ಆಸ್ಪತ್ರೆಯೊಂದಿಗೆ ಜಾಹೀರಾತು ಒಪ್ಪಂದ ಮಾಡಿಕೊಂಡಿದ್ದ ಶಿವರಾಜ್‌ಕುಮಾರ್, ಅದರ ಸಂಭಾವನೆಯನ್ನು ಸ್ವೀಕರಿಸುವ ಬದಲು ಅಭಿಮಾನಿಗಳು ಮತ್ತು ಬಡವರಿಗೆ ನೆರವಾಗುವ ಉದ್ದೇಶದಿಂದ ಈ ಹೆಲ್ತ್ ಕಾರ್ಡ್ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದಾರೆ.
“ನಾನು ಇವತ್ತು ಚೆನ್ನಾಗಿದ್ದೀನಿ ಅಂದ್ರೆ ಅದಕ್ಕೆ ವೈದೇಹಿ ಆಸ್ಪತ್ರೆಯವರೇ ಕಾರಣ. ಗೋಲ್ಡನ್ ಮಿನಿಟ್ ಮಿಸ್ ಆಗಬಾರದು ಎಂಬ ಕಾರಣಕ್ಕೆ ಈ ಕಾರ್ಡ್ ನೀಡುತ್ತಿದ್ದೇವೆ. ಯಾರ ಕೈಯಲ್ಲಿ ಆಗುತ್ತೋ ಅವರು ಬಡವರಿಗೆ ಈ ಕಾರ್ಡ್ ತಲುಪಿಸಬೇಕು. ಇದು ಅವರಿಗೆ ಸಹಾಯವಾಗಲಿ ಎನ್ನುವುದು ನನ್ನ ಆಶಯ” ಎಂದು ಶಿವರಾಜ್‌ಕುಮಾರ್ ಭಾವುಕರಾಗಿ ಹೇಳಿದರು.
ಇದನ್ನೂ ಓದಿ: PF ಟ್ರಸ್ಟ್‌ಗಳಿಗೆ ಗುಡ್ ನ್ಯೂಸ್: EPFO ಕ್ಷಮಾದಾನ ಯೋಜನೆ ಘೋಷಣೆ
‘ಸೇ ನೋ ಟು ಡ್ರಗ್ಸ್’ ಅಭಿಯಾನಕ್ಕೆ ಚಾಲನೆ : ಈ ಸಂದರ್ಭದಲ್ಲಿ ಎಸಿಪಿ ಚಂದನ್ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸೇರಿ ಶಿವರಾಜ್‌ಕುಮಾರ್ ಅವರು ‘ಸೇ ನೋ ಟು ಡ್ರಗ್ಸ್’ ಅಭಿಯಾನಕ್ಕೂ ಚಾಲನೆ ನೀಡಿದರು. “ಈ ಜೀವ ಇರುವವರೆಗೂ ನಿಮ್ಮನ್ನು ನಾನು ಮರೆಯುವುದಿಲ್ಲ. ಈ ಕಾರ್ಡ್ ಅನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ” ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.
ಒಟ್ಟಿನಲ್ಲಿ, ಈ ಬಾರಿಯ ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬ ಕೇವಲ ಸಿನಿಮೀಯ ಸಂಭ್ರಮಕ್ಕೆ ಸೀಮಿತವಾಗದೆ, ಆರೋಗ್ಯ ಮತ್ತು ಸಮಾಜ ಸೇವೆಯ ಸಂದೇಶವನ್ನು ಸಾರುವ ಮೂಲಕ ವಿಶೇಷತೆಯನ್ನು ಪಡೆದುಕೊಂಡಿದೆ.






















