ದಾವಣಗೆರೆ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಜನರಿಗೆ ಅನಗತ್ಯ ದಾಖಲೆಗಳ ಕಿರಿಕಿರಿ ನೀಡಲಾಗುತ್ತಿದೆ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಆರೋಪಿಸಿದ್ದಾರೆ.
ಸೋಮವಾರ ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರಂಭದಲ್ಲಿ ಜನರಲ್ಲಿ ಆಶಾಭಾವನೆ ಮೂಡಿಸಿದ್ದ ಗ್ಯಾರಂಟಿ ಯೋಜನೆಗಳು ಇದೀಗ ಆಡಳಿತಾತ್ಮಕ ಸಮಸ್ಯೆಗಳು ಹಾಗೂ ನಿಯಮಗಳ ಕಾರಣದಿಂದ ಫಲಾನುಭವಿಗಳಿಗೆ ಸಂಕಷ್ಟ ತಂದೊಡ್ಡುತ್ತಿವೆ ಎಂದು ದೂರಿದರು.
ಗೃಹಜ್ಯೋತಿ ಯೋಜನೆಯಡಿ ಪಾನ್ ಕಾರ್ಡ್, ಜಾತಿ ಪ್ರಮಾಣಪತ್ರ ಹಾಗೂ ಬಾಡಿಗೆ ಒಪ್ಪಂದದಂತಹ ದಾಖಲೆಗಳನ್ನು ಕೇಳಲಾಗುತ್ತಿದೆ ಎಂದು ಅವರು ಆರೋಪಿಸಿದರು. ಸರ್ಕಾರದ ಯೋಜನೆಗಳ ಉದ್ದೇಶವೇ ಅರ್ಹ ಜನರಿಗೆ ಸರಳವಾಗಿ ಸೌಲಭ್ಯ ಒದಗಿಸುವುದಾಗಿದ್ದರೂ, ಹೆಚ್ಚುವರಿ ದಾಖಲೆಗಳ ಬೇಡಿಕೆಯಿಂದ ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಇದೇ ವೇಳೆ ಗೃಹಲಕ್ಷ್ಮಿ ಯೋಜನೆಯ ಹಣ ನಿಯಮಿತವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿಲ್ಲ ಎಂದು ಅಫ್ಸರ್ ಕೊಡ್ಲಿಪೇಟೆ ದೂರಿದರು. ಹಣದ ನಿರೀಕ್ಷೆಯಲ್ಲಿ ಫಲಾನುಭವಿಗಳು ಬ್ಯಾಂಕ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ ಎಂದು ಅವರು ಹೇಳಿದರು.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆಯಲ್ಲಿಯೂ ಅಗತ್ಯ ಪ್ರಮಾಣದ ಬಸ್‌ಗಳನ್ನು ಒದಗಿಸದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು. ಯೋಜನೆಗಳನ್ನು ಘೋಷಿಸುವುದರ ಜೊತೆಗೆ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಮೂಲಸೌಕರ್ಯ ಮತ್ತು ಆಡಳಿತಾತ್ಮಕ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
₹32 ಸಾವಿರ ಆದಾಯ ಮಿತಿ ಪರಿಷ್ಕರಣೆಗೆ ಆಗ್ರಹ : ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ವಾರ್ಷಿಕ ₹32,000 ಆದಾಯ ಮಿತಿ ನಿಗದಿಪಡಿಸಿರುವುದು ಅವೈಜ್ಞಾನಿಕವಾಗಿದೆ ಎಂದು ಅಫ್ಸರ್ ಕೊಡ್ಲಿಪೇಟೆ ಆಕ್ಷೇಪ ವ್ಯಕ್ತಪಡಿಸಿದರು. ಈ ಆದಾಯ ಮಿತಿಯಿಂದ ಬಡವರು, ವಯೋವೃದ್ಧರು, ವಿಧವೆಯರು, ಅಂಗವಿಕಲರು ಹಾಗೂ ನಿರ್ಗತಿಕರು ಸೇರಿದಂತೆ ನಿಜವಾದ ಅಗತ್ಯವಿರುವ ಹಲವು ಮಂದಿ ಯೋಜನೆಯ ಪ್ರಯೋಜನದಿಂದ ಹೊರಗುಳಿಯುವಂತಾಗಿದೆ ಎಂದು ಹೇಳಿದರು.
ಬಡವರ ಜೀವನ ವೆಚ್ಚ ಹೆಚ್ಚುತ್ತಿರುವ ಸಂದರ್ಭದಲ್ಲಿ ಹಲವು ವರ್ಷಗಳ ಹಿಂದಿನ ಆದಾಯ ಮಾನದಂಡಗಳನ್ನು ಮುಂದುವರಿಸುವುದು ಸಮಂಜಸವಲ್ಲ. ಬಿಪಿಎಲ್ ಕಾರ್ಡ್ ಹೊಂದಿರುವ ಅರ್ಹ ಫಲಾನುಭವಿಗಳಿಗೆ ಹೆಚ್ಚುವರಿ ದಾಖಲೆಗಳ ಕಿರುಕುಳ ನೀಡದೆ ಸಾಮಾಜಿಕ ಭದ್ರತಾ ಪಿಂಚಣಿ ಸೇರಿದಂತೆ ಅರ್ಹ ಸೌಲಭ್ಯಗಳನ್ನು ತಲುಪಿಸಬೇಕು ಎಂದು ಅವರು ಆಗ್ರಹಿಸಿದರು.
ನೆರೆಯ ರಾಜ್ಯಗಳಲ್ಲಿರುವ ಆದಾಯ ಮಾನದಂಡಗಳನ್ನು ಕರ್ನಾಟಕವೂ ಪರಿಗಣಿಸಬೇಕು ಎಂದು ಅಫ್ಸರ್ ಕೊಡ್ಲಿಪೇಟೆ ಹೇಳಿದರು. ಅವರ ಪ್ರಕಾರ, ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಕರ್ನಾಟಕಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಮಿತಿಯನ್ನು ನಿಗದಿಪಡಿಸಲಾಗಿದೆ. ಹೀಗಾಗಿ ಕರ್ನಾಟಕದಲ್ಲೂ ಪ್ರಸ್ತುತ ಆದಾಯ ಮಿತಿಯನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಒತ್ತಾಯಿಸಿದರು.
ಬಿಪಿಎಲ್ ಆದಾಯ ಮಿತಿ ಹೆಚ್ಚಳಕ್ಕೆ ಕಾಯ್ದೆ ತಿದ್ದುಪಡಿ ಅಗತ್ಯ : ಬಿಪಿಎಲ್ ಕಾರ್ಡ್ ಪಡೆಯಲು ಇರುವ ಆದಾಯ ಮಿತಿಯನ್ನು ಹೆಚ್ಚಿಸುವ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ಚಿಂತನೆ ನಡೆಸುತ್ತಿರುವುದಾಗಿ ಹೇಳಿರುವುದನ್ನು ಉಲ್ಲೇಖಿಸಿದ ಅಫ್ಸರ್ ಕೊಡ್ಲಿಪೇಟೆ, ಕೇವಲ ಚಿಂತನೆ ನಡೆಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಹೇಳಿದರು.
ನಗರ ಪ್ರದೇಶದಲ್ಲಿ ₹3 ಲಕ್ಷ ಹಾಗೂ ಗ್ರಾಮೀಣ ಪ್ರದೇಶದಲ್ಲಿ ₹2 ಲಕ್ಷಕ್ಕೆ ಬಿಪಿಎಲ್ ಕಾರ್ಡ್ ಆದಾಯ ಮಿತಿಯನ್ನು ಹೆಚ್ಚಿಸುವ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಮುಂಬರುವ ಮಳೆಗಾಲದ ಅಧಿವೇಶನದಲ್ಲೇ ಅಗತ್ಯ ಕಾಯ್ದೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದರು.
ಬಿಪಿಎಲ್ ಕಾರ್ಡ್ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯ ಪಡೆಯಲು ರಾಜ್ಯದ ಜನರು ವಿವಿಧ ದಾಖಲೆಗಳನ್ನು ಹಿಡಿದುಕೊಂಡು ಕಚೇರಿಗಳಿಂದ ಕಚೇರಿಗಳಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.
“ದಾಖಲೆಗಳ ನೆಪದಲ್ಲಿ ಬಡವರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸಿ ಯೋಜನೆಗಳಿಂದ ವಂಚಿಸುವ ಯಾವುದೇ ಪ್ರಯತ್ನವನ್ನು ಎಸ್‌ಡಿಪಿಐ ತೀವ್ರವಾಗಿ ವಿರೋಧಿಸಲಿದೆ” ಎಂದು ಅಫ್ಸರ್ ಕೊಡ್ಲಿಪೇಟೆ ಎಚ್ಚರಿಕೆ ನೀಡಿದರು.
ಸರ್ಕಾರದ ಯೋಜನೆಗಳ ನಿಜವಾದ ಉದ್ದೇಶ ಅರ್ಹ ಹಾಗೂ ದುರ್ಬಲ ವರ್ಗದ ಜನರಿಗೆ ನೆರವು ನೀಡುವುದಾಗಿರಬೇಕು. ಆದ್ದರಿಂದ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಸರಳಗೊಳಿಸಿ, ಅರ್ಹ ಫಲಾನುಭವಿಗಳಿಗೆ ಯಾವುದೇ ಅನಗತ್ಯ ಅಡೆತಡೆ ಇಲ್ಲದೆ ಸೌಲಭ್ಯ ತಲುಪಿಸುವ ವ್ಯವಸ್ಥೆ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಎ.ಆರ್. ತಾಹಿರ್ ಸೇರಿದಂತೆ ಮುಖಂಡರಾದ ರಜ್ವಿ ರಿಯಾಜ್ ಅಹಮದ್, ಮೊಹಮ್ಮದ್ ಮೊಹ್ಸಿನ್, ಆಮಿರ್ ಅಹಮದ್ ಹಾಗೂ ಜಮೀವುಲ್ಲಾ ಉಪಸ್ಥಿತರಿದ್ದರು.




















