SK Home Ad
Home ನಮ್ಮ ಜಿಲ್ಲೆ ಧಾರವಾಡ ಇ.ಡಿ. ದಾಳಿ ಬೆನ್ನಲ್ಲೇ ಜಾರಕಿಹೊಳಿ ರಾಜೀನಾಮೆಗೆ ಬೆಲ್ಲದ ಆಗ್ರಹ

ಇ.ಡಿ. ದಾಳಿ ಬೆನ್ನಲ್ಲೇ ಜಾರಕಿಹೊಳಿ ರಾಜೀನಾಮೆಗೆ ಬೆಲ್ಲದ ಆಗ್ರಹ

0
36

ಹುಬ್ಬಳ್ಳಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂಪಾಯಿ ನಗದು, ವಿದೇಶಿ ಕರೆನ್ಸಿ ಹಾಗೂ ವಿದೇಶಿ ಹೂಡಿಕೆಗಳಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಹಾಗೂ ಶಾಸಕ ಅರವಿಂದ ಬೆಲ್ಲದ ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರ ಕುಟುಂಬಕ್ಕೆ ಸಂಬಂಧಿಸಿದ ವ್ಯವಹಾರಗಳು ಮತ್ತು ವಿದೇಶಿ ಹೂಡಿಕೆಗಳ ಕುರಿತು ಗಂಭೀರ ಆರೋಪಗಳು ಕೇಳಿಬಂದಿದ್ದು, ಈ ಎಲ್ಲ ವಿಚಾರಗಳ ಬಗ್ಗೆ ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಸೆಪ್ಟೆಂಬರ್ 9ರಂದು ಆರಂಭವಾದ ಇ.ಡಿ. ಶೋಧ ಕಾರ್ಯಾಚರಣೆ ಆರಂಭದಲ್ಲಿ ಕರ್ನಾಟಕದ ಬೆಂಗಳೂರು, ಬೆಳಗಾವಿ, ಗೋಕಾಕ ಸೇರಿದಂತೆ ವಿವಿಧೆಡೆ 18 ಸ್ಥಳಗಳಲ್ಲಿ ನಡೆದಿತ್ತು. ಇ.ಡಿ. ಅಧಿಕಾರಿಗಳ ಪ್ರಕಾರ, ಕಾರ್ಯಾಚರಣೆಯಲ್ಲಿ ಸುಮಾರು ₹3.3 ಕೋಟಿ ಲೆಕ್ಕಕ್ಕೆ ಸಿಗದ ಭಾರತೀಯ ಕರೆನ್ಸಿ ಹಾಗೂ ಸುಮಾರು ₹15 ಲಕ್ಷ ಮೌಲ್ಯದ ಅಮೆರಿಕನ್ ಡಾಲರ್ ಮತ್ತು ಯೂರೋ ಸೇರಿದಂತೆ ವಿದೇಶಿ ಕರೆನ್ಸಿ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ಅರವಿಂದ ಬೆಲ್ಲದ ಅವರು, “ಜಾರಕಿಹೊಳಿ ಕುಟುಂಬ ವಿದೇಶಿ ಕಂಪನಿಗಳಲ್ಲಿ ಬೃಹತ್ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ ಎಂಬ ಆರೋಪಗಳಿವೆ. ಈ ಹಣ ಎಲ್ಲಿಂದ ಬಂದಿದೆ? ವಿದೇಶಕ್ಕೆ ಹಣ ವರ್ಗಾವಣೆಯಾಗಿದೆಯೇ? ಅಕ್ರಮ ಹಣ ಅಥವಾ ಕಿಕ್‌ಬ್ಯಾಕ್ ಹಣ ಹೂಡಿಕೆಗೆ ಬಳಕೆಯಾಗಿದೆಯೇ ಎಂಬುದನ್ನು ತನಿಖಾ ಸಂಸ್ಥೆಗಳು ಪತ್ತೆಹಚ್ಚಬೇಕು” ಎಂದು ಆಗ್ರಹಿಸಿದರು.

ರಾಜೀನಾಮೆ ನೀಡಲಿ: “ಸಚಿವರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿರುವ ಸಂದರ್ಭದಲ್ಲಿ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲು ಅವರು ಸಚಿವ ಸ್ಥಾನದಲ್ಲಿರುವುದು ಸರಿಯಲ್ಲ. ನೈತಿಕ ಹೊಣೆ ಹೊತ್ತು ಸತೀಶ್ ಜಾರಕಿಹೊಳಿ ರಾಜೀನಾಮೆ ನೀಡಬೇಕು. ತನಿಖೆಯ ಮೂಲಕ ಸತ್ಯಾಸತ್ಯತೆ ಹೊರಬರಬೇಕು,” ಎಂದು ಅರವಿಂದ ಬೆಲ್ಲದ ಒತ್ತಾಯಿಸಿದರು.