SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗದಿದ್ದದ್ದೇ ಒಳ್ಳೆಯದಾಯಿತು!

ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗದಿದ್ದದ್ದೇ ಒಳ್ಳೆಯದಾಯಿತು!

0
129

ದಾವಣಗೆರೆ: ತಮ್ಮ ಸಹೋದರ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗದೇ ಇದ್ದದ್ದೇ ಒಳ್ಳೆಯದಾಯಿತು. ಯಾಕಂದರೆ, 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದರಿಂದ ನಾಯಕ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತಿತ್ತು ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.

ನಗರದ ದಾವಣಗೆರೆ-ಹರಿಹರ ಅರ್ಬನ್ ಕೋ ಬ್ಯಾಂಕ್ ಸಮುದಾಯ ಭವನದಲ್ಲಿ ಭಾನುವಾರ ಬಿಜೆಪಿ ಎಸ್‌ಟಿ ಮೋರ್ಚಾ ವತಿಯಿಂದ ‘ಸಂವಿಧಾನ ಬದ್ಧ ಶೇ. 7ರ ಎಸ್‌ಟಿ ಮೀಸಲಾತಿ ಜಾರಿಯಾಗಲೇ ಬೇಕು’ ಎಂಬ ಕುರಿತು ಆಯೋಜಿಸಿದ್ದ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಒಂದು ವೇಳೆ ಸಹೋದರ ಅಧ್ಯಕ್ಷರಾಗಿದ್ದರೆ, ಇಡೀ ನಮ್ಮ ಸಮಾಜ ಕೆಡುತ್ತಿತ್ತು. ನೋಡಿ, ಲಿಂಗಾಯತರು, ಒಕ್ಕಲಿಗರು, ಕುರುಬರು ಎಲ್ಲರೂ ಇದ್ದಾರೆ. ಆದರೆ, ನಮ್ಮ ಸಮಾಜ ಬಂದಾಗ ಕಾಂಗ್ರೆಸ್ ಸೋತರೆ, ನಾಯಕ ಸಮಾಜದ ಲೀಡರ್‌ಶಿಪ್‌ನಿಂದಲೇ ಸೋತರು ಎಂದು ನಮ್ಮ ಮೇಲೆ ಅಪವಾದ ಹೊರಿಸುತ್ತಿದ್ದರು. ಅದಕ್ಕೆ ದೇವರು ಒಳ್ಳೆಯದು ಮಾಡಿದ್ದಾನೆ ಎಂದು ಮಾರ್ಮಿಕವಾಗಿ ನುಡಿದರು.

ಬಿಜೆಪಿ ಸರ್ಕಾರದ ತಪ್ಪಿನಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂತು: ಬಿಜೆಪಿ ಸರ್ಕಾರದ ತಪ್ಪಿನಿಂದಲೇ ಇವತ್ತು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಾವು ಅಧಿಕಾರದಲ್ಲಿದ್ದಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲಾ ಸಮಾಜವನ್ನು ಜೊತೆಗೆ ಕರೆದುಕೊಂಡು ಹೋಗಿದ್ದರೆ ನಾವು ಸೋಲುತ್ತಿರಲಿಲ್ಲ. ಗೆದ್ದ ಮೇಲೆ ಒಂದೇ ಸಮುದಾಯದ ರಾಜಕೀಯ ಮಾಡಬಾರದು. ಅದನ್ನು ನಾವು ಹೋರಾಟದ ಮೂಲಕ ಗಟ್ಟಿಯಾಗಿ ಎದುರಿಸಬೇಕು ಎಂದರು.

9ನೇ ಶೆಡ್ಯೂಲ್ ಬಗ್ಗೆ ಕಾಂಗ್ರೆಸ್ ನಾಯಕರಿಂದ ತಪ್ಪು ಮಾಹಿತಿ: ಕಾಂಗ್ರೆಸ್‌ನ ನಾಯಕರು 9ನೇ ಶೆಡ್ಯೂಲ್ ಬಗ್ಗೆ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. 9ನೇ ಶೆಡ್ಯೂಲ್ ಮಾಡಲು ಕೇಂದ್ರದಲ್ಲಿ ಮೋದಿ ಸರ್ಕಾರವಿದೆ, ಅದರಿಂದ ತೊಂದರೆಯಾಗುತ್ತದೆ ಎನ್ನುವುದು ತಪ್ಪು. 9ನೇ ಶೆಡ್ಯೂಲ್‌ಗೂ ನಮ್ಮ ಮೀಸಲಾತಿಗೂ ಸಂಬಂಧವಿಲ್ಲ. ದೇಶದ ಹಿತದೃಷ್ಟಿಯಿಂದ ಕಾನೂನು ಮಾಡುವಾಗ ಮಾತ್ರ 9ನೇ ಶೆಡ್ಯೂಲ್ ಬರುತ್ತದೆ. ಮೀಸಲಾತಿ ಅದಕ್ಕೆ ಒಳಪಡುವುದಿಲ್ಲ. ಕಾಂಗ್ರೆಸ್ ನಾಯಕರು ರಾಜ್ಯದ ಜನತೆಗೆ ತಪ್ಪು ಮಾಹಿತಿ ನೀಡುತ್ತಿರುವುದನ್ನು ಪ್ರತಿಯೊಬ್ಬ ಹಂತದಲ್ಲೂ ನಾವು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸ್ಪಷ್ಟಪಡಿಸಿದರು.