ಬೆಂಗಳೂರು: ನಗರದ ಕೆಆರ್ ಸರ್ಕಲ್‌ನಲ್ಲಿ ಎರಡು ಬಿಎಂಟಿಸಿ ಇವಿ ಬಸ್‌ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಾಯಗೊಂಡಿರುವ ಪ್ರಯಾಣಿಕರ ಆರೋಗ್ಯವನ್ನು ಸಾರಿಗೆ ಸಚಿವ ಬೈರತಿ ಸುರೇಶ್ ಶನಿವಾರ ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಗಾಯಾಳುಗಳೊಂದಿಗೆ ಮಾತನಾಡಿದ ಅವರು, ವೈದ್ಯರಿಂದ ಆರೋಗ್ಯ ಸ್ಥಿತಿಯ ಕುರಿತು ಮಾಹಿತಿ ಪಡೆದುಕೊಂಡು ಸೂಕ್ತ ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಆಸ್ಪತ್ರೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬೈರತಿ ಸುರೇಶ್, “ಕೆಆರ್ ಸರ್ಕಲ್‌ನಲ್ಲಿ ಇಂದು ಬೆಳಿಗ್ಗೆ ಎರಡು ಇವಿ ಬಿಎಂಟಿಸಿ ಬಸ್‌ಗಳ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಒಟ್ಟು 16 ಮಂದಿ ಗಾಯಗೊಂಡಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ದೇವರ ದಯೆಯಿಂದ ಕೆಲವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಕೆಲವರನ್ನು ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: KR ಸರ್ಕಲ್‌ನಲ್ಲಿ ಎರಡು BMTC ಬಸ್‌ಗಳ ನಡುವೆ ಸರಣಿ ಅಪಘಾತ
ಗಂಭೀರವಾಗಿ ಗಾಯಗೊಂಡಿರುವ ಮೂವರು ಪ್ರಯಾಣಿಕರಿಗೆ ಎಂಆರ್‌ಐ ಹಾಗೂ ಸಿಟಿ ಸ್ಕ್ಯಾನ್ ಪರೀಕ್ಷೆ ನಡೆಸಲಾಗಿದೆ ಎಂದು ಅವರು ತಿಳಿಸಿದರು. ವೈದ್ಯರು ಅವರ ಆರೋಗ್ಯದ ಮೇಲೆ ನಿರಂತರ ನಿಗಾ ಇರಿಸಿದ್ದು, ಅಗತ್ಯ ಚಿಕಿತ್ಸೆ ಮುಂದುವರಿದಿದೆ ಎಂದರು.
ಅಪಘಾತದ ಕುರಿತು ಮಾಹಿತಿ ನೀಡಿದ ಸಚಿವರು, “ಒಂದು ಬಿಎಂಟಿಸಿ ಬಸ್ ಸಿಗ್ನಲ್‌ನಲ್ಲಿ ನಿಂತಿದ್ದ ವೇಳೆ ಹಿಂದಿನಿಂದ ಬಂದ ಮತ್ತೊಂದು ಬಿಎಂಟಿಸಿ ಇವಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಘಟನೆ ನಡೆದ ಕೂಡಲೇ ಬಿಎಂಟಿಸಿ ಸಿಬ್ಬಂದಿ ಹಾಗೂ ತುರ್ತು ಸೇವಾ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯವನ್ನು ತ್ವರಿತವಾಗಿ ನಡೆಸಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ: ಹಾವೇರಿ ಮೂಲದ ಯೋಧ ಯಶೋಧರ ಕರ್ತವ್ಯದ ವೇಳೆ ಹುತಾತ್ಮ
ಅಪಘಾತದಲ್ಲಿ ಗಾಯಗೊಂಡ ಎಲ್ಲ ಪ್ರಯಾಣಿಕರ ಚಿಕಿತ್ಸಾ ವೆಚ್ಚವನ್ನು ಕರ್ನಾಟಕ ಸರ್ಕಾರವೇ ಭರಿಸಲಿದೆ ಎಂದು ಸಚಿವ ಬೈರತಿ ಸುರೇಶ್ ಭರವಸೆ ನೀಡಿದರು. ಯಾವುದೇ ಗಾಯಾಳುವಿಗೆ ಚಿಕಿತ್ಸೆಯಲ್ಲಿ ತೊಂದರೆಯಾಗದಂತೆ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಇದೇ ವೇಳೆ ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ಬಿಎಂಟಿಸಿ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸರು ಪರಿಶೀಲಿಸುತ್ತಿದ್ದು, ಚಾಲನಾ ನಿರ್ಲಕ್ಷ್ಯ ಅಥವಾ ತಾಂತ್ರಿಕ ದೋಷ ಕಾರಣವಾಗಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಅಪಘಾತದಿಂದ ಕೆಲಕಾಲ ಕೆಆರ್ ಸರ್ಕಲ್ ಪ್ರದೇಶದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ನಂತರ ಪೊಲೀಸರು ಹಾಗೂ ಬಿಎಂಟಿಸಿ ಸಿಬ್ಬಂದಿ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಸಹಜ ಸ್ಥಿತಿಗೆ ತಂದರು.






















