SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಅಪಘಾತದಲ್ಲಿ ಬಯಲಾದ ಪಡಿತರ ಅಕ್ಕಿ–ರಾಗಿಯ ಅಕ್ರಮ ಸಾಗಣೆ!

ಅಪಘಾತದಲ್ಲಿ ಬಯಲಾದ ಪಡಿತರ ಅಕ್ಕಿ–ರಾಗಿಯ ಅಕ್ರಮ ಸಾಗಣೆ!

0
46
ನಂಬರ್ ಪ್ಲೇಟ್ ಇಲ್ಲದ ಆಟೋದಲ್ಲಿ ಪಡಿತರ ಧಾನ್ಯ ಸಾಗಣೆ? ಅಪಘಾತದಿಂದ ಬಯಲಾದ ಶಂಕೆ

ಅಪಘಾತದಿಂದ ಬಯಲಾಯಿತೇ ಪಡಿತರ ಧಾನ್ಯ ಅಕ್ರಮ ಸಾಗಣೆ? ಆಟೋ ವಶಕ್ಕೆ

ದಾವಣಗೆರೆ: ಫಲಾನುಭವಿಗಳಿಗೆ ವಿತರಿಸಬೇಕಾಗಿದ್ದ ಪಡಿತರ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತೆಂಬ ಅನುಮಾನಕ್ಕೆ ಕಾರಣವಾದ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ. ಪಡಿತರ ಧಾನ್ಯಗಳನ್ನು ಸಾಗಿಸುತ್ತಿದ್ದ ಎನ್ನಲಾದ ಆಟೋವೊಂದು ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಬಳಿಕ, ಅದರಲ್ಲಿದ್ದ ಅಕ್ಕಿ ಮತ್ತು ರಾಗಿ ಚೀಲಗಳು ಹರಿದು ಧಾನ್ಯಗಳು ರಸ್ತೆಯಲ್ಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಶನಿವಾರ ಮಧ್ಯಾಹ್ನ ನಗರದ ಬಿ.ಪಿ. ರಸ್ತೆಯ ಅಪೂರ್ವ ಹೋಟೆಲ್ ಸಮೀಪದ ರಾಮರಾಜ್ ಕಾಟನ್ ಬಟ್ಟೆ ಅಂಗಡಿ ಮುಂಭಾಗದಲ್ಲಿ ಘಟನೆ ನಡೆದಿದೆ.

ನಂಬರ್ ಪ್ಲೇಟ್ ಇಲ್ಲದ ಆಟೋದಲ್ಲಿ ಕೆಎಂಎಫ್ ಶೀಲು ಹೊಂದಿರುವ ಚೀಲಗಳಲ್ಲಿ ಸುಮಾರು 75 ಕೆ.ಜಿ. ತೂಕದ ನಾಲ್ಕು ಪ್ಯಾಕೆಟ್ ಅಕ್ಕಿ ಹಾಗೂ ಮೂರು ಪ್ಯಾಕೆಟ್ ರಾಗಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಈ ವೇಳೆ ಆಟೋ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಆಟೋದ ಗಾಜು ಪುಡಿಪುಡಿಯಾಗಿದ್ದು, ವಾಹನದಲ್ಲಿದ್ದ ಅಕ್ಕಿ ಮತ್ತು ರಾಗಿ ಚೀಲಗಳು ಹರಿದು ಹೋಗಿವೆ. ಪರಿಣಾಮ ಧಾನ್ಯಗಳು ರಸ್ತೆಯ ಮೇಲೆ ಎಲ್ಲೆಂದರಲ್ಲಿ ಬಿದ್ದಿವೆ. ಇದನ್ನು ಗಮನಿಸಿದ ಸಾರ್ವಜನಿಕರು ಪಡಿತರ ಧಾನ್ಯಗಳ ಸಾಗಣೆಯ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

ಬೈಕ್ ಸವಾರನಿಗೆ ಗಾಯ – ಆಟೋ ಚಾಲಕ ಪರಾರಿ : ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣ ನೆರವಿಗೆ ಧಾವಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದ್ದಾರೆ. ಆದರೆ ಅಪಘಾತ ಸಂಭವಿಸುತ್ತಿದ್ದಂತೆಯೇ ಆಟೋ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇದರಿಂದ ಪಡಿತರ ಧಾನ್ಯಗಳನ್ನು ಸಾಗಿಸುತ್ತಿದ್ದವರು ಯಾರು ಮತ್ತು ಅವುಗಳ ಮೂಲವೇನು ಎಂಬ ಪ್ರಶ್ನೆಗಳು ಮತ್ತಷ್ಟು ಗಂಭೀರವಾಗಿವೆ.

ಆಹಾರ ಇಲಾಖೆ ಅಧಿಕಾರಿಗಳಿಂದ ಧಾನ್ಯ, ಆಟೋ ವಶ : ಘಟನೆ ಗಮನಿಸಿದ ಸಾರ್ವಜನಿಕರು ತಕ್ಷಣ ಸಂಬಂಧಪಟ್ಟ ಆಹಾರ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ರಸ್ತೆಯಲ್ಲಿ ಬಿದ್ದಿದ್ದ ಪಡಿತರ ಅಕ್ಕಿ, ರಾಗಿ ಹಾಗೂ ಆಟೋವನ್ನು ವಶಕ್ಕೆ ಪಡೆದಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ಆಟೋದಲ್ಲಿ ಕೆಎಂಎಫ್ ಶೀಲು ಹೊಂದಿರುವ ಚೀಲಗಳಲ್ಲಿ ಪಡಿತರ ಧಾನ್ಯಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

ಧಾನ್ಯಗಳ ಮೂಲ ಯಾವುದು? : ಫಲಾನುಭವಿಗಳಿಗೆ ವಿತರಿಸಬೇಕಾದ ಪಡಿತರ ಧಾನ್ಯಗಳು ಅಕ್ರಮವಾಗಿ ಸಾಗಿಸಲಾಗುತ್ತಿತ್ತೆ? ಧಾನ್ಯಗಳು ಎಲ್ಲಿಂದ ಬಂದವು? ಎಲ್ಲಿಗೆ ಸಾಗಿಸಲಾಗುತ್ತಿತ್ತು? ನಂಬರ್ ಪ್ಲೇಟ್ ಇಲ್ಲದ ಆಟೋದಲ್ಲಿ ಅವುಗಳನ್ನು ಸಾಗಿಸುತ್ತಿದ್ದವರು ಯಾರು? ಎಂಬ ಹಲವು ಪ್ರಶ್ನೆಗಳು ಇದೀಗ ಸಾರ್ವಜನಿಕರಲ್ಲಿ ಮೂಡಿವೆ.

ಪಡಿತರ ವ್ಯವಸ್ಥೆಯ ಮೂಲಕ ಬಡವರು ಹಾಗೂ ಅರ್ಹ ಫಲಾನುಭವಿಗಳಿಗೆ ವಿತರಿಸಬೇಕಾದ ಧಾನ್ಯಗಳು ಅಕ್ರಮವಾಗಿ ಬೇರೆಡೆ ಸಾಗಾಟವಾಗಿದ್ದರೆ, ಇದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆಹಚ್ಚುವುದು ಅಗತ್ಯವಾಗಿದೆ.

ಆಹಾರ ಇಲಾಖೆ ಹಾಗೂ ಪೊಲೀಸರು ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ, ಧಾನ್ಯಗಳ ಮೂಲ, ಸಾಗಣೆ ಉದ್ದೇಶ ಹಾಗೂ ಚಾಲಕನ ಗುರುತು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಬೇಕು. ಪಡಿತರ ಧಾನ್ಯಗಳ ಅಕ್ರಮ ಸಾಗಣೆ ದೃಢಪಟ್ಟಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.