SK Home Ad
Home ನಮ್ಮ ಜಿಲ್ಲೆ ದಾವಣಗೆರೆ ವಚನಾನಂದ ಸ್ವಾಮೀಜಿಗೆ ಜಾಮೀನು ಸಿಗುತ್ತದೆಯೇ? ನಾಳೆ ಮಹತ್ವದ ವಿಚಾರಣೆ

ವಚನಾನಂದ ಸ್ವಾಮೀಜಿಗೆ ಜಾಮೀನು ಸಿಗುತ್ತದೆಯೇ? ನಾಳೆ ಮಹತ್ವದ ವಿಚಾರಣೆ

0
55

ದಾವಣಗೆರೆ: ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪದಚ್ಯುತ ಶ್ರೀ ವಚನಾನಂದ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಫೋಕ್ಸೋ (POCSO) ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ನಿಯಮಿತ ಜಾಮೀನು (ರೆಗ್ಯುಲರ್ ಬೇಲ್) ಅರ್ಜಿಯ ವಿಚಾರಣೆಯನ್ನು ದಾವಣಗೆರೆಯ ವಿಶೇಷ ಫೋಕ್ಸೋ ನ್ಯಾಯಾಲಯ ನಾಳೆಗೆ (ಜು.1) ಮುಂದೂಡಿದೆ.

ಈ ಹಿಂದೆ ಸ್ವಾಮೀಜಿಯವರ ನಿರೀಕ್ಷಣಾ ಜಾಮೀನು (ಆಂಟಿಸಿಪೇಟರಿ ಬೇಲ್) ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ಆದರೆ, ನಿಯಮಿತ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಮೂರು ವಾರಗಳ ಕಾಲಾವಕಾಶವನ್ನು ಹೈಕೋರ್ಟ್ ನೀಡಿತ್ತು.

ಇದನ್ನೂ ಓದಿ: SIR ಪ್ರಕ್ರಿಯೆಗೆ ನೆರವಾಗಲು ಶಾಶ್ವತ ನಿವಾಸ ಪ್ರಮಾಣಪತ್ರ: CM

ಹೈಕೋರ್ಟ್ ನೀಡಿದ್ದ ಗಡುವು ಮುಕ್ತಾಯಗೊಳ್ಳುವ ಮುನ್ನವೇ, ಇದೇ ತಿಂಗಳ 27ರಂದು ವಚನಾನಂದ ಸ್ವಾಮೀಜಿಯವರು ದಾವಣಗೆರೆಯ ವಿಶೇಷ ಫೋಕ್ಸೋ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ನಿಯಮಿತ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಮಂಗಳವಾರ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡ ವೇಳೆ, ಸಂತ್ರಸ್ತೆಯ ಪರವಾಗಿ ಹಾಜರಿದ್ದ ಸರ್ಕಾರಿ ಅಭಿಯೋಜಕರು ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. ಜೊತೆಗೆ, ಆಕ್ಷೇಪಣೆ ಸಿದ್ಧಪಡಿಸಿ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

ಸರ್ಕಾರಿ ಅಭಿಯೋಜಕರ ಮನವಿಯನ್ನು ಪರಿಗಣಿಸಿದ ವಿಶೇಷ ನ್ಯಾಯಾಲಯ, ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಿ ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 1ಕ್ಕೆ ಮುಂದೂಡಿದೆ.

ಇದನ್ನೂ ಓದಿ: ಮತದಾರರಲ್ಲದವರಿಗೆ ಗ್ಯಾರಂಟಿ ಏಕೆ?‌ ಸಿಎಂ ಪ್ರಶ್ನೆ

ಹೀಗಾಗಿ, ವಚನಾನಂದ ಸ್ವಾಮೀಜಿಯವರಿಗೆ ನಿಯಮಿತ ಜಾಮೀನು ಮಂಜೂರಾಗುತ್ತದೆಯೇ ಅಥವಾ ಅರ್ಜಿ ತಿರಸ್ಕೃತವಾಗುತ್ತದೆಯೇ ಎಂಬುದು ನಾಳೆ ನಡೆಯಲಿರುವ ವಿಚಾರಣೆಯ ಬಳಿಕ ಸ್ಪಷ್ಟವಾಗಲಿದೆ.