ದಾವಣಗೆರೆ: ನಗರದಲ್ಲಿ ಸೋಮವಾರ ಸಂಜೆ ಸುರಿದ ಕೇವಲ ಹತ್ತು ನಿಮಿಷಗಳ ಮಳೆಗೆ ಹಲವು ರಸ್ತೆಗಳ ಮೇಲೆ ನೀರು ಹರಿದು, ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುವಂತಾಯಿತು.
ಬೆಳಗ್ಗೆಯಿಂದಲೇ ನಗರದಲ್ಲಿ ಆಗಾಗ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದರೂ ಮಳೆ ಸುರಿದಿರಲಿಲ್ಲ. ಸಂಜೆ ವೇಳೆಗೆ ಏಕಾಏಕಿ ಮಳೆ ಆರಂಭಗೊಂಡು ಕೆಲವೇ ನಿಮಿಷಗಳಲ್ಲಿ ಧಾರಾಕಾರವಾಗಿ ಸುರಿಯಿತು. ಪರಿಣಾಮವಾಗಿ ನಗರದ ಪ್ರಮುಖ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ಅಡಚಣೆ ಉಂಟಾಯಿತು.
ಸಂಜೆ ಕಚೇರಿ ಹಾಗೂ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ನೌಕರರು, ಉದ್ಯೋಗಿಗಳು ಮತ್ತು ಸಾರ್ವಜನಿಕರು ಮಳೆಯಿಂದಾಗಿ ಪರದಾಡಿದರು. ರಸ್ತೆಗಳಲ್ಲಿ ನೀರು ಹರಿಯುತ್ತಿದ್ದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರರು ನಿಧಾನವಾಗಿ ಸಂಚರಿಸಬೇಕಾಯಿತು. ಕೆಲವೆಡೆ ಪಾದಚಾರಿಗಳು ನೀರಿನಲ್ಲೇ ಸಾಗುವ ಪರಿಸ್ಥಿತಿ ನಿರ್ಮಾಣವಾಯಿತು.






















