SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಪಾಕಿಸ್ತಾನ ಉಗ್ರರ ಸಂಪರ್ಕ ಶಂಕೆ: ಹರಿಹರಕ್ಕೆ ಆಗಮಿಸಿದ NIA ತಂಡ

ಪಾಕಿಸ್ತಾನ ಉಗ್ರರ ಸಂಪರ್ಕ ಶಂಕೆ: ಹರಿಹರಕ್ಕೆ ಆಗಮಿಸಿದ NIA ತಂಡ

0
71

ಹರಿಹರ ಶಂಕಿತ ಉಗ್ರ ಪ್ರಕರಣ: ಎನ್‌ಐಎ-ಎಟಿಎಸ್ ಜಂಟಿ ತನಿಖೆ ಆರಂಭ – ಶಂಕಿತ ಉಗ್ರನಿಗೆ ಸ್ಥಳೀಯ ನೆರವು ಸಿಕ್ಕಿತೇ? ಡಿಜಿಟಲ್ ಸಾಕ್ಷ್ಯಗಳ ಬೆನ್ನು ಹತ್ತಿದ ತನಿಖಾ ಸಂಸ್ಥೆಗಳು

ದಾವಣಗೆರೆ: ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ ಪತ್ತೆಯಾಗಿರುವ ಶಂಕಿತ ಉಗ್ರನ ಪ್ರಕರಣವು ಗಂಭೀರ ಸ್ವರೂಪ ಪಡೆದಿದ್ದು, ಪ್ರಕರಣದ ತನಿಖೆಯನ್ನು ತೀವ್ರಗೊಳಿಸಲು ರಾಷ್ಟ್ರಿಯ ತನಿಖಾ ಸಂಸ್ಥೆ (NIA) ಹಾಗೂ ಭಯೋತ್ಪಾದನಾ ನಿಗ್ರಹ ದಳ (ATS) ಅಧಿಕಾರಿಗಳ ವಿಶೇಷ ತಂಡಗಳು ಶುಕ್ರವಾರ ಹರಿಹರಕ್ಕೆ ಆಗಮಿಸಿವೆ. ಸ್ಥಳೀಯ ಪೊಲೀಸರೊಂದಿಗೆ ಜಂಟಿಯಾಗಿ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಹಲವು ಮಹತ್ವದ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.

ಮೂಲತಃ ಉತ್ತರ ಪ್ರದೇಶದವನಾದ 20 ವರ್ಷದ ಸುಹೇಲ್ ಎಂಬಾತ ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಾ ನೆಲೆಸಿದ್ದ. ಈತನ ವಿರುದ್ಧ ದೊರೆತಿದ್ದ ಮಾಹಿತಿ ಆಧರಿಸಿ ಹರಿಹರ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದರು. ವೈದ್ಯಕೀಯ ಪರೀಕ್ಷೆಯ ಬಳಿಕ ಆರೋಪಿಯನ್ನು ಹರಿಹರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಪ್ರಕರಣ: ಟ್ರಸ್ಟ್‌ನ ಇಬ್ಬರು ಪ್ರಮುಖರ ರಾಜೀನಾಮೆ

ನ್ಯಾಯಾಲಯದ ಆದೇಶದ ಬೆನ್ನಲ್ಲೇ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಎನ್‌ಐಎ ಹಾಗೂ ಎಟಿಎಸ್ ಅಧಿಕಾರಿಗಳು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತಾತ್ಕಾಲಿಕ ಶಿಬಿರ ಸ್ಥಾಪಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎನ್ನಲಾದ ಸುಹೇಲ್, ಶಾಂತಿಯುತ ಬನ್ನಿಕೋಡು ಗ್ರಾಮವನ್ನೇ ತನ್ನ ಅಡಗುದಾಣವನ್ನಾಗಿ ಮಾಡಿಕೊಂಡಿದ್ದು ಹೇಗೆ ಎಂಬ ಪ್ರಶ್ನೆ ತನಿಖೆಯ ಕೇಂದ್ರಬಿಂದುವಾಗಿದೆ. ಜೊತೆಗೆ ಸ್ಥಳೀಯವಾಗಿ ಯಾರಾದರೂ ಆಶ್ರಯ ಅಥವಾ ನೆರವು ನೀಡಿದ್ದಾರೆಯೇ, ಮನೆ ಬಾಡಿಗೆ ವ್ಯವಸ್ಥೆ ಮಾಡಿಕೊಟ್ಟವರಿದ್ದಾರೆಯೇ ಎಂಬ ವಿಚಾರಗಳನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ಹೊಸ ನಿಯಮ: ನಕಲಿ ಔಷಧ ತಡೆಗೆ QR code ಅಸ್ತ್ರ

ರಾಜ್ಯ ಅಥವಾ ದೇಶದ ವಿವಿಧ ಭಾಗಗಳಲ್ಲಿ ಯಾವುದೇ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಲಾಗಿತ್ತೇ, ಸಾಮಾಜಿಕ ಜಾಲತಾಣಗಳು ಅಥವಾ ರಹಸ್ಯ ಡಿಜಿಟಲ್ ಗುಂಪುಗಳ ಮೂಲಕ ಸಂಪರ್ಕ ಸಾಧಿಸಲಾಗಿತ್ತೇ ಎಂಬುದರ ಕುರಿತೂ ತನಿಖೆ ಮುಂದುವರಿದಿದೆ. ಆರೋಪಿಯ ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಡಿಜಿಟಲ್ ಸಾಧನಗಳ ಮಾಹಿತಿಯನ್ನು ಸಂಗ್ರಹಿಸಿ ತಾಂತ್ರಿಕ ವಿಶ್ಲೇಷಣೆ ನಡೆಸಲಾಗುತ್ತಿದೆ.

ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ತನಿಖಾ ಸಂಸ್ಥೆಗಳು ಎಲ್ಲಾ ಆಯಾಮಗಳಲ್ಲೂ ಪರಿಶೀಲನೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಹತ್ವದ ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ.