SK Home Ad
Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ: ಭದ್ರೆ ನೀರಿಗಾಗಿ ಬಂದ್ – ವ್ಯಾಪಾರಸ್ಥರಿಗೆ BJP ಮುಖಂಡರ ಮನವಿ

ದಾವಣಗೆರೆ: ಭದ್ರೆ ನೀರಿಗಾಗಿ ಬಂದ್ – ವ್ಯಾಪಾರಸ್ಥರಿಗೆ BJP ಮುಖಂಡರ ಮನವಿ

0
67

ದಾವಣಗೆರೆ: ಭದ್ರಾ ಮೇಲ್ದಂಡೆ ಯೋಜನೆಗೆ ಭದ್ರಾ ಜಲಾಶಯದಿಂದ ಮೂರು ಟಿಎಂಸಿ ಅಡಿ ನೀರು ಹರಿಸುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಕರೆ ನೀಡಿದ್ದ ದಾವಣಗೆರೆ ಬಂದ್‌ಗೆ ಸಹಕರಿಸುವಂತೆ ಬಿಜೆಪಿ ಮುಖಂಡರು ನಗರದ ವ್ಯಾಪಾರಸ್ಥರು, ಅಂಗಡಿ ಮಾಲೀಕರು, ಆಟೋ ಚಾಲಕರು ಹಾಗೂ ಬಸ್ ಮಾಲೀಕರಿಗೆ ಮನವಿ ಮಾಡಿದರು.

ಮಂಗಳವಾರ ಬೆಳಗ್ಗೆ 11.26ರ ಸುಮಾರಿಗೆ ಮಾಜಿ ಸಚಿವ ಎಂ. ರೇಣುಕಾಚಾರ್ಯ ಸೇರಿದಂತೆ ಬಿಜೆಪಿ ಮುಖಂಡರು ತಂಡಗಳಾಗಿ ನಗರದ ವಿವಿಧ ಬಡಾವಣೆಗಳು ಹಾಗೂ ಹಳೆಯ ಭಾಗದ ಮಾರುಕಟ್ಟೆ ಪ್ರದೇಶಗಳಲ್ಲಿ ತೆರೆದ ವ್ಯಾನ್‌ಗಳಲ್ಲಿ ತೆರಳಿ, ಮೈಕ್ ಮೂಲಕ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದರು.

‘ಇದು ನೀರಿಗಾಗಿ ಮಾಡಿರುವ ಬಂದ್. ದಾವಣಗೆರೆ ಜನರ ಹಿತಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ತಾವು ಸ್ವಯಂಪ್ರೇರಿತರಾಗಿ ವ್ಯಾಪಾರ-ವಹಿವಾಟು ಬಂದ್ ಮಾಡುವ ಮೂಲಕ ಸಹಕರಿಸಬೇಕು’ ಎಂದು ಮುಖಂಡರು ಮನವಿ ಮಾಡಿದರು. ಈ ಸಂದರ್ಭದಲ್ಲಿ ತೆರೆದಿದ್ದ ರಿಲಯನ್ಸ್ ಸ್ಮಾರ್ಟ್ ಬಜಾರ್‌ಗೆ ಪ್ರತಿಭಟನಾಕಾರರು ತೆರಳಿ, ಮಳಿಗೆಯೊಳಗಿನ ಲೈಟ್‌ಗಳನ್ನು ಆಫ್ ಮಾಡಿಸಿ ಬಂದ್‌ಗೆ ಸಹಕರಿಸುವಂತೆ ಮಾಡಿದರು. ಬಳಿಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೂ ತೆರಳಿ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದರು.

ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವು ವ್ಯಾಪಾರಸ್ಥರು ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸಿದರೆ, ಇನ್ನು ಕೆಲವರು ಅಂಗಡಿ ಬಾಗಿಲು ತೆರೆಯದೆ ಬಂದ್‌ಗೆ ಬೆಂಬಲ ನೀಡಿದರು. ನಗರದ ಕೆಲ ಹೋಟೆಲ್‌ಗಳು ಮುಚ್ಚಿದ್ದರೆ, ಇನ್ನು ಕೆಲವು ಹೋಟೆಲ್‌ಗಳು ಎಂದಿನಂತೆ ತೆರೆದಿದ್ದವು.

ಆಟೋ ಸಂಚಾರದಲ್ಲಿ ಹೆಚ್ಚಿನ ವ್ಯತ್ಯಯ ಕಂಡುಬರದೆ ಎಂದಿನಂತೆ ಸಾಗುತ್ತಿದ್ದರೆ, ನಗರ ಸಾರಿಗೆ ಬಸ್‌ಗಳ ಸಂಚಾರ ವಿರಳವಾಗಿತ್ತು. ನಗರದ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ಬಂದ್‌ಗೆ ಸಹಕರಿಸುವಂತೆ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದರು.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.