ನೂತನ ಸಚಿವ ಕೆ.ಎಸ್. ಬಸವಂತಪ್ಪಗೆ ದಾವಣಗೆರೆಯಲ್ಲಿ ಅದ್ಧೂರಿ ಸ್ವಾಗತ: ನೀರ್ಥಡಿಯಿಂದ ಮಾಯಕೊಂಡದವರೆಗೆ ಸಂಭ್ರಮ
ದಾವಣಗೆರೆ: ನೂತನ ಸಚಿವರಾಗಿ ನೇಮಕಗೊಂಡ ಬಳಿಕ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅವರು ಮೊದಲ ಬಾರಿಗೆ ದಾವಣಗೆರೆ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.
ಸಚಿವರ ಆಗಮನದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಗಡಿ ಭಾಗದಿಂದಲೇ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ನೀರ್ಥಡಿ ಗ್ರಾಮದ ಗೇಟ್ ಬಳಿಯಿಂದ ಸಚಿವರಿಗೆ ಸ್ವಾಗತ ಕಾರ್ಯಕ್ರಮ ಆರಂಭಗೊಂಡಿದ್ದು, ಬಳಿಕ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ ಅಭಿನಂದಿಸಿದರು.
ಜಿಲ್ಲೆಯ ಗಡಿ ಭಾಗವಾದ ನೀರ್ಥಡಿ ಗ್ರಾಮದ ಗೇಟ್ ಬಳಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸಚಿವ ಕೆ.ಎಸ್. ಬಸವಂತಪ್ಪ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ. ಶೇಖರ್ ಸೇರಿದಂತೆ ಹಲವು ಅಧಿಕಾರಿಗಳು ಸಚಿವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು. ಸಚಿವರಾಗಿ ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದಲೂ ಶುಭಾಶಯ ಕೋರಲಾಯಿತು.
ಕಾರ್ಯಕರ್ತರಿಂದ ಭರ್ಜರಿ ಸ್ವಾಗತ : ಮಾಯಕೊಂಡ ವಿಧಾನಸಭಾ ಕ್ಷೇತ್ರದ ನೂರಾರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ನೀರ್ಥಡಿ ಗ್ರಾಮದ ಗೇಟ್ ಬಳಿ ಜಮಾಯಿಸಿದ್ದರು. ಸಚಿವರ ಆಗಮನವಾಗುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು, ಹೂವಿನ ಹಾರಗಳನ್ನು ಹಾಕಿ ಅಭಿನಂದಿಸಿದರು. ಸಚಿವರ ವಾಹನ ಸಾಗುವ ಮಾರ್ಗದುದ್ದಕ್ಕೂ ಜನರು ಜಮಾಯಿಸಿ ಶುಭಾಶಯ ಕೋರಿದರು. ಹಲವೆಡೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೂವಿನ ಹಾರ ಹಾಕಿ ಸಚಿವರನ್ನು ಸ್ವಾಗತಿಸಿದರು.
ಬೈಕ್-ಕಾರುಗಳ ಬೃಹತ್ ರ‍್ಯಾಲಿ : ನೀರ್ಥಡಿ ಗ್ರಾಮದ ಗೇಟ್ ಬಳಿಯಿಂದ ಸಚಿವ ಬಸವಂತಪ್ಪ ಅವರನ್ನು ಬೈಕ್ ಹಾಗೂ ಕಾರುಗಳ ಬೃಹತ್ ರ‍್ಯಾಲಿ ಮೂಲಕ ಹೆಬ್ಬಾಳು ಟೋಲ್‌ವರೆಗೆ ಕರೆತರಲಾಯಿತು. ರ‍್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು. ಸಚಿವರ ಆಗಮನದ ಹಿನ್ನೆಲೆಯಲ್ಲಿ ಮಾರ್ಗದುದ್ದಕ್ಕೂ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಕಂಡುಬಂತು.
ಬೃಹತ್ ಸೇಬಿನ ಹಾರ : ಹೆಬ್ಬಾಳು ಟೋಲ್ ಬಳಿ ಕಾರ್ಯಕರ್ತರು ಸಚಿವರಿಗೆ ಬೃಹತ್ ಸೇಬಿನ ಹಾರ ಹಾಕಿ ವಿಶೇಷವಾಗಿ ಅಭಿನಂದಿಸಿದರು. ಬಳಿಕ ಆನಗೋಡು ಗ್ರಾಮದಲ್ಲಿಯೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬೃಹತ್ ಸೇಬಿನ ಹಾರ ಹಾಕಿ ಸಚಿವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಸಚಿವರ ಆಗಮನದ ಹಿನ್ನೆಲೆಯಲ್ಲಿ ಆನಗೋಡು ಗ್ರಾಮದಲ್ಲಿಯೂ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಶ್ರೀ ಮರಳಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ : ಆನಗೋಡು ಕಾರ್ಯಕ್ರಮದ ಬಳಿಕ ಸಚಿವ ಕೆ.ಎಸ್. ಬಸವಂತಪ್ಪ ಅವರು ಶ್ರೀ ಮರಳಸಿದ್ದೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನಕ್ಕೆ ಆಗಮಿಸಿದ ಸಚಿವರನ್ನು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸ್ವಾಗತಿಸಿ ಶುಭ ಹಾರೈಸಿದರು. ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಚಿವರು ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಕೆಲಕಾಲ ಸಂವಾದ ನಡೆಸಿದರು.
ಮಾಯಕೊಂಡದಲ್ಲಿ ಅಭಿನಂದನಾ ಸಮಾರಂಭ : ಬಳಿಕ ಕಾರ್ಯಕರ್ತರು ಸಚಿವ ಬಸವಂತಪ್ಪ ಅವರನ್ನು ಆತ್ಮೀಯವಾಗಿ ಬೀಳ್ಕೊಟ್ಟು, ಮಾಯಕೊಂಡದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭಕ್ಕೆ ಕಳುಹಿಸಿಕೊಟ್ಟರು. ನೂತನ ಸಚಿವರಾಗಿ ನೇಮಕಗೊಂಡ ಬಳಿಕ ಬಸವಂತಪ್ಪ ಅವರು ಮೊದಲ ಬಾರಿಗೆ ದಾವಣಗೆರೆ ಜಿಲ್ಲೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿತ್ತು.
ಸಚಿವರ ಸ್ವಾಗತ ಕಾರ್ಯಕ್ರಮದ ಮೂಲಕ ಮಾಯಕೊಂಡ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆಯ ಉತ್ಸಾಹವೂ ಪ್ರದರ್ಶನಗೊಂಡಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಮತ್ತು ಜನರ ನಿರೀಕ್ಷೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಆಶಯವನ್ನು ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ.





















