Home Advertisement
Home ನಮ್ಮ ಜಿಲ್ಲೆ ಧಾರವಾಡ ಧಾರವಾಡದಲ್ಲಿ ಬೌದ್ಧ ಸನ್ಯಾಸಿಯ ನಿಗೂಢ ಕೊಲೆ ರಹಸ್ಯ ಬಯಲು: ಹಣಕ್ಕಾಗಿ ಕೊಂದ ಹಂತಕರು ಪೊಲೀಸ್ ಬಲೆಗೆ!

ಧಾರವಾಡದಲ್ಲಿ ಬೌದ್ಧ ಸನ್ಯಾಸಿಯ ನಿಗೂಢ ಕೊಲೆ ರಹಸ್ಯ ಬಯಲು: ಹಣಕ್ಕಾಗಿ ಕೊಂದ ಹಂತಕರು ಪೊಲೀಸ್ ಬಲೆಗೆ!

0
29

ಧಾರವಾಡ: ಇತ್ತೀಚೆಗೆ ಧಾರವಾಡ ಬೈಪಾಸ್ ಬಳಿ ಟಿಬೆಟಿಯನ್ ಮೂಲದ ಬೌದ್ಧ ಸನ್ಯಾಸಿ ತಾಶಿ ಧೊಂದೂಪ ಎಂಬುವವರ ಶವ ನಿಗೂಢ ರೀತಿಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಇದು ರಸ್ತೆ ಅಪಘಾತ ಎನ್ನಲಾಗಿತ್ತಾದರೂ, ಪೊಲೀಸರು ಸತತ ತನಿಖೆ ನಡೆಸಿ ಇದು ಹಣಕ್ಕಾಗಿ ನಡೆದ ಬರ್ಬರ ಹತ್ಯೆ ಎಂಬುವುದನ್ನು ಬಯಲಿಗೆಳೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ: ಬೌದ್ಧ ಸನ್ಯಾಸಿಗಳ ಬಳಿ ಅಪಾರ ಹಣವಿರುತ್ತದೆ ಎಂಬ ತಪ್ಪು ಕಲ್ಪನೆಯಿಂದ ಹಂತಕರು ಸಂಚು ರೂಪಿಸಿದ್ದರು. ಏಪ್ರಿಲ್ 28 ರಂದು ಮುಂಡಗೋಡದಲ್ಲಿ ಸನ್ಯಾಸಿ ತಾಶಿ ಧೊಂದೂಪ ಅವರು ವಾಕಿಂಗ್ ಮಾಡುತ್ತಿದ್ದ ವೇಳೆ ಆರೋಪಿಗಳು ಅವರನ್ನು ಕಾರಿನಲ್ಲಿ ಅಪಹರಿಸಿದ್ದರು. ಕಾರಿನಲ್ಲೇ ಹಣಕ್ಕಾಗಿ ಪೀಡಿಸಿ, ದೈಹಿಕವಾಗಿ ಹಿಂಸೆ ನೀಡಿದ್ದಾರೆ. ಆದರೆ ಸನ್ಯಾಸಿಯ ಬಳಿ ಹಣವಿಲ್ಲದಿದ್ದಾಗ ಆಕ್ರೋಶಗೊಂಡ ದುಷ್ಕರ್ಮಿಗಳು ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ನಂತರ ಪೊಲೀಸರ ಕಣ್ಣು ತಪ್ಪಿಸಲು ಶವವನ್ನು ಧಾರವಾಡ ಬೈಪಾಸ್ ಬಳಿ ಎಸೆದು ಪರಾರಿಯಾಗಿದ್ದರು.

ಪೊಲೀಸರ ಭರ್ಜರಿ ಕಾರ್ಯಾಚರಣೆ: ಯಾವುದೇ ಬಲವಾದ ಸುಳಿವು ಇಲ್ಲದಿದ್ದರೂ ಧಾರವಾಡ ಗ್ರಾಮೀಣ ಪೊಲೀಸರು ತನಿಖೆಯನ್ನು ಸವಾಲಾಗಿ ಸ್ವೀಕರಿಸಿದ್ದರು. ಮುಂಡಗೋಡಿನ ಪೆಟ್ರೋಲ್ ಬಂಕ್‌ವೊಂದರಲ್ಲಿ ಹಂತಕರು ಕಾರಿಗೆ ಸಿಎನ್‍ಜಿ ತುಂಬಿಸಲು ಇಳಿದಾಗ ಸಿಸಿಟಿವಿಯಲ್ಲಿ ಸೆರೆಯಾಗಿದ್ದರು. ಈ ದೃಶ್ಯವನ್ನೇ ಬೆನ್ನತ್ತಿದ ಪೊಲೀಸರು ವಾರದ ಕಾಲ ಹಗಲಿರುಳು ಶ್ರಮಿಸಿ, ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ತೆರಳಿ ಆರೋಪಿಗಳಾದ ಸಂಕೇತ ಯಾದವ್(24), ವೈಭವ್ ಚವ್ಹಾಣ(30) ಮತ್ತು ಸಿದ್ಧೇಶ ಭೋಸ್ಲೆ(18) ಎಂಬುವವರನ್ನು ಹೆಡೆಮುರಿ ಕಟ್ಟಿದ್ದಾರೆ. ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.