ದಾವಣಗೆರೆ: ‘ಸತೀಶ್ ಅಣ್ಣನಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಲೋಕೋಪಯೋಗಿ ಸಚಿವ ಸ್ಥಾನ ಎರಡನ್ನೂ ನೀಡಿದ್ದರು. ಬಳಿಕ ಅಧ್ಯಕ್ಷ ಸ್ಥಾನವನ್ನು ಕಿತ್ತುಕೊಂಡರು. ಆದರೂ ಅವರು ಏನೂ ಕೇಳಲಿಲ್ಲ. ಮುಖ್ಯಮಂತ್ರಿ ಆಗುವ ಆಸೆಯಿಂದ ಶೇ. 7ರಷ್ಟು ಮೀಸಲಾತಿ ಬಗ್ಗೆ ಅವರು ಬಾಯಿ ಬಿಡಲಿಲ್ಲ. ಸಿದ್ದರಾಮಯ್ಯನವರು ಹೇಳಿದ್ದಕ್ಕೆಲ್ಲ ಸುಮ್ಮನೆ ಹೂಂ ಎಂದರು ಎಂದು ಸತೀಶ್ ಜಾರಕಿಹೊಳಿ ವಿರುದ್ಧ ಮಾಜಿ ಸಚಿವ ರಾಜುಗೌಡ ವಾಗ್ದಾಳಿ ನಡೆಸಿದರು.
ನಗರದ ದಾವಣಗೆರೆ-ಹರಿಹರ ಅರ್ಬನ್ ಕೋ ಬ್ಯಾಂಕ್ ಸಮುದಾಯ ಭವನದಲ್ಲಿ ಭಾನುವಾರ ಬಿಜೆಪಿ ಎಸ್‌ಟಿ ಮೋರ್ಚಾ ವತಿಯಿಂದ ‘ಸಂವಿಧಾನ ಬದ್ಧ ಶೇ. 7ರ ಎಸ್‌ಟಿ ಮೀಸಲಾತಿ ಜಾರಿಯಾಗಲೇ ಬೇಕು’ ಎಂಬ ಕುರಿತು ಆಯೋಜಿಸಿದ್ದ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಸತೀಶ್ ಅಣ್ಣ, ಅಂದು ನಮ್ಮ ಸಮುದಾಯದ ಶೇ. 4ರಷ್ಟು ಮೀಸಲಾತಿಯನ್ನು ಕಟ್ ಮಾಡಿದ ತಕ್ಷಣವೇ, ‘ನನ್ನ ಸಮುದಾಯಕ್ಕೆ ಅನ್ಯಾಯವಾಗಿದೆ, ಇಂದೇ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ನೀವು ಸವಾಲು ಹಾಕಬೇಕಿತ್ತು. ಹಾಗೆ ಮಾಡಿದ್ದರೆ ನಿಮ್ಮ ಸ್ಥಾನವನ್ನು ಮುಟ್ಟುವ ತಾಕತ್ತು ಯಾರಿಗೂ ಇರುತ್ತಿರಲಿಲ್ಲ. ನಿಮ್ಮ ಜಾಗದಲ್ಲಿ ರಮೇಶ್ ಜಾರಕಿಹೊಳಿ ಇದ್ದಿದ್ದರೆ ಸುಮ್ಮನೆ ಬಿಡುತ್ತಿದ್ದರೇ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಾಲ್ಮೀಕಿ ಸಮುದಾಯದ ಮೀಸಲಾತಿಯನ್ನು ಶೇ. 7ರಿಂದ ಶೇ. 3ಕ್ಕೆ ಇಳಿಸಲಾಗಿದೆ. ಶೇ. 4ರಷ್ಟು ಮೀಸಲಾತಿಯನ್ನು ಕಡಿತಗೊಳಿಸಿದರೂ, ಕಾಂಗ್ರೆಸ್‌ನಲ್ಲಿರುವ ಸಮುದಾಯದ 15 ಶಾಸಕರು ಒಬ್ಬರೂ ಬಾಯಿ ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರದ ಆಸೆಗೆ ಬಿದ್ದು ನಮ್ಮ ಶಾಸಕರು ಸುಮ್ಮನಾಗಿದ್ದಾರೆ. ಟಾಂಗಾ ಕುದುರೆಗೆ ಮುಂದೆ ಹುಲ್ಲು ತೋರಿಸಿ ಓಡಿಸುವಂತೆ, ‘ನಿನಗೆ ಮಂತ್ರಿ ಮಾಡ್ತೀವಿ, ನಿನಗೆ ಮಂತ್ರಿ ಮಾಡ್ತೀವಿ’ ಎಂದು ಆಸೆ ತೋರಿಸಿ ಕಾಂಗ್ರೆಸ್ ಸರ್ಕಾರ ನಮ್ಮ ಶಾಸಕರನ್ನು ನಿಯಂತ್ರಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದರು.





















