SK Home Ad
Home ನಮ್ಮ ಜಿಲ್ಲೆ ದಾವಣಗೆರೆ ದೇವಿ ಚಿನ್ನ ಕದ್ದು ಮಾರಾಟ ಮಾಡಿದ ಪೂಜಾರಿ, ವಿಡಿಯೋ ವೈರಲ್‌

ದೇವಿ ಚಿನ್ನ ಕದ್ದು ಮಾರಾಟ ಮಾಡಿದ ಪೂಜಾರಿ, ವಿಡಿಯೋ ವೈರಲ್‌

0
1

ದಾವಣಗೆರೆ: ಮಧ್ಯ ಕರ್ನಾಟಕದ ಆರಾಧ್ಯ ಶಕ್ತಿದೇವತೆಯಾದ ದಾವಣಗೆರೆಯ ಶ್ರೀ ದುರ್ಗಾಂಬಿಕಾ (ದುಗ್ಗಮ್ಮ) ದೇವಸ್ಥಾನದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ನಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ದೇವಿಯ ಚಿನ್ನಾಭರಣವನ್ನು ದೇವಸ್ಥಾನದ ಪೂಜಾರಿಯೇ ಕಳವು ಮಾಡಿ ಮಾರಾಟ ಮಾಡಿರುವ ಆರೋಪವು ದೇವಸ್ಥಾನ ಸಮಿತಿಯ ಲೆಕ್ಕಪತ್ರ ಪರಿಶೀಲನೆ ವೇಳೆ ಬಹಿರಂಗಗೊಂಡಿದೆ. ಈ ಸಂಬಂಧ ನಡೆದ ಸಮಿತಿಯ ಸಭೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಪ್ರಕರಣ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.

ದೇವಸ್ಥಾನ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಕಳೆದ ಶನಿವಾರ ರಾತ್ರಿ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯಲ್ಲಿ ಪೂಜಾರಿ ಹಾಗೂ ಚಿನ್ನ ಖರೀದಿಸಿದ ವ್ಯಾಪಾರಿಯನ್ನು ಕರೆಸಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಕಳವುಗೊಂಡಿರುವ ಎಲ್ಲ ಚಿನ್ನಾಭರಣವನ್ನು ವಾರದೊಳಗೆ ಮರಳಿಸಬೇಕು, ಇಲ್ಲವಾದರೆ ಇಬ್ಬರ ವಿರುದ್ಧ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿರುವ ದೃಶ್ಯಗಳು ವೈರಲ್‌ ಆದ ವಿಡಿಯೋದಲ್ಲಿ ಕಂಡು ಬಂದಿವೆ. ಆದರೆ, ದೇವಿಯ ಎಷ್ಟು ಪ್ರಮಾಣದ ಚಿನ್ನಾಭರಣ ಕಳುವಾಗಿದೆ ಎಂಬ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ.

ಇದೇ ವೇಳೆ, ಈ ಪ್ರಕರಣ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಯಶವಂತರಾವ್ ಜಾಧವ್, ದೇವಸ್ಥಾನದಲ್ಲಿ ದೇವರ ಚಿನ್ನಾಭರಣ ಕಳ್ಳತನವಾಗಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ದೇವಸ್ಥಾನ ಸಮಿತಿಯ ಅಧ್ಯಕ್ಷ ಎಸ್.ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಸಮಿತಿಯ ಎಲ್ಲ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರಕರಣದ ಕುರಿತು ಅಧಿಕೃತ ಪೊಲೀಸ್ ದೂರು ದಾಖಲಾಗಿದೆಯೇ ಹಾಗೂ ತನಿಖೆ ಆರಂಭವಾಗಿದೆಯೇ ಎಂಬ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.