SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಬಿಜೆಪಿ ಪಾದಯಾತ್ರೆ ಅಡಿಕೆ ಬೆಳೆಗಾರರಿಗಾಗಿ ಅಲ್ಲ, ಆರೋಗ್ಯ ಸುಧಾರಣೆಗಾಗಿ ನಡಿಗೆ

ಬಿಜೆಪಿ ಪಾದಯಾತ್ರೆ ಅಡಿಕೆ ಬೆಳೆಗಾರರಿಗಾಗಿ ಅಲ್ಲ, ಆರೋಗ್ಯ ಸುಧಾರಣೆಗಾಗಿ ನಡಿಗೆ

0
35

ದಾವಣಗೆರೆ: ಬಿಜೆಪಿ ಮುಖಂಡರು ನಡೆಸುತ್ತಿರುವ ಪಾದಯಾತ್ರೆಗೂ ಅಡಿಕೆ ಬೆಳೆಗಾರರ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ. ಅದು ಕೇವಲ ಅವರ ಆರೋಗ್ಯ ಸುಧಾರಣೆಗಾಗಿ ನಡೆಸುತ್ತಿರುವ ವಾಕಿಂಗ್ ಅಷ್ಟೇ ಎಂದು ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ವ್ಯಂಗ್ಯವಾಡಿದರು.

ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಡಿಕೆ ಬೆಳೆಗಾರರ ಹಿತಾಸಕ್ತಿಯ ವಿಚಾರದಲ್ಲಿ ರಾಜಕೀಯ ಮಾಡುವ ಪ್ರಶ್ನೆಯೇ ಇಲ್ಲ. ರೈತರ ಮತದಿಂದ ತಾವು ಶಾಸಕರಾಗಿದ್ದು, ಅಡಿಕೆ ಬೆಳೆಗಾರರಿಗೆ ಯಾವುದೇ ಅನ್ಯಾಯವಾದರೂ ಅವರ ಪರವಾಗಿ ಮೊದಲಿಗೆ ಧ್ವನಿ ಎತ್ತಲು ಸಿದ್ಧ ಎಂದು ಹೇಳಿದರು.

ಗುಟ್ಕಾ ನಿಷೇಧ ಹೊಸ ವಿಚಾರವಲ್ಲ. 2001ರಿಂದಲೇ ಗುಟ್ಕಾ ನಿಷೇಧ ಜಾರಿಯಲ್ಲಿದೆ. ಆದರೆ ಅಡಿಕೆ ನಿಷೇಧವಾಗಲಿದೆ ಎಂಬುದು ಸುಳ್ಳು ಸುದ್ದಿ. ನಿಜವಾಗಿಯೂ ಅಡಿಕೆ ನಿಷೇಧದ ಪರಿಸ್ಥಿತಿ ಎದುರಾದರೆ ಲಕ್ಷಾಂತರ ರೈತರನ್ನು ಒಗ್ಗೂಡಿಸಿ ತಾವೇ ಪಾದಯಾತ್ರೆ ನಡೆಸುವುದಾಗಿ ಬಸವರಾಜ ಶಿವಗಂಗಾ ಹೇಳಿದರು.

ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ. ರೈತರ ಹಿತ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ರೈತರಿಗೆ ಯಾವುದೇ ರೀತಿಯ ತೊಂದರೆ ಉಂಟಾದಲ್ಲಿ ಅವರೊಂದಿಗೆ ನಿಲ್ಲುವುದಾಗಿ ಅವರು ಭರವಸೆ ನೀಡಿದರು.

ಇದೇ ವೇಳೆ ರಾಜ್ಯದಲ್ಲಿನ ನೀರಿನ ಪರಿಸ್ಥಿತಿ ಕುರಿತು ಮಾತನಾಡಿದ ಶಾಸಕ ಶಿವಗಂಗಾ, ನೀರು ಹೇರಳವಾಗಿದ್ದಾಗ ಅದರ ಮಹತ್ವವನ್ನು ಅರಿಯದೆ ಪೋಲು ಮಾಡುತ್ತೇವೆ. ನೀರಿನ ಕೊರತೆ ಎದುರಾದಾಗ ಮಾತ್ರ ಅದರ ಬೆಲೆ ತಿಳಿಯುತ್ತದೆ ಎಂದರು.

ನದಿ, ಜಲಾಶಯ ಹಾಗೂ ಲಭ್ಯವಿರುವ ನೀರಿನ ಸದ್ಬಳಕೆ ಮತ್ತು ಸಮರ್ಪಕ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಭವಿಷ್ಯದ ನೀರಿನ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ನೀರಿನ ಸಂರಕ್ಷಣೆ ಹಾಗೂ ಸಮರ್ಪಕ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಅವರು ಹೇಳಿದರು.