ದಾವಣಗೆರೆ: ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಜಗಳೂರನ್ನು ಕೈಬಿಟ್ಟಿರುವ ಬಗ್ಗೆ ಅಸಮಾಧಾನಗೊಂಡಿರುವ ಶಾಸಕ ಬಿ. ದೇವೇಂದ್ರಪ್ಪ ಅವರೊಂದಿಗೆ ಮಾತನಾಡಿದ್ದು, ಈ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೂ ಚರ್ಚಿಸಿದ್ದೇನೆ. ಎರಡನೇ ಹಂತದ ಬರಪೀಡಿತ ತಾಲೂಕುಗಳ ಘೋಷಣೆ ವೇಳೆ ಜಗಳೂರು ತಾಲೂಕನ್ನು ಸೇರ್ಪಡೆ ಮಾಡಲಾಗುವುದು ಎಂದು ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಭರವಸೆ ನೀಡಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದಲೇ ಕರೆ ಮಾಡಿಸಿ ಮಾತನಾಡಿಸಲಾಗಿದೆ. ಎರಡನೇ ಹಂತದಲ್ಲಿ ಜಗಳೂರನ್ನು ಬರಪೀಡಿತ ತಾಲೂಕು ಎಂದು ಘೋಷಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದರು.
ಕಲ್ಯಾಣ ಕರ್ನಾಟಕಕ್ಕೆ ಜಗಳೂರು ತಾಲೂಕನ್ನು ಸೇರಿಸಬೇಕೆಂಬ ಶಾಸಕ ದೇವೇಂದ್ರಪ್ಪ ಅವರ ಒತ್ತಾಯವನ್ನೂ ಗಮನಿಸಿದ್ದೇನೆ. ಸಹಜವಾಗಿಯೇ ಅತೀ ಹೆಚ್ಚು ಬರದ ಪರಿಸ್ಥಿತಿ ಎದುರಿಸುತ್ತಿರುವ ಜಗಳೂರನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವುದು ಅವರಿಗೆ ನೋವು ತಂದಿದೆ. ಅವರ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದರು.
“ಉದ್ದೇಶಪೂರ್ವಕವಾಗಿ ಜಗಳೂರನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿಲ್ಲ. ಇನ್ನೂ ಎರಡನೇ ಹಂತದ ಘೋಷಣೆಗೆ ಅವಕಾಶವಿದೆ. ಆ ಹಂತದಲ್ಲಿ ಜಗಳೂರು ಖಂಡಿತವಾಗಿಯೂ ಬರಪೀಡಿತ ತಾಲೂಕು ಎಂದು ಘೋಷಣೆಯಾಗಲಿದೆ. ಜಗಳೂರು ಜಿಲ್ಲೆಯಲ್ಲೇ ಅತೀ ಹೆಚ್ಚು ಬರಪೀಡಿತ ತಾಲೂಕು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ” ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ನಡೆಗೆ ಜಗಳೂರು ಶಾಸಕ ದೇವೇಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಹೆಚ್ಚು ಮಾತನಾಡುವುದು ಸೂಕ್ತವಲ್ಲ. ಇದು ಇಂದಿನ ಪರಿಸ್ಥಿತಿಯಲ್ಲ, ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ ಎಂದರು.
ಉಸ್ತುವಾರಿ ಸಚಿವರು ಯಾವಾಗ, ಯಾವ ತಾಲೂಕುಗಳಿಗೆ ಭೇಟಿ ನೀಡಿದ್ದಾರೆ ಎಂಬುದನ್ನು ಗಮನಿಸಬೇಕು. ಉಸ್ತುವಾರಿ ಸಚಿವರು ಮಾತ್ರವಲ್ಲ, ನಾವೂ ಜಗಳೂರು ಶಾಸಕರೊಂದಿಗೆ ಇದ್ದೇವೆ. ಮುಖ್ಯಮಂತ್ರಿಗಳೇ ದೇವೇಂದ್ರಪ್ಪ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಉಸ್ತುವಾರಿ ಸಚಿವರು ನಮ್ಮ ತಾಲೂಕಿಗೂ ಬಂದಿಲ್ಲ. ಇದು ತಲೆತಲಾಂತರದಿಂದ ನಡೆದುಕೊಂಡು ಬಂದ ಪದ್ಧತಿಯಾಗಿದ್ದು, ಹೈಕಮಾಂಡ್ ಮಟ್ಟದಲ್ಲಿ ನಿರ್ಧಾರವಾಗುವ ವಿಚಾರವಾಗಿದೆ ಎಂದರು.
“ನಾವು, ನೀವು ಮಾತನಾಡುವುದರಿಂದ ಏನೂ ಆಗುವುದಿಲ್ಲ. ಸುಮ್ಮನೆ ನನ್ನ ಹಾಗೂ ಸಚಿವರ ಮಧ್ಯೆ ವೈಮನಸ್ಸು ಇದೆ ಎಂಬಂತೆ ಆಗುತ್ತದೆ. ಏನಾದರೂ ಫಲಿತಾಂಶ ಬರುತ್ತದೆ ಎಂದಾದರೆ ಮಾತನಾಡೋಣ” ಎಂದು ಅವರು ಮಾರ್ಮಿಕವಾಗಿ ಹೇಳಿದರು.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಗೆ ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಮಾತನಾಡುವ ಅಗತ್ಯವಿಲ್ಲ. ನಮ್ಮ ಪಕ್ಷದ ವಿಚಾರವನ್ನು ನಮ್ಮ ನಾಯಕರು ನೋಡಿಕೊಳ್ಳುತ್ತಾರೆ ಎಂದು ಬಸವರಾಜ ಶಿವಗಂಗಾ ಹೇಳಿದರು.
ಹಿಂದೆ ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ತಾವು ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಗೆ ಆಗ್ರಹಿಸಿದ್ದೆ. ಈ ವಿಚಾರ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ಹಾಗೂ ಹೈಕಮಾಂಡ್‌ಗೂ ತಿಳಿದಿದೆ. ಆದರೆ, ಈವರೆಗೂ ಯಾವುದೇ ಬದಲಾವಣೆ ಆಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.




















