ಹುಬ್ಬಳ್ಳಿ: ಪಿಲ್ಲರ್ ಹಾಕಲು ತೋಡಿದ್ದ ನೀರು ತುಂಬಿದ ಗುಂಡಿಗೆ ಬಿದ್ದು 9 ವರ್ಷದ ಬಾಲಕ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಹುಬ್ಬಳ್ಳಿಯ ವಿಜಯನಗರ ಪ್ರದೇಶದಲ್ಲಿ ನಡೆದಿದೆ.
ಮೃತ ಬಾಲಕನನ್ನು ಬಾಲಾಜಿ (9) ಎಂದು ಗುರುತಿಸಲಾಗಿದೆ. ಆತ ಹುಬ್ಬಳ್ಳಿಯ ಕೇಶ್ವಾಪುರದ ಆಜಾದ್ ನಗರ ನಿವಾಸಿಯಾಗಿದ್ದಾನೆ.
ಮಾಹಿತಿ ಪ್ರಕಾರ, ಬಾಲಾಜಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಾ ವಿಜಯನಗರ ಭಾಗಕ್ಕೆ ಬಂದಿದ್ದ. ಇದೇ ವೇಳೆ ಕಾಂಪೌಂಡ್ ಒಳಗೆ ಬಿದ್ದಿದ್ದ ತೆಂಗಿನಕಾಯಿಯನ್ನು ತೆಗೆದುಕೊಳ್ಳಲು ಹೋಗಿದ್ದಾನೆ. ಈ ಸಂದರ್ಭ ಅಲ್ಲೇ ಪಿಲ್ಲರ್ ಹಾಕಲು ತೋಡಿದ್ದ ಆಳವಾದ ಗುಂಡಿಗೆ ಆಕಸ್ಮಿಕವಾಗಿ ಬಿದ್ದಿದ್ದಾನೆ.
ಗುಂಡಿಯಲ್ಲಿ ನೀರು ತುಂಬಿಕೊಂಡಿದ್ದರಿಂದ ಬಾಲಕ ಹೊರಬರಲಾಗದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಬಾಲಕ ಗುಂಡಿಗೆ ಬೀಳುತ್ತಿದ್ದಂತೆಯೇ ಜೊತೆಗಿದ್ದ ಇಬ್ಬರು ಬಾಲಕರು ಹೆದರಿ ಸ್ಥಳದಿಂದ ಪರಾರಿಯಾಗಿದ್ದು, ನಡೆದ ವಿಷಯವನ್ನು ಯಾರಿಗೂ ತಿಳಿಸದೇ ಮೌನವಾಗಿದ್ದಾರೆ ಎನ್ನಲಾಗಿದೆ.
ಇದರಿಂದ ಬಾಲಾಜಿ ಮನೆಗೆ ವಾಪಸ್ ಬರದ ಹಿನ್ನೆಲೆಯಲ್ಲಿ ಆತಂಕಗೊಂಡ ಪೋಷಕರು ಮಗ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ತನಿಖೆ ಆರಂಭಿಸಿದ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. CCTV ದೃಶ್ಯಗಳ ಆಧಾರದ ಮೇಲೆ ಬಾಲಕ ವಿಜಯನಗರ ಭಾಗಕ್ಕೆ ಹೋಗಿರುವುದು ಪತ್ತೆಯಾಗಿದ್ದು, ಬಳಿಕ ಶೋಧ ಕಾರ್ಯಾಚರಣೆ ನಡೆಸಿದ ವೇಳೆ ಗುಂಡಿಯೊಳಗೆ ಬಾಲಕನ ಶವ ಪತ್ತೆಯಾಗಿದೆ.
ಘಟನೆ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳೀಯರಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ನಿರ್ಮಾಣ ಕಾಮಗಾರಿಗಳ ಸ್ಥಳಗಳಲ್ಲಿ ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳದಿರುವುದೇ ಈ ದುರಂತಕ್ಕೆ ಕಾರಣ ಎಂಬ ಆರೋಪವೂ ಕೇಳಿಬಂದಿದೆ.
ಈ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.























